ವೀರಸೇನಾನಿ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ

ಜನವರಿ 28, ವಿಶ್ವವಿಖ್ಯಾತ ವೀರಸೇನಾನಿ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ ಅವರ ಜನ್ಮದಿನ. ಈ ದಿನಾಂಕವನ್ನು ನೆನಪಿಸಿಕೊಳ್ಳುವುದೆಂದರೆ... ಸ್ಥಳೀಯ ಜನರಿಗೆ ಒಂದು ಬಗೆಯ ವಿಶೇಷ ಪುಳಕ, ಸೇನಾಪ್ರಿಯರಿಗೆ ಮೈ ಜುಂ ಎನಿಸುವ ಸಂಭ್ರಮ. 28.1.2019ನೇ ಸೋಮವಾರ ಫೀ.ಮಾ. ಕಾರ್ಯಪ್ಪ ಅವರ 120ನೇ ಹುಟ್ಟಿದ ಹಬ್ಬವನ್ನು ನಾಡಿನಾದ್ಯಂತ ಸಡಗರದಿಂದ ಆಚರಿಸಲಾಗುತ್ತದೆ.

ಸ್ವತಂತ್ರ ಭಾರತದಲ್ಲಿ ಶಿಸ್ತು, ಸಂಯಮ, ಸಮಯಪ್ರಜ್ಞೆ, ಕರ್ತವ್ಯಪ್ರಜ್ಞೆ, ದೇಶಸೇವೆ, ರಾಷ್ಟ್ರಭಕ್ತಿಯಂತಹ ಉದಾತ್ತ ಗುಣಗಳಿಗೆ ಹೆಚ್ಚಿನ ಮಹತ್ವ ನೀಡಿದ ರಾಷ್ಟ್ರಮಟ್ಟದ ಕೆಲವೇ ಕೆಲವು ಮುಖಂಡರುಗಳಲ್ಲಿ ಕೊಡಂದೇರ ಎಂ. ಕಾರ್ಯಪ್ಪ ಅವರು ಅಗ್ರಗಣ್ಯರು. “ಶಿಸ್ತು ಅಂದರೆ ಕಾರ್ಯಪ್ಪ, ಕಾರ್ಯಪ್ಪ ಅಂದರೆ ಶಿಸ್ತು” ಎನ್ನುವಷ್ಟರ ಮಟ್ಟಿಗೆ ಇವರು ಶಿಸ್ತನ್ನು ರೂಢಿಸಿಕೊಂಡ ಸಮರ್ಥ ಸರದಾರ ಆಗಿದ್ದರು.

19 ರ ಹರೆಯದ ಸೇನಾಧಿಕಾರಿ

ಕೊಡಗಿನ ಕಂದಾಯ ಇಲಾಖೆಯ ಪಾರುಪತ್ಯಗಾರರಾಗಿ ಶನಿವಾರಸಂತೆಯಲ್ಲಿ ಸರಕಾರಿ ಸೇವೆಯಲ್ಲಿದ್ದ ಕೊಡಂದೇರ ಮಾದಪ್ಪ - ಕಾವೇರಮ್ಮ ದಂಪತಿಗಳ ಸುಪುತ್ರನಾಗಿ 28-1-1899 ರಂದು ಜನನ. ಮಡಿಕೇರಿ - ಕುಶಾಲನಗರ - ಮದ್ರಾಸಿನಲ್ಲಿ ವಿದ್ಯಾಭ್ಯಾಸ. ವಿದ್ಯಾರ್ಥಿ ದಿಸೆಯಲ್ಲಿಯೇ ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ಅತೀವ ಆಸಕ್ತಿ. ಬಾಲ್ಯದಲ್ಲಿಯೇ ಸಮಯ ಪರಿಪಾಲನೆ, ನೇರ ನಡೆನುಡಿ, ಶಿಸ್ತಿನ ಗುಣ ಇವರಿಗೆ ಅಂಟಿಕೊಂಡಿತ್ತು.

1900 ರ ಆದಿಕಾಲದಲ್ಲಿ ಭಾರತದಲ್ಲಿ ಬ್ರಿಟೀಷ್ ಆಡಳಿತ ಬಲವಾಗಿ ಬೇರೂರಿತ್ತು. ಆ ಕಾಲಘಟ್ಟದಲ್ಲಿ ಸೇನಾಧಿಕಾರಿಗಳ ಹುದ್ದೆಯೂ ಸೇರಿದಂತೆ, ಸರಕಾರಿ ವಲಯದ ಉನ್ನತ ಹುದ್ದೆಗಳು ಬಹುತೇಕ ಬ್ರಿಟೀಷರಿಗೆ ಮೀಸಲಿರಿಸಿದಂತಿತ್ತು. 1918 ರಲ್ಲಿ ಸೇನಾಪಡೆಯಲ್ಲಿ ಅಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ “ಕಿಂಗ್ಸ್ ಕಮೀಷನ್” ಸಂದರ್ಶನ ಏರ್ಪಾಡಾಗಿತ್ತು. ಕೊಡಂದೇರ ಎಂ. ಕಾರ್ಯಪ್ಪನವರೂ ಓರ್ವ ಅಭ್ಯರ್ಥಿಯಾಗಿ ಅದಮ್ಯ ಆತ್ಮವಿಶ್ವಾಸದಿಂದ ಆಯ್ಕೆ ಸಂದರ್ಶನದಲ್ಲಿ ಪಾಲ್ಗೊಂಡರು. ತನ್ನ ವಿಶೇಷ ವ್ಯಕ್ತಿತ್ವ, ಸಾಮಥ್ರ್ಯ, ಸಾಧನೆಯ ಫಲವಾಗಿ ಕೆ.ಎಂ. ಕಾರ್ಯಪ್ಪ ಅವರು 19ನೇ ಪ್ರಾಯದಲ್ಲಿ... ಭಾರತೀಯ ಸೇನೆಯ “ಸೆಕೆಂಡ್ ಲೆಫ್ಟಿನೆಂಟ್” ಹುದ್ದೆಗೆ ಆಯ್ಕೆಯಾದರು. ಅಲ್ಲಿಂದ ಮುಂದೆ ಕಾರ್ಯಪ್ಪನವರು ಬದುಕಿನ ಮಾರ್ಗದಲ್ಲಿ ಹಿಂದೆ ತಿರುಗಿ ನೋಡಿದ್ದಿಲ್ಲ. ಲೆಫ್ಟಿನೆಂಟ್ - ಕ್ಯಾಪ್ಟನ್ - ಮೇಜರ್ - ಲೆಫ್ಟಿನೆಂಟ್ ಕರ್ನಲ್ - ಕರ್ನಲ್ - ಬ್ರಿಗೇಡಿಯರ್ - ಮೇಜರ್ ಜನರಲ್ - ಲೆಫ್ಟಿನೆಂಟ್ ಜನರಲ್ - ಜನರಲ್ - ಕಮಾಂಡರ್ ಇನ್ ಚೀಫ್ - ಫೀಲ್ಡ್ ಮಾರ್ಷಲ್... ಹೀಗೇ ಸ್ವ ಸಾಮಥ್ರ್ಯದ ಬಲದಿಂದ ಒಂದೊಂದೇ ಮೆಟ್ಟಿಲುಗಳನ್ನು ಏರಿ, ಸೇನಾ ಪರಂಪರೆಯಲ್ಲಿ ಅಪರೂಪದ ದಾಖಲೆಗೆ ನಾಂದಿಯಾದರು.

ಜನರಲ್ ಪದವಿ... ಜಗ ಮೆಚ್ಚಿಗೆಯ ಸಾಧನೆ

15-1-1948 ರಂದು ಕಾರ್ಯಪ್ಪನವರು... ಆಗ ಭಾರತ ಸೇನೆಯ ಮುಖ್ಯಸ್ಥರಾಗಿದ್ದ ಬ್ರಿಟನಿನ ಜನರಲ್ ಸರ್ ಫ್ರಾನ್ಸಿಸ್ ಬುಚರ್ ಅವರಿಂದ “ಜನರಲ್” ಪದವಿಯ ಅಧಿಕಾರವನ್ನು ಪಡೆದುಕೊಂಡರು. ಈ ಸುದಿನವನ್ನು ಸೇನಾಸ್ಫೂರ್ತಿಯ ದಿನವನ್ನಾಗಿ ನೆನಪಿಸಿಕೊಳ್ಳಲು ಭಾರತ ರಾಷ್ಟ್ರಮಟ್ಟದಲ್ಲಿ “ಸೇನಾದಿನ” (ಂಡಿmಥಿ ಆಚಿಥಿ) ಎಂದು ವರ್ಷಂಪ್ರತಿ ಆಚರಿಸಲಾಗುತ್ತಿದೆ.

1947 ರಲ್ಲಿ ಭಾರತವು ಬ್ರಿಟೀಷರಿಂದ ಸ್ವತಂತ್ರವಾದ ಸಂದರ್ಭದಲ್ಲಿ... ಭಾರತೀಯ ಸೇನಾಪಡೆ ಸ್ವಲ್ಪಮಟ್ಟಿಗೆ ಅತಂತ್ರವಾಗಿತ್ತು. ಬ್ರಿಟೀಷರ ದೀರ್ಘಕಾಲದ ಆಡಳಿತ ವ್ಯವಸ್ಥೆಯ ಪರಿಣಾಮದಿಂದ ಸೈನ್ಯ ಹಾಗೂ ಸೈನ್ಯಾಡಳಿತ ಇಂಗ್ಲಿಷರ ಪ್ರಭಾವಾದಿಗಳಿಗೆ ಒಗ್ಗಿ ಹೋಗಿತ್ತು. ಈ ಸಂದಿಗ್ದ ಪರಿಸ್ಥಿತಿಯಲ್ಲಿ ದೇಶೀಯ ಸೈನ್ಯವನ್ನು ಭಾರತೀಕರಣಗೊಳಿಸುವುದು ದೊಡ್ಡ ಸವಾಲಿನ ಪ್ರಶ್ನೆಯಾಗಿತ್ತು. ಜೊತೆಗೆ ಅಖಂಡ ಭಾರತ ದೇಶವು ಭಾರತ-ಪಾಕಿಸ್ತಾನ ಎಂದು ಇಬ್ಭಾಗವಾಗಿ, ಅದಕ್ಕನುಸಾರವಾಗಿ ಸೈನ್ಯವನ್ನೂ-ಸೈನಿಕರನ್ನೂ ವಿಭಜಿಸಬೇಕಾಗಿತ್ತು. ಅತ್ಯಂತ ಕ್ಲಿಷ್ಟವೂ, ಮಹತ್ತರವೂ, ಸೂಕ್ಷ್ಮವೂ, ಸವಾಲೂ ಆಗಿದ್ದ ಈ ಕಾರ್ಯವನ್ನು ಕಾರ್ಯಪ್ಪನವರು ತನ್ನ ದಿಟ್ಟ ನಿಲುವು, ಅಪ್ರತಿಮ ಧೈರ್ಯ, ನಿಷ್ಪಕ್ಷಪಾತ ಧೋರಣೆ, ಕಠಿಣ ಪರಿಶ್ರಮ, ನಿರಂತರ ಪ್ರಯತ್ನದ ಮೂಲಕ... ಪ್ರಪಂಚವೇ ನಿಬ್ಬೆರಗಾಗುವಂತೆ ಸಾಧಿಸಿದರು. ದೇಶ ವಿಭಜನೆಯ ಸಂದರ್ಭದಲ್ಲಿ ಎಲ್ಲೆಡೆ ಅರಾಜಕತೆ ಎದ್ದು ಕಾಣುತ್ತಿದ್ದರೂ, ಸೇನಾಪಡೆಗಳ ಮುಂದಾಲೋಚನೆ, ಅವಿಶ್ರಾಂತ ಪ್ರಯತ್ನ, ಅತಿಯಾದ ಸಂಯಮ, ಶಿಸ್ತುಬದ್ಧ ನಡಾವಳಿಕೆಯ ಫಲದಿಂದ ಅಲ್ಪಾವಧಿಯಲ್ಲಿ ಪರಿಸ್ಥಿತಿ ಹತೋಟಿಗೆ ಬಂದು, ಉಭಯ ದೇಶಗಳ ಜನರು ನಿಟ್ಟುಸಿರು ಬಿಡುವಂತಾಯಿತು. ಈ ಎಲ್ಲಾ ಕ್ಲಿಷ್ಟ ಸನ್ನಿವೇಶಗಳಲ್ಲಿ ಸೇನಾನಾಯಕ ಕಾರ್ಯಪ್ಪನವರ ಪಾತ್ರ ಅವಿಸ್ಮರಣೀಯವಾದುದು.

ಸೇವಾವಧಿಯಲ್ಲಿ ಕಾರ್ಯಪ್ಪನವರು 2 ನೇ ಮಹಾಯುದ್ಧ, ಭಾರತ-ಪಾಕಿಸ್ತಾನ ಸಮರ, ಜಮ್ಮು ಕಾಶ್ಮೀರದ ಜಟಿಲ ಸಮಸ್ಯೆ... ಇತ್ಯಾದಿಗಳನ್ನು ಅತೀವ ಚಾಕಚಕ್ಯತೆಯಿಂದ ಎದುರಿಸಿದ್ದರು. ಹೀಗೆ, 1918 ರಿಂದ 1953 ರ ವರೆಗೆ ಸರಿಸುಮಾರು 35 ವರ್ಷಗಳ ಸುದೀರ್ಘ ಸೇವೆಯ ನಂತರ ಜನರಲ್ ಕಾರ್ಯಪ್ಪನವರು ಸೇವೆಯಿಂದ ನಿವೃತ್ತರಾದರು. ನಿವೃತ್ತ ಬದುಕಿಗೆ ಡೆಲ್ಲಿ, ಮುಂಬಯಿ, ಲಂಡನ್, ಪ್ಯಾರಿಸ್... ಇಂತಹ ಯಾವುದೇ ರಂಗಿನ ನಗರದ ಆಕರ್ಷಣೆಗೆ ಒಳಗಾಗದೆ, ನೇರವಾಗಿ ಮಡಿಕೇರಿಯ “ರೋಶನಾರ” ಮನೆಗೆ ಬಂದು ನೆಲೆಸುತ್ತಾರೆ.

“ರೋಶನಾರ”ದಲ್ಲಿ ಶಿಸ್ತಿನ ಸಾಕಾರಮೂರ್ತಿ

ಸುಂದರ ಮರಕಾಡಿನ ಮಧ್ಯೆ ನೆಲೆಸಿದ್ದರೂ... ಕಾಫಿ ತೋಟ ಮಾಡುವುದು, ಆಸ್ತಿ ವೃದ್ಧಿಸುವುದು, ಸಂಪೂರ್ಣವಾಗಿ ವಿರಮಿಸುವುದು... ಇಂತಹ ವ್ಯಾಮೋಹಕ್ಕೆ ಒಳಗಾಗದ ಕಾರ್ಯಪ್ಪನವರು... ಸಮಾಜಸೇವೆ... ದೇಶಸೇವೆಗೆ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡರು. ಯುವಜನರೂ ಸೇರಿದಂತೆ ಭಾರತೀಯ ಪ್ರಜೆಗಳಲ್ಲಿ ರಾಷ್ಟ್ರೀಯ ಪ್ರಜ್ಞೆ, ಶಿಸ್ತಿನ ಪ್ರಜ್ಞೆ, ಸಮಯಪ್ರಜ್ಞೆ, ಕರ್ತವ್ಯಪ್ರಜ್ಞೆ ಮೂಡಿಸುವಂತಹ ಕಾಯಕದಲ್ಲಿ ತೊಡಗಿಸಿಕೊಂಡ ಕಾರ್ಯಪ್ಪನವರು... ದೇಶದ ಉದ್ದಗಲಕ್ಕೆ ನವತರುಣನಂತೆ ಓಡಾಡಿದರು.

ಶಾಲೆ-ಕಾಲೇಜು-ವಿಶ್ವವಿದ್ಯಾನಿಲಯ-ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡು, ಯುವಜನರಿಗೆ ಸ್ಫೂರ್ತಿಯ ಮಾತುಗಳನ್ನಾಡಿದರು. ಸರ್ವ ಸಮರ್ಥ ಪ್ರಜೆಯಾಗಲು ಹುರಿದುಂಬಿಸಿದರು. ಪ್ರತೀ ಸಭೆಯ ಕೊನೆಯಲ್ಲಿ “ಜೈಹಿಂದ್” ಎಂಬ ಘೋಷಣೆಯನ್ನು ಜೋರಾಗಿ ಹೇಳಿಸಿದರು. ಈ ಬಗೆಯ ಒಡನಾಟಗಳ ಮಧ್ಯೆ ಭಾರತ ಸರಕಾರ ಅವರನ್ನು ಆಸ್ಟ್ರೇಲಿಯಾ - ನ್ಯೂಜಿಲೆಂಡ್ ದೇಶದಲ್ಲಿ ಭಾರತದ ಹೈಕಮೀಷನರ್ ಪದವಿಗೆ ನೇಮಿಸಿತು. ಈ ಉನ್ನತ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿದ ಕಾರ್ಯಪ್ಪನವರು ಮರಳಿ ಮಡಿಕೇರಿಗೆ ಬಂದು, “ರೋಶನಾರ”ದಲ್ಲಿದ್ದುಕೊಂಡು, ಮಾಮೂಲಿನ ಸೇವಾಕಾರ್ಯವನ್ನು ಮುಂದುವರಿಸಿದರು.

ಯುವಜನರ ಸಭೆ ಸಮಾರಂಭಗಳಿಗೆ ತೆರಳಿದ ಸಂದರ್ಭದಲ್ಲಿ... ತಾವೇ ಬರೆದು ಮುದ್ರಿಸಿದ “ಯುವಜನರಿಗೆ ಕರೆ” “ಕಾಲ್ ಟು ಯೂತ್” (ಅಚಿಟಟ ಣo ಙouಣh) ಎನ್ನುವ ಕಿರುಹೊತ್ತಿಗೆಯನ್ನು ಪ್ರಕಟಿಸಿ ಹಂಚುತ್ತಿದ್ದರು. ಯುವಜನರಿಗೆ ಬದುಕಿನಲ್ಲಿ “ಆeeಠಿಛಿuಜ” ಎನ್ನುವ ಶಬ್ದವನ್ನು ನೆನಪಿಟ್ಟುಕೊಂಡು, ಅದರಂತೆ ಮುನ್ನಡೆಯಲು ಪ್ರೇರೇಪಿಸುತ್ತಿದ್ದರು.

ಆ = ಆisಛಿiಠಿಟiಟಿe, ಇ = ಇಟಿಜuಡಿಚಿಟಿಛಿe, ಇ = ಇಟಿಣhusiಚಿsm, P = Poಟiಣeಟಿess, ಅ = ಅouಡಿಚಿge, U = Uಟಿseಟಜಿishಟಿess, ಆ = ಆeಣeಡಿmiಟಿಚಿಣioಟಿ

ಫೀಲ್ಡ್ ಮಾರ್ಷಲ್ ಗೌರವ ಪದವಿ

ಭಾರತ ಸರಕಾರ 1986 ರಲ್ಲಿ ಕೊಡಂದೇರ ಎಂ. ಕಾರ್ಯಪ ಅವರಿಗೆ 87 ನೇ ವರ್ಷ ಪ್ರಾಯದಲ್ಲಿ “ಫೀಲ್ಡ್ ಮಾರ್ಷಲ್” ಗೌರವ ಪದವಿಯನ್ನು ನೀಡಿತು. ಇದು ಭೂಸೇನೆಯಲ್ಲಿ ಪರಮೋಚ್ಛವಾದ, ಬಹಳ ಅಪರೂಪದ, ವ್ಯಕ್ತಿ ಬದುಕಿರುವವರೆಗೂ ಇರುವಂತಹ ಅದ್ವಿತೀಯ ಪದವಿ. ಈ ಪದವಿಯನ್ನು ಸುಮಾರು ವರ್ಷ ಅನುಭವಿಸಿದ ಕೆ. ಎಂ. ಕಾರ್ಯಪ್ಪನವರು... ಅನಾರೋಗ್ಯದಿಂದ ತನ್ನ 94ನೇ ವರ್ಷ ಪ್ರಾಯದಲ್ಲಿ 15.5.1993 ರಂದು ವಿಧಿವಶರಾದರು.

ದೇಶದ ಸೇನಾಪರಂಪರೆಯಲ್ಲಿ ಅಧಿಕಾರಿಯಾದ ಪ್ರಪ್ರಥಮ ಭಾರತೀಯ; ಪ್ರಪ್ರಥಮ ಭಾರತೀಯ ಜನರಲ್; ಮೊದಲ ಭಾರತೀಯ ಕಮಾಂಡರ್-ಇನ್ ಚೀಫ್ (ಇವರ ಅಧಿಕಾರದ ತರುವಾಯ ಭಾರತೀಯ ಸೇನಾಪಡೆಗಳ “ಸುಪ್ರೀಂ ಕಮಾಂಡರ್” ಆದವರು : ಭಾರತದ ರಾಷ್ಟ್ರಪತಿ); ವಿಶಿಷ್ಟ ಸೇನಾ ಸಾಧನೆಗೆ ಬ್ರಿಟೀಷ್ ಸರಕಾರದಿಂದ “ಆರ್ಡರ್ ಆಫ್ ಬ್ರಿಟೀಷ್ ಅಂಪೈರ್: ಔಃಇ” ಪ್ರಶಸ್ತಿ; ಸಮರ್ಥ ಸೇನಾ ಜಾಗೃತಿಗೆ ಅಮೇರಿಕಾ ಸರಕಾರದಿಂದ “ಲೀಜನ್ ಆಫ್ ಮೆರಿಟ್” ಪ್ರಶಸ್ತಿ; ಅಮೇರಿಕಾ - ಫ್ರಾನ್ಸ್ - ನೇಪಾಳ ದೇಶದ ರಕ್ಷಣಾಪಡೆಗಳ “ಗೌರವ ಮಹಾದಂಡನಾಯಕ” ಹುದ್ದೆ; ಅಲಹಾಬಾದ್ - ಆಗ್ರ - ಮೈಸೂರು ವಿಶ್ವವಿದ್ಯಾನಿಲಯಗಳಿಂದ “ಗೌರವ ಡಾಕ್ಟರೇಟ್” ಪದವಿ; ಬ್ರಿಟನ್ ಸರಕಾರದ ಅಧಿಕೃತ ಅತಿಥಿಯಾಗಿ ಸನ್ಮಾನ; ಮರಣಾನಂತರ ಭಾರತ ಸರಕಾರದ ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಚೀಟಿ (Sಠಿeಛಿiಚಿಟ ಅommemoಡಿಚಿಣive Sಣಚಿmಠಿ) ಬಿಡುಗಡೆ... ಹೀಗೆ ಹತ್ತಾರು ಪ್ರಥಮಗಳ ಸಾಧನೆಗಳ ಸರದಾರ ಇವರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ನೆನಪು... ಗೌರವದ ಕುರುಹಾಗಿ ಮಡಿಕೇರಿ ಸೇರಿದಂತೆ ರಾಷ್ಟ್ರದ ಹಲವು ನಗರ, ಪಟ್ಟಣ, ಊರುಗಳಲ್ಲಿ ಅವರ ಹೆಸರಿನಲ್ಲಿ ರಸ್ತೆ, ವೃತ್ತ, ಉಪನಗರ, ಕಟ್ಟಡ, ಗೋಪುರ, ಕಾಲೇಜು, ಕ್ಯಾಂಪಸ್, ಸ್ಟೇಡಿಯಂ, ಕವಾಯತು ಮೈದಾನ... ಇತ್ಯಾದಿಗಳು... ಅಗಲಿದ ನಾಯಕನ ಸ್ಮರಣೆಗೆ ತಲೆಎತ್ತಿ ನಿಂತಿವೆ.

1950 ರಲ್ಲಿ ಮಡಿಕೇರಿಯಲ್ಲಿ ಇವರಿಗೆ “ಪೌರಸನ್ಮಾನ”; 1953 ರಲ್ಲಿ ನಿವೃತ್ತಿಯಾದ ಸಂದರ್ಭದಲ್ಲಿ ಮಡಿಕೇರಿಯಲ್ಲಿ “ಸಾರ್ವಜನಿಕ ಸನ್ಮಾನ”; 1975 ರಲ್ಲಿ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಡಿ. ದೇವರಾಯ ಅರಸು ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ರಾಜ್ಯದ ಜನತೆಯ ಪರವಾಗಿ 75 ನೇ ಹುಟ್ಟುಹಬ್ಬದ ಸಾರ್ವಜನಿಕ ಸನ್ಮಾನ; 15-6-1999 ರಲ್ಲಿ ದೆಹಲಿ ರಾಷ್ಟ್ರಪತಿಭವನದಲ್ಲಿ ಶತಮಾನೋತ್ಸವ ಸಮಾರಂಭ ನಡೆದಿದೆ. 30-12-2016 ರಲ್ಲಿ ಭಾರತೀಯ ಸೇನಾಪರಂಪರೆಯಲ್ಲೊಂದು ಸ್ಮರಣಾರ್ಥ ದಿನ. ಸೇನೆಗೆ ಸೇರಿದ ದೆಹಲಿಯ ಐತಿಹಾಸಿಕ ಕವಾಯತು ಮೈದಾನಕ್ಕೆ “ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪರೇಡ್ ಗ್ರೌಂಡ್” ಎಂದು ಅಧಿಕೃತ ನಾಮಕರಣ ಮಾಡಿದ ಸುದಿನ.

ವಿಶ್ವದರ್ಜೆಯ ವೀರ ಸೇನಾ ನಾಯಕ..., ಸದಾ ಶುಭ್ರವಾದ ಟಿಪ್‍ಟಾಪ್ ಉಡುಪಿನಲ್ಲಿ ಕಂಗೊಳಿಸುವುದು, ಜನ್ಮ ನೀಡಿದ ಮಾತಾಪಿತರನ್ನು ಗೌರವಿಸುವುದು, ಬೆಳಗ್ಗೆ ಎದ್ದ ಕೂಡಲೇ ಸೈನಿಕನ ಫೆÇೀಟೋಕ್ಕೆ ಸಲ್ಯೂಟ್ ಹಾಕಿ ವಂದಿಸುವುದು, ನುಡಿದಂತೆ ನಡೆಯುವುದು, ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ಕಾಣುವುದು, ಕೊನೆಯುಸಿರಿನವರೆಗೂ ಅಪ್ಪಟ ದೇಶಭಕ್ತನಾಗಿ ಬದುಕಿದುದು, ಸತ್ಯ, ಪ್ರಾಮಾಣಿಕತೆಯ ಸಾಕಾರಮೂರ್ತಿಯಾಗಿ ಜೀವನ ಸಾಗಿಸುವುದು... ಇಂತಹ ಹಲವು ಅಪರೂಪದ ಗುಣ ವಿಶೇಷತೆಗಳು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರನ್ನು ವಿಶ್ವದರ್ಜೆಯ ಸೇನಾ ನಾಯಕ, ಸಮಾಜ ಸುಧಾರಕನ ಸ್ಥಾನದಲಿ ನಿಲ್ಲಿಸಿದೆ.

ಅಭಿಮಾನಿಗಳ ಬೇಡಿಕೆಗಳು

(1) ಪ್ರತೀ ವರ್ಷ ಜನವರಿ 28 ರಂದು ರಾಷ್ಟ್ರಮಟ್ಟದಲ್ಲಿ “ರಾಷ್ಟ್ರೀಯ ಶಿಸ್ತಿನ ದಿನ” ಎಂದು ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು.

(2) ಫೀ| ಮಾ| ಕಾರ್ಯಪ್ಪ ಅವರಿಗೆ ಭಾರತ ಸರಕಾರ ಮರಣೋತ್ತರವಾಗಿ “ಭಾರತರತ್ನ” ಪ್ರಶಸ್ತಿ ನೀಡಬೇಕು.

(3) ಅವರ ಅಪರೂಪದ ಸೇವೆ-ಸಾಧನೆ-ಶಿಸ್ತು ಕುರಿತಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಕಿರು ಪಠ್ಯಪುಸ್ತಕಗಳನ್ನು ರೂಪಿಸುವಂತಾಗಬೇಕು.

(4) ಅವರು ಮಡಿಕೇರಿಯಲ್ಲಿ ವಾಸಿಸಿದ “ರೋಶನಾರ” ಮನೆಯ ಪ್ರದೇಶಕ್ಕೆ “ಕಾರ್ಯಪ್ಪ ನಗರ” ಎಂಬ ಹೆಸರಿಡಬೇಕು.

(5) ಯುವಜನರಲ್ಲಿ ಶಿಸ್ತಿನ ಪ್ರಜ್ಞೆ ಮೂಡಿಸಲು ಸಹಕಾರಿ ಆಗುವಂತೆ ಮಾಡಲು ಭಾರತಮಟ್ಟದ ಎನ್.ಸಿ.ಸಿ.ಯಲ್ಲಿ “ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಶಿಸ್ತಿನ ಪದಕ” ಏರ್ಪಡಿಸಿ, ಇದನ್ನು ವಾರ್ಷಿಕವಾಗಿ ಪ್ರತೀ ಎನ್‍ಸಿಸಿ ಬೆಟಾಲಿಯನ್‍ನ ಓರ್ವ ಅತ್ಯುತ್ತಮ ಶಿಸ್ತಿನ ಕೆಡೆಟ್‍ಗೆ ನೀಡುವಂತಹ ವ್ಯವಸ್ಥೆ ಮಾಡಬೇಕು.

(6) ಮುಂದಿನ ವರ್ಷದಿಂದ ಕೊಡಗು ಮಾತ್ರವಲ್ಲದೆ, ಕರ್ನಾಟಕದ ಇತರೆಲ್ಲಾ ಜಿಲ್ಲೆಗಳಲ್ಲಿಯೂ ಜನವರಿ 28 ರಂದು “ಕಾರ್ಯಪ್ಪ ಜಯಂತಿ” ಆಚರಿಸುವಂತೆ ರಾಜ್ಯಸರಕಾರ ಕೂಡಲೇ ನಿರ್ಧರಿಸಬೇಕು. ಬಳಿಕ, ರಾಷ್ಟ್ರಮಟ್ಟದಲ್ಲಿಯೂ ಆಚರಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ-ಮನವಿ ಸಲ್ಲಿಸಬೇಕು.

(7) ಬೆಂಗಳೂರು ವಸಂತನಗರ ಸಮೀಪದ ಕಂಟೋನ್ಮೆಂಟ್ ರೈಲ್ವೇ ಸ್ಟೇಶನ್‍ಗೆ “ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರೈಲ್ವೇ ಸ್ಟೇಶನ್” ಎಂದು ನಾಮಕರಣ ಮಾಡುವಂತೆ ರಾಜ್ಯಸರಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.

(8) ಶಿಸ್ತು ಜಾಗೃತಿಗೆ ಸಹಾಯಕವಾಗುವಂತೆ ಮಾಡಲು... ಅಂಚೆ ಇಲಾಖೆ ಮುದ್ರಿಸುವ ಸಾಮಾನ್ಯ ಸೀರಿಸ್‍ನ ಖಾಯಂ ಅಂಚೆಚೀಟಿಗಳಲ್ಲಿ ಫೀ| ಮಾ| ಕಾರ್ಯಪ್ಪನವರ ಭಾವಚಿತ್ರ ಮುದ್ರಿಸಬೇಕು.

(9) ಎನ್.ಸಿ.ಸಿ. ಸೇರಿದಂತೆ, ಯುವಜನರಲ್ಲಿ ಶಿಸ್ತಿನಪ್ರಜ್ಞೆ ವೃದ್ಧಿಸಲು ಸಹಕಾರಿ ಆಗುವಂತೆ ಫೀ| ಮಾ| ಕಾರ್ಯಪ್ಪನವರ ಬದುಕು-ಸಾಧನೆಯ ಕುರಿತಾಗಿ ನೂತನ “ಡಾಕ್ಯುಮೆಂಟರಿ ಫಿಲಂ” ತಯಾರಿಸಿ, ಪ್ರತಿನಿತ್ಯ ಚಿತ್ರಮಂದಿರಗಳಲ್ಲಿ ಪ್ರದರ್ಶಿಸುವ ಏರ್ಪಾಡು ಮಾಡಬೇಕು.

(10) ಬೆಂಗಳೂರು ಕೊಡವ ಸಮಾಜ ವರ್ಷಂಪ್ರತಿ ಜನವರಿ 28 ರ ಫೀ| ಮಾ| ಕಾರ್ಯಪ್ಪ ಅವರ ಹುಟ್ಟುಹಬ್ಬವನ್ನು “ಕೊಡವ ಸಾಂಸ್ಕೃತಿಕ ದಿನ” ಎಂದು ಆಚರಿಸುತ್ತಿರುವಂತೆ, ಬೇರೆ ಸಮಾಜ, ಬೇರೆ ಸಂಘ-ಸಂಸ್ಥೆಗಳೂ ಆ ದಿನ “ಸಾಂಸ್ಕೃತಿಕ ದಿನ, ಶಿಸ್ತಿನ ದಿನ, ಕ್ರೀಡಾದಿನ, ಸೈನಿಕರ ದಿನ” ಎಂಬಿತ್ಯಾದಿ ಹೆಸರುಗಳಿಂದ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸುವಂತಾಗಬೇಕು.

(11) ಫೀ| ಮಾ| ಕಾರ್ಯಪ್ಪ ಅವರ ಸಂಕ್ಷಿಪ್ತ ಬದುಕು-ಸೇವೆ-ಸಾಧನೆ-ಶಿಸ್ತಿನ ಗುಣಗಳ ಕುರಿತಾಗಿ ಕಿರುಹೊತ್ತಗೆಯನ್ನು ಎಲ್ಲಾ ಭಾರತೀಯ ಭಾಷೆಗಳಲ್ಲಿ ಪ್ರಕಟಿಸುವಂತಾಗಬೇಕು.

(12) ಕೊಡಗಿನಲ್ಲಿ ಸ್ಥಾಪನೆ ಆಗಲಿಕ್ಕಿರುವ ನೂತನ ವಿಶ್ವವಿದ್ಯಾನಿಲಯಕ್ಕೆ “ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವಿಶ್ವವಿದ್ಯಾನಿಲಯ” ಎಂದು ನಾಮಕರಣ ಮಾಡುವಂತಾಗಬೇಕು.

- ಉಳ್ಳಿಯಡ ಎಂ. ಪೂವಯ್ಯ, ಕಾರ್ಯದರ್ಶಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ - ಜನರಲ್ ತಿಮ್ಮಯ್ಯ ಫೆÇೀರಂ, ಮಡಿಕೇರಿ.