ಮಡಿಕೇರಿ, ಜ. 27: ಬೆಂಗಳೂರು ಶಾರದ ಪ್ರತಿಷ್ಠಾನ, ಮೇಕೇರಿ ಈಶ್ವರಿ ಸಾಹಿತ್ಯ ಬಳಗದ ಸಹಯೋಗದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮದಿನದ ಪ್ರಯುಕ್ತ ರಾಜ್ಯಮಟ್ಟದ ಕವಿಗೋಷ್ಠಿ ಹಾಗೂ ಗಾಯನಗೋಷ್ಠಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಗ್ಗೋಡ್ಲು ನಿವೃತ್ತ ಶಿಕ್ಷಕಿ ಭಾಗೀರಥಿ ಉಲಿತಾಳ, ಒಂದು ಭಾಷೆ ಬೆಳವಣಿಗೆಯಾಗಬೇಕಾದರೆ ಆ ಪ್ರದೇಶದ ಜನರು ಕಲೆ, ಸಾಹಿತ್ಯದಲ್ಲಿ ಆಸಕ್ತಿ ಹೊಂದಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಂತರಾಷ್ಟ್ರೀಯ ಸಾಹಿತಿ ಹಾಗೂ ವಿಮರ್ಶಕರಾದ ಡಾ.ಹುಲಿವಾಹನ ನರಸಿಂಹಸ್ವಾಮಿ ಮಾತನಾಡಿ, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ವಿಭಿನ್ನವಾದ ಜಿಲ್ಲೆಯಾಗಿದ್ದು ನಾಡುನುಡಿ, ಸಂಪ್ರದಾಯ, ಸ್ವಾತಂತ್ರ್ಯ ಹೋರಾಟಕ್ಕೆ ಹೆಸರುವಾಸಿಯಾಗಿದೆ. ಕವಿಗಳು ಕಲ್ಪನಾಲೋಕದಲ್ಲಿ ವಿಹರಿಸುವದು ಸಹಜ. ಆದರೆ ಅದಕ್ಕಿಂತಲೂ ಜವಾಬ್ದಾರಿ ಯುತವಾದುದು ಸಮಾಜದ ಸಮಸ್ಯೆಗಳು, ಪ್ರಸ್ತುತ ವಿದ್ಯಮಾನಗಳ ಬಗ್ಗೆ ಕಾವ್ಯಾತ್ಮಕವಾಗಿ ಬರೆದು ಸರ್ಕಾರದ ಹಾಗೂ ಸಂಬಂಧಿಸಿದವರ ಗಮನಸೆಳೆಯುವದಾಗಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಮೇಕೇರಿ ಈಶ್ವರಿ ಸಾಹಿತ್ಯ ಬಳಗದ ಸಂಚಾಲಕಿ ಈಶ್ವರಿ, ಮುಂದಿನ ದಿನದಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುವದಾಗಿ ನುಡಿದರು.
ಕಾರ್ಯಕ್ರಮದಲ್ಲಿ ಸೋಮವಾರಪೇಟೆಯ ಕವಿಯತ್ರಿ ರಾಧಿಕಾ ಕಾಳಪ್ಪ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಕನ್ನಡ ಸಾಹಿತ್ಯ ಪರಿಷತ್ ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಮೇಕೇರಿ ಗ್ರಾ.ಪಂ ಅಧ್ಯಕ್ಷೆ ಜಯಂತಿ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.