ಸೋಮವಾರಪೇಟೆ, ಜ. 27: ಪಟ್ಟಣದಲ್ಲಿ ವಾಹನ ಸಂಚಾರ ಮತ್ತು ವಾಹನಗಳ ನಿಲುಗಡೆಯನ್ನು ಸಮರ್ಪಕಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದ್ದು, ವಾಹನಗಳ ತಪಾಸಣಾ ಕಾರ್ಯವನ್ನು ಹೆಚ್ಚಿಸಲಾಗಿದೆ.

ಪರಿಣಾಮ ದಾಖಲೆಗಳಿಲ್ಲದ ವಾಹನಗಳ ಓಡಾಟಕ್ಕೆ ಅಲ್ಪ ಪ್ರಮಾಣದ ಬ್ರೇಕ್ ಬಿದ್ದಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿ ಪೊಲೀಸರು ಕಾರ್ಯಪ್ರವೃತ್ತರಾಗಬೇಕೆಂಬ ಮಾತುಗಳು ಕೇಳಿಬಂದಿವೆ.

ಪಟ್ಟಣದಲ್ಲಿ ಅಪ್ರಾಪ್ತ ಮಕ್ಕಳು ವಾಹನ ಚಲಾಯಿಸುವದು, ತ್ರಿಬಲ್ ರೈಡಿಂಗ್, ಅಗತ್ಯ ದಾಖಲಾತಿಗಳು ಇಲ್ಲದಿದ್ದರೂ ವಾಹನ ಚಲಾವಣೆ, ಏಕಮುಖ ಸಂಚಾರ ನಿಯಮ ಉಲ್ಲಂಘನೆ, ನೋ ಪಾರ್ಕಿಂಗ್‍ನಲ್ಲೂ ವಾಹನ ನಿಲ್ಲಿಸುವದು ಇತ್ಯಾದಿ ಕ್ರಮಗಳಿಂದ ಪಟ್ಟಣದಲ್ಲಿ ವಾಹನಗಳ ಸಂಚಾರ ಮತ್ತು ನಿಲುಗಡೆಗೆ ಭಾರೀ ಸಮಸ್ಯೆಯಾಗಿತ್ತು. ಇದನ್ನು ಮನಗಂಡ ನೂತನ ಪೊಲೀಸ್ ಠಾಣಾಧಿಕಾರಿ ಶಿವಶಂಕರ ಅವರು ಸುಧಾರಿತ ಕ್ರಮಕ್ಕೆ ಮುಂದಾಗಿದ್ದು, ಈಗಾಗಲೇ ವಾಹನಗಳ ದಾಖಲಾತಿ ತಪಾಸಣೆ, ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ, ಹೆಲ್ಮೆಟ್ ರಹಿತ ಚಾಲನೆಗೆ ದಂಡ ವಿಧಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಎಚ್ಚರಿಕೆ ಮೂಡಿಸುತ್ತಿದ್ದಾರೆ. ಸೋಮವಾರಪೇಟೆಗೆ ಆಗಮಿಸಿದ ಬಹುತೇಕ ಠಾಣಾಧಿಕಾರಿಗಳು ಠಾಣೆಯಲ್ಲೇ ಠಿಕಾಣಿ ಹೂಡುತ್ತಿದ್ದರೆ, ನೂತನ ಠಾಣಾಧಿಕಾರಿ ಶಿವಶಂಕರ್ ಅವರು ಠಾಣೆಗಿಂತ ಫೀಲ್ಡ್‍ನಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿರುವದು ಕಂಡುಬಂದಿದೆ. ಪೊಲೀಸರು ಫೀಲ್ಡ್‍ನಲ್ಲಿದ್ದರೆ ಪಟ್ಟಣಕ್ಕೆ ಆಗಮಿಸುವ ವಾಹನಗಳ ಸಂಖ್ಯೆಯಲ್ಲೂ ಭಾರೀ ಪ್ರಮಾಣದ ಇಳಿಕೆ ಕಂಡುಬರುತ್ತಿದೆ. ವಿಮೆ ಸೇರಿದಂತೆ ಅಗತ್ಯ ದಾಖಲಾತಿಗಳು ಇಲ್ಲದ ವಾಹನಗಳನ್ನು ವಶಕ್ಕೆ ಪಡೆಯುವ ಮೂಲಕ ದಂಡ ವಿಧಿಸುತ್ತಿರುವದರಿಂದ ಹಲವಷ್ಟು ವಾಹನಗಳು ಪಟ್ಟಣಕ್ಕೆ ಆಗಮಿಸುತ್ತಿಲ್ಲ ಎಂದು ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.

ಇನ್ನು ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ತೆರಳುವ ಮತ್ತು ವಾಪಸ್ ಆಗುವ ಸಮಯದಲ್ಲಿ ಕೆಲ ಯುವಕರು ಬೈಕ್‍ಗಳಲ್ಲಿ ಸುಖಾ ಸುಮ್ಮನೆ ಬೀಟ್ ಹಾಕುತ್ತಿರುವ ಬಗ್ಗೆಯೂ ದೂರುಗಳು ಕೇಳಿ ಬಂದಿದ್ದು, ಅತೀ ವೇಗದ ಚಾಲನೆ ಯೊಂದಿಗೆ ‘ಆಲ್ಟ್ರೇಷನ್ ಸೈಲೆಂಸರ್’ ಮೂಲಕ ಕರ್ಕಶ ಶಬ್ದ ಹೊರ ಹಾಕುತ್ತಾ ಸಾಗುವದು ಕಂಡು ಬರುತ್ತಿದೆ. ಇಂತಹ ವಾಹನಗಳ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿದೆ.

ಸೋಮವಾರಪೇಟೆ ಪೊಲೀಸ್ ಇಲಾಖೆಯಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್‍ಗೆ ಸ್ಥಳ ಗುರುತು ಮಾಡಲಾಗಿದ್ದು, ಅಡ್ಡಾದಿಡ್ಡಿ ನಿಲುಗಡೆಯಾಗುವ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಪೊಲೀಸ್ ಸಿಬ್ಬಂದಿಗಳೊಂದಿಗೆ ಗೃಹ ರಕ್ಷಕ ಸಿಬ್ಬಂದಿಗಳು ಕೈಜೋಡಿಸುವ ಮೂಲಕ ಪಾರ್ಕಿಂಗ್ ಮತ್ತು ಸುಗಮ ವಾಹನ ಸಂಚಾರಕ್ಕೆ ಪ್ರಯತ್ನಿ ಸಲಾಗುತ್ತಿದೆ.

- ವಿಜಯ್