ಮಡಿಕೇರಿ, ಜ. 27: ಜಿಲ್ಲೆಯಲ್ಲಿ ತಾ. 28 ರಿಂದ ಫೆಬ್ರವರಿ 22 ರವರೆಗೆ ಜಾನುವಾರುಗಳಿಗೆ 15ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ನಡೆಯಲಿದೆ. ದನ, ಎಮ್ಮೆ, ಆಡು, ಕುರಿ, ಹಂದಿ ಸೇರಿದಂತೆ ಎಲ್ಲಾ ಸೀಳುಗೊರಸಿನ ಪ್ರಾಣಿಗಳಲ್ಲಿ ಈ ರೋಗವು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ.

ಈ ರೋಗದ ವಿರುದ್ಧ ಪ್ರತಿ 6 ತಿಂಗಳಿಗೊಮ್ಮೆ ಲಸಿಕೆ ಹಾಕಿಸಿ, ರೋಗ ಬಾರದಂತೆ ತಡೆಗಟ್ಟಬಹುದಾಗಿದೆ. 19ನೇ ಜಾನುವಾರು ಗಣತಿಯಂತೆ ಜಿಲ್ಲೆಯಲ್ಲಿ ದನ ಹಾಗೂ ಎಮ್ಮೆಗಳ ಸಂಖ್ಯೆ 1,02,904 ಇದ್ದು 16,948 ಹಂದಿಗಳಿವೆ. ಒಟ್ಟು 1,19,852 ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ಈಗಾಗಲೇ ಲಸಿಕಾ ಕಾರ್ಯಕ್ರಮಕ್ಕೆ ಎಲ್ಲಾ ಪೂರ್ವ ಸಿದ್ಧತೆ ಮಾಡಿಕೊಳಲಾಗಿದ್ದು, 75 ಲಸಿಕಾದಾರರನ್ನೊಳಗೊಂಡ ಒಟ್ಟು 11 ತಂಡಗಳನ್ನು ರಚಿಸಲಾಗಿದೆ. ಲಸಿಕಾದಾರರು ರೈತರ-ಜಾನುವಾರು ಮಾಲೀಕರ ಮನೆ ಮನೆಗೆ ತೆರಳಿ ಲಸಿಕೆ ಹಾಕಲಿದ್ದಾರೆ.

ಲಸಿಕೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಯಾವದೇ ರೀತಿಯ ಶುಲ್ಕವಿರುವದಿಲ್ಲ. ಇದೊಂದು ರಾಷ್ಟ್ರೀಯ ಕಾರ್ಯಕ್ರಮ ಎಂದು ಉಪನಿರ್ದೇಶಕರು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮನವಿ ಮಾಡಿಕೊಂಡಿದ್ದಾರೆ.