ಮಡಿಕೇರಿ, ಜ.25 : ಟಿಪ್ಪು ಸುಲ್ತಾನನಿಂದ ದೇವಟ್‍ಪರಂಬ್‍ನಲ್ಲಿ ನಡೆದ ನರಮೇಧ ಘಟನೆಯನ್ನು ಹೋಲೋಕಾಸ್ಟ್ ರಿಮಂಬರೆನ್ಸ್ ಪಟ್ಟಿಯಲ್ಲಿ ಸೇರಿಸಬೇಕೆನ್ನುವದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂತರರಾಷ್ಟ್ರೀಯ ಹೋಲೊಕಾಸ್ಟ್ ರಿಮೆಂಬರೆನ್ಸ್ ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ತಾ.27 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ಬೆಳಿಗ್ಗೆ 10.30 ಗಂಟೆಗೆ ಧರಣಿ ನಡೆಯಲಿದ್ದು, ವಿಶ್ವ ರಾಷ್ಟ್ರ ಸಂಸ್ಥೆಯ ಮುಂದಾಳತ್ವದಲ್ಲಿ ಫ್ರೆಂಚ್ ಸರ್ಕಾರ ಮತ್ತು ಭಾರತ ಸರ್ಕಾರ ಸೇರಿ ‘ಅಂತರರಾಷ್ಟ್ರೀಯ ಕೊಡವ ಹೋಲೊಕಾಸ್ಟ್ ಮ್ಯೂಸಿಯಂ’ ಸ್ಥಾಪಿಸಬೇಕೆಂದು ಆಗ್ರಹಿಸಲಾಗುವದೆಂದರು.

ದೇವಟ್‍ಪರಂಬ್‍ನಲ್ಲಿ 1785ರ ಡಿಸೆÀಂಬರ್ 12ರಂದು ಟಿಪ್ಪುವಿನೊಂದಿಗೆ ಸೇರಿದ ಫ್ರೆಂಚ್ ಈಸ್ಟ್ ಇಂಡಿಯ ಕಂಪೆನಿಯ ಸೇನೆಯು ನಿರಾಯುಧ ಕೊಡವರ ಹತ್ಯಾಕಾಂಡ ನಡೆಸಿದೆ. ಈ ಘಟನೆಯ ಪ್ರಾಯಶ್ಚಿತ್ತÀಕ್ಕಾಗಿ ಇಂದಿನ ಫ್ರೆಂಚ್ ಸರ್ಕಾರ ಕೊಡವ ಬುಡಕಟ್ಟು ಯೋಧ ಸಮುದಾಯದ ಬಹಿರಂಗ ಕ್ಷಮೆಯಾಚಿಸಬೇಕು ಮತ್ತು ಕೊಡವ ನರಮೇಧದ ಸ್ಮಾರಕವನ್ನು ದೇವಟ್‍ಪರಂಬ್‍ನಲ್ಲಿ ನಿರ್ಮಿಸಬೇಕೆಂದರು.

ಕೊಡವರ ಮೇಲೆ ಟಿಪ್ಪು ನಡೆಸಿದ ಹತ್ಯಾಕಾಂಡವನ್ನು ಖಂಡಿಸುವ ನಿರ್ಣಯವನ್ನು ಭಾರತದ ಪಾರ್ಲಿಮೆಂಟ್‍ನಲ್ಲಿ ಅಂಗೀಕರಿಸುವ ಮೂಲಕ ಟಿಪ್ಪುವಿನ ರಾಕ್ಷಸಿ ಮುಖವನ್ನು ಜಗತ್ತಿನ ಮುಂದೆ ಅನಾವರಣಗೊಳಿಸಬೇಕೆಂದು ಆಗ್ರಹಿಸಿದರು.

ಟಿಪ್ಪುವಿನ ಕ್ರೌರ್ಯವನ್ನು ನೆನಪಿಸುವ ‘ಕುಶಾಲನಗರ’ ಹೆಸರು ಬದಲಿಸಿ ಹಿಂದಿನ ‘ಫ್ರೇಜûರ್‍ಪೇಟ್’ ಎಂದು ಮರುನಾಮಕರಣ ಮಾಡಬೇಕು. ಅದು ಸಾಧ್ಯವಿಲ್ಲದಿದ್ದಲ್ಲಿ ಹೈದರ್ ಮತ್ತು ಟಿಪ್ಪುವಿನ ವಿರುದ್ಧ ಬೈಚನಹಳ್ಳಿ-ಮುಳ್ಳುಸೊಗೆಗಳಲ್ಲಿ ಕಾದಾಡಿ ಸೋಲಿಸಿ ಹಿಮ್ಮೆಟ್ಟಿಸಿದ ‘ಸಮರವೀರ ಕುಲ್ಲೇಟ್ಟಿರ ಪೊನ್ನಣ್ಣ’ರ ಹೆಸರಿಡಬೇಕೆಂದು ನಾಚಪ್ಪ ಒತ್ತಾಯಿಸಿದರು.

18ನೇ ಶತಮಾನದಲ್ಲಿ ಕೊಡವರ ಮೇಲೆ ಟಿಪ್ಪುವಿನಿಂದ ಘಟಿಸಿದ ಘೋರ ದುರಂತವನ್ನು ಕೊಡವರು ಎಂದೆಂದಿಗೂ ಮರೆಯಲಾರರು. ಈ ಹಿನ್ನೆಲೆಯಲ್ಲಿ ಅಗತ್ಯ ಪರಿಹಾರ ಕಾರ್ಯಗಳನ್ನು ಒದಗಿಸುವದು ಸರ್ಕಾರಗಳ ಕರ್ತವ್ಯವಾಗಿದೆ. ಹೀಗಿದ್ದೂ ಸರ್ಕಾರಗಳು ಟಿಪ್ಪು ಜಯಂತಿ ಆಚರಿಸುವ ಮೂಲಕ ಕೊಡವರ ಗಾಯದ ಮೇಲೆ ಉಪ್ಪು ಸವರುತ್ತಲೇ ಮುಂದುವರಿದಿರುವದು ದುರ್ದೈವವೆಂದು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಂದಪ್ಪಂಡ ಮನೋಜ್ ಮತ್ತು ಕೂಪದಿರ ಸಾಬು ಉಪಸ್ಥಿತರಿದ್ದರು.