ಕುಶಾಲನಗರ, ಜ. 25: ಹೆಬ್ಬಾಲೆ ಗ್ರಾಮಕ್ಕೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರಾತಿಗೆ ಸಂಬಂಧಿಸಿದಂತೆ ಕ್ಷೇತ್ರ ಶಾಸಕರು ಒತ್ತಡ ಹೇರಬೇಕಿದೆ ಎಂದು ಕೊಡಗು ಜಿ.ಪಂ. ಮಾಜಿ ಅಧ್ಯಕ್ಷ ಹೆಚ್.ಎಸ್. ಅಶೋಕ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೂವರೆ ದಶಕದ ಬೇಡಿಕೆಯಾಗಿರುವ ಪ್ರಥಮ ದರ್ಜೆ ಕಾಲೇಜು ಆರಂಭಕ್ಕೆ ಸೂಕ್ತವಾದ ಸ್ಥಳ ಮತ್ತು ತಾತ್ಕಾಲಿಕ ಕಟ್ಟಡ ಲಭ್ಯವಿದೆ. ಗ್ರಾಮದಲ್ಲಿ ಕಾಲೇಜು ಆರಂಭಿಸುವಂತೆ ಆಗ್ರಹಿಸಿ 1994 ರಿಂದಲೂ ಸರಕಾರದೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದೆ. ಅದರಂತೆ 1995 ರಲ್ಲಿ ಸರಕಾರದಿಂದ ಕಾಲೇಜು ಆರಂಭಿಸಲು ಅನುಮತಿ ದೊರೆತು ಕಾಲೇಜು ಆರಂಭಿಸುವ ಸಂಬಂಧ ಮಂಗಳೂರು ವಿವಿಗೆ ಸಂಯೋಜನಾ ಶುಲ್ಕ ರೂ. 22 ಸಾವಿರ ಪಾವತಿಸಲಾಗಿತ್ತು. ಅಗತ್ಯ ಮೂಲ ಸೌಲಭ್ಯಗಳ ವಿವರವನ್ನು ಸಕಾಲದಲ್ಲಿ ಕಳುಹಿಸಲು ಸಾಧ್ಯವಾಗದ ಕಾರಣ ಆ ಯೋಜನೆ ಈಡೇರಲಿಲ್ಲ. ನಂತರ ದಿನಗಳಲ್ಲಿ ಅಗತ್ಯ ಮಾಹಿತಿ ಒದಗಿಸಿದ ಹಿನ್ನೆಲೆ ಜಿಲ್ಲೆಯ ಪ.ಪೂ. ಶಿಕ್ಷಣ ಇಲಾಖೆ ನಿರ್ದೇಶಕರು ಸ್ಥಳ ಪರಿಶೀಲಿಸಿ ಮಂಗಳೂರು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಿಗೆ ಮಾಹಿತಿ ರವಾನಿಸಿದ್ದರು.
ಈ ಸಂಬಂಧ ಮಂಗಳೂರು ವಿವಿ ಯಿಂದ 4 ಬಾರಿ ಸರ್ವೆ ಕಾರ್ಯ ನಡೆಸಲಾಗಿದೆ ಹೊರತು ಯೋಜನೆ ಇದುವರೆಗೆ ಅನುಷ್ಠಾನಗೊಂಡಿಲ್ಲ. ಗ್ರಾಮ ವ್ಯಾಪ್ತಿಯಲ್ಲಿ ಹಲವು ಪಿ.ಯು. ಕಾಲೇಜುಗಳಿದ್ದು ಸಾವಿರಾರು ಮಂದಿ ದೂರದ ಕುಶಾಲನಗರ ಮತ್ತು ಕೊಣನೂರು ಪ್ರಥಮ ದರ್ಜೆ ಕಾಲೇಜನ್ನು ಅವಲಂಭಿಸಿದ್ದಾರೆ. ಗ್ರಾಮದಲ್ಲಿ 4 ಎಕರೆ ಸರಕಾರಿ ಜಾಗ ಲಭ್ಯವಿದ್ದು ಇದರೊಂದಿಗೆ ನಿರ್ವಹಣೆಯಿಲ್ಲದ ಬನಶಂಕರಿ ಶಾಲಾ ಕಟ್ಟಡದಲ್ಲಿ ಕೂಡ ತಾತ್ಕಾಲಿಕವಾಗಿ ಕಾಲೇಜು ಆರಂಭಿಸಲು ಅವಕಾಶವಿದೆ. ಮಂಗಳೂರು ವಿವಿಯ ಶಿಕ್ಷಣ ಸಮನ್ವಯ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಲಿದೆ.
ಈ ನಿಟ್ಟಿನಲ್ಲಿ ಕ್ಷೇತ್ರ ಶಾಸಕರು, ಉಸ್ತುವಾರಿ ಸಚಿವರು ಹಾಗೂ ಸಂಸದರು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಗ್ರಾಮದಲ್ಲಿ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಮಂಜೂರಾತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಅಶೋಕ್ ಆಗ್ರಹಿಸಿದ್ದಾರೆ.