ವೀರಾಜಪೇಟೆ, ಜ.25: ನಮ್ಮಲ್ಲಿ ಇಂದು ಶೇ. 60-70 ಮತದಾನವಾಗುತ್ತಿದೆ, ಇದರಿಂದ ನಾಲ್ಕು ಅಭ್ಯರ್ಥಿಗಳು ಕಣದಲ್ಲಿದ್ದಾಗ ಮತ ವಿಭಜನೆ ಮಾಡಿ ನೋಡಿದಾಗ ಗೆದ್ದ ಅಭ್ಯರ್ಥಿ ಶೇಕಡವಾರು ಮತದಲ್ಲಿ ಅಲ್ಪ ಮತ ಪಡೆದಿರುತ್ತಾನೆ, ಅಂದರೆ ಬಹುತೇಕ ಆತನ ವಿರುದ್ಧ ಮತಚಲಾವಣೆ ಆಗಿರುತ್ತದೆ ಎಂಬ ಅರ್ಥ ಬಿಂಬಿಸುವದರಿಂದ ಅದು ಪ್ರಜಾಪ್ರಭುತ್ವದ ವಿಪರ್ಯಾಸವಾಗುತ್ತಿದೆ ಎಂದು ವಿ.ಪೇ. ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್.ಜಯಪ್ರಕಾಶ್ ಅಭಿಪ್ರಾಯಪಟ್ಟರು.

ವೀರಾಜಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ವೀರಾಜಪೇಟೆ ತಾಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ ಪುರಭವನದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕುರಿತ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಂಪೂರ್ಣ ಪ್ರಮಾಣದ ಮತದಾನವಾದಾಗ ಮಾತ್ರ ಅರ್ಹ, ಸಮರ್ಥ ಅಭ್ಯರ್ಥಿಯ ಆಯ್ಕೆ ಸಾಧ್ಯವಾಗುತ್ತದೆ. ಇಂದು ದೇಶದ ನಾಲ್ಕು ಅಂಗದಲ್ಲಿ ಯಾವ ಅಂಗ ಶ್ರೇಷ್ಠ ಎಂಬ ಚರ್ಚೆ ನಡೆಯುತ್ತಿದೆ, ಆದರೆ ಇಲ್ಲಿ ಸಂವಿಧಾನವೇ ಶ್ರೇಷ್ಠವಾಗಿದೆ. ಅದು ನಮಗೆ ಎಲ್ಲಾ ರೀತಿಯ ಅಧಿಕಾರ ದೊರಕಿಸುತ್ತದೆ. ಸಂವಿಧಾನದ ಪೀಠಿಕೆಯಲ್ಲಿ ಅಳವಡಿಕೆಯಾಗಿರುವ ಆಶಯದಂತೆ ನಾವು ನಡೆಯಬೇಕು. ನಮ್ಮಲ್ಲಿ ಈಗ ವಂಶ ಪಾರಂಪರ್ಯ ಆಡಳಿತ, ರಾಜಮನೆತನದ ಆಡಳಿತ ಇಲ್ಲ, ಪ್ರಜಾಪ್ರಭುತ್ವ ನಮ್ಮದು. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿದ್ದು ಚುನಾವಣೆಯಲ್ಲಿ ಅನೇಕರು ಕಣಕ್ಕೆ ಇಳಿಯುತ್ತಾರೆ. ನಾವು ತಪ್ಪದೆ ಮತದಾನದಲ್ಲಿ ಭಾಗವಹಿಸಿ ಅರ್ಹರ ಆಯ್ಕೆ ಮಾಡಬೇಕು. 2001 ರಿಂದ ಈಚೆ 15 ಲಕ್ಷ ಯುವ ಮತದಾರರು ಇದ್ದಾರೆ. ಆದರೆ ಇಲ್ಲಿವರಗೆ 9 ಲಕ್ಷ ಯುವ ಮತದಾರರು ಮಾತ್ರ ಹೆಸರು ನೊಂದಾಯಿಸಿದ್ದಾರೆ. ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂದು ಜಯ ಪ್ರಕಾಶ್ ಹೇಳಿದರು.

ವೀರಾಜಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ.ಗಳಾದ ಶಿವಾನಂದ ಲಕ್ಷ್ಮಣ ಹಂಚಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಮೊದಲನೆಯಾದಾಗಿ ಇಂದು ಮತದಾರರ ಜಾಗೃತಿ ಮಾಡಬೇಕಾದ ಕಾರ್ಯಕ್ರಮದ ಅನಿವಾರ್ಯತೆ ಬಂದಿರುವದು ವಿಪರ್ಯಾಸ. ಜನರಿಗೆ ತಮ್ಮ ಹಕ್ಕಿನ ಬಗ್ಗೆ ಅರಿವಿಲ್ಲದೆ ಇರುವದೆ ಇದಕ್ಕೆ ಕಾರಣವಾಗಿದೆ. ಜೊತೆಗೆ ಭಾರತದಲ್ಲಿ ಮತದಾನ ಮಾಡಿದ ರೀತಿಯಲ್ಲಿಯೇ, ನೀಡಿದ ಮತವನ್ನು ಹಿಂಪಡೆಯುವ ಅಧಿಕಾರ ಜನರಿಗೆ ಬರಬೇಕು. ಐದು ವರ್ಷ ಅಧಿಕಾರ ಪಡೆದು ಸೂಕ್ತ ಕೆಲಸ ಮಾಡದವರನ್ನು ತಡೆಯಲು ಈ ಅಧಿಕಾರ ಬೇಕು, ಇದು ಸಹ ಶೀಘ್ರದಲ್ಲಿ ಬರಬಹುದಾಗಿದೆ ಎಂದು ಹೇಳಿದರು.

ನೂತನ ತಾಲೂಕು ತಹಶೀಲ್ದಾರ್ ಬಿ.ಎಂ. ಗೋವಿಂದರಾಜು ಅಧ್ಯಕ್ಷತೆ ವಹಿಸಿ, ಮತದಾರರ ಪ್ರತಿಜ್ಞಾ ವಿಧಿ ಭೋದಿಸಿ ಸಂವಿಧಾನದಲ್ಲಿ ಶಾಸಕಾಂಗಕ್ಕೆ ಜನರೇ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅವಕಾಶ ನೀಡಿದೆ. ನಾವು ನಮ್ಮ ಶಕ್ತಿಯಾದ ಮತದಾನವನ್ನು ಸಮರ್ಥವಾಗಿ ಬಳಸಿದರೆ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ. ಆದರೆ ಇಂದು ನಾವು ಮತದಾನದಲ್ಲಿ ಭಾಗವಹಿಸದೆ, ಅದರ ಮಹತ್ವವನ್ನು ಅರಿಯದೆ ಇರುವದರಿಂದ ಆಡಳಿತ ವ್ಯವಸ್ಥೆಯನ್ನು ಸೂಕ್ತವಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಶೇ.50 ಮತದಾನವಾದರೆ ಹೇಗೆ ಸರ್ಮಥ ಅಭ್ಯರ್ಥಿ ಆಯ್ಕೆ ಸಾದ್ಯವಾಗಲಿದೆ ಎಂಬದನ್ನು ಮನಗಾಣಬೇಕಿದೆ. ಯುವ ಜನತೆ ಮತದಾರರ ಪಟ್ಟಿಗೆ ಹೆಚ್ಚಾಗಿ ಸೇರಿ, ಮತದಾನ ಮಾಡುವ ಮೂಲಕ ದೇಶವನ್ನು ಬಲಿಷ್ಠಗೊಳಿಸಿ ಎಂದರು.

ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಎಂ.ಎಂ. ನಂಜಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭ ಮುಖ್ಯ ಅತಿಥಿಗಳು ಸಾಂಕೇತಿಕವಾಗಿ ಮತದಾರರ ಗುರುತಿನ ಚೀಟಿ ವಿತರಿಸಿದರು.