ಮಡಿಕೇರಿ, ಜ. 25: ಫೀ.ಮಾ. ಕಾರ್ಯಪ್ಪ ಜನ್ಮದಿನಾಚರಣೆ ವಿಚಾರದಲ್ಲಿ ಸರಕಾರದ ನಿರ್ಲಕ್ಷ್ಯವನ್ನು ಖಂಡಿಸಿರುವ ಅಖಿಲ ಕೊಡವ ಸಮಾಜ ಈ ಕುರಿತಾಗಿ ವಿವಿಧ ಸಂಘಟನೆಗಳು ನಡೆಸುವ ಕಾರ್ಯಕ್ಕೆ ಬೆಂಬಲ ನೀಡುವದಾಗಿ ತಿಳಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಸಮಾಜದ ಕಾರ್ಯದರ್ಶಿ ಅಮ್ಮುಣ್ಣಿಚಂಡ ರಾಜಾ ನಂಜಪ್ಪ ಅವರು, ಕಾರ್ಯಪ್ಪ ಅವರು ಪ್ರಪಂಚ ಕಂಡ ವೀರ, ಅಪ್ರತಿಮ ರಾಷ್ಟ್ರಭಕ್ತ. ಸ್ವತಂತ್ರ ಭಾರತದ ಮೂರು ರಕ್ಷಣಾ ಪಡೆಗಳ ಮೊದಲ ಮಹಾದಂಡನಾಯಕ, ಇವರ ಜಯಂತಿಗೆ ಸರಕಾರ ಅನುದಾನ ನಿರಾಕರಿಸಿರುವದು ಇಡೀ ಭಾರತೀಯ ಸೈನ್ಯಕ್ಕೆ ಮಾಡಿರುವ ಅವಮಾನವಾಗಿದೆ.

ಫೀ.ಮಾ. ಕಾರ್ಯಪ್ಪ ಅವರು ಕೇವಲ ಒಂದು ಜಿಲ್ಲೆ, ರಾಜ್ಯ, ಸಮುದಾಯಕ್ಕೆ ಸೇರಿದ ವ್ಯಕ್ತಿಯಲ್ಲ, ಇಡೀ ಪ್ರಪಂಚವೇ ಅವರ ಸಾಹಸ, ಪರಾಕ್ರಮ, ರಾಷ್ಟ್ರಭಕ್ತಿ ಹಾಗೂ ಸೇವೆಯನ್ನು ಸ್ಮರಿಸುತ್ತದೆ. ಜಿಲ್ಲೆಯಲ್ಲಿ ಅಗತ್ಯವಿಲ್ಲದ ಜಯಂತಿಯನ್ನು, ತೀವ್ರ ವಿರೋಧದ ನಡುವೆಯೂ ಭದ್ರತೆಯಲ್ಲಿ ಆಚರಿಸುವ ಸರ್ಕಾರ, ದೇಶ ಕಂಡ ಅಪ್ರತಿಮ ಸೇನಾನಿಯ ಜಯಂತಿಗೆ ಕನಿಷ್ಟ ಅನುದಾನ ನೀಡಲಾಗದಿರುವದು ಇಡೀ ರಕ್ಷಣಾ ಪಡೆಗಳಿಗೆ ಹಾಗೂ ದೇಶಭಕ್ತರಿಗೆ ಮಾಡಿದ ಅಪಮಾನವಾಗಿದೆ ಎಂದಿದ್ದಾರೆ.

ಕೂಡಲೇ ವೀರ ಸೇನಾನಿಯ ಜಯಂತಿಗೆ ಅನುದಾನ ಬಿಡುಗಡೆಮಾಡಬೇಕಲ್ಲದೇ, ಮುಂದಿನ ದಿನಗಳಲ್ಲಿ ಸರ್ಕಾರದ ಅಧಿಕೃತ ಕಾರ್ಯಕ್ರಮವಾಗಿ ಘೋಷಿಸಬೇಕು. ಇಲ್ಲವಾದರೆ ಈ ವಿಚಾರವಾಗಿ, ಈಗಾಗಲೇ ಹೋರಾಟ ರೂಪಿಸಲು ಸಜ್ಜಾಗಿರುವ ಇತರ ಸಂಘಟನೆಗಳಿಗೆ ಅಖಿಲ ಕೊಡವ ಸಮಾಜವೂ ಸಂಪೂರ್ಣ ಬೆಂಬಲವನ್ನು ನೀಡಲಿದೆಯೆಂದು ತಿಳಿಸಿದ್ದಾರೆ.