ಕುಶಾಲನಗರ, ಜ. 25: ಕುಶಾಲನಗರ ಪಟ್ಟಣದಲ್ಲಿ ಕೆಲವು ಲಾಡ್ಜ್‍ಗಳಿಂದ ಚರಂಡಿ ಮೂಲಕ ಶೌಚಾಲಯ ತ್ಯಾಜ್ಯ ಹರಿಸುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆಯಲ್ಲಿರುವ ಕಟ್ಟಡದ ಮಾಲೀಕರಿಗೆ ಪಟ್ಟಣ ಪಂಚಾಯಿತಿಯಿಂದ ನೋಟಿಸ್ ನೀಡಲಾಗಿದೆ.
ಸ್ಥಳೀಯ ಪಂಚಾಯಿತಿ ಕಛೇರಿ ಸಮೀಪದಲ್ಲಿರುವ ಮಹಾಲಕ್ಷ್ಮಿ ರೆಸಿಡೆನ್ಸಿಯಿಂದ ನೇರವಾಗಿ ಸಾರ್ವಜನಿಕ ಚರಂಡಿಗೆ ಶೌಚಾಲಯ ನೀರನ್ನು ಹರಿಸಿರುವ ಬಗ್ಗೆ ಪರಿಶೀಲನೆ ವೇಳೆ ಕಂಡುಬಂದಿದ್ದು, ಮಲೀನ ನೀರು ನೇರವಾಗಿ ಕಾವೇರಿ ನದಿಗೆ ಸೇರಿ ನದಿ ಕಲುಷಿಕೆಯಾಗಲು ಕಾರಣವಾಗುತ್ತಿದೆ. ಇದರಿಂದ ಜನರ ಆರೋಗ್ಯ ಮತ್ತು ಜಲಚರಗಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ನೋಟೀಸ್‍ನಲ್ಲಿ ತಿಳಿಸಲಾಗಿದ್ದು, ಕರ್ನಾಟಕ ಪುರಸಭಾ ಅಧಿನಿಯಮ 1964ರ ಕಲಂ 202ರ ಸ್ಪಷ್ಟ ಉಲ್ಲಂಘನೆಯಾಗಿದ್ದು ಕ್ರಿಮಿನಲ್ ಅಪರಾಧವಾಗಿರುತ್ತದೆ. 25 ಸಾವಿರ ರೂ. ದಂಡವನ್ನು ಕಚೇರಿಯಲ್ಲಿ ಪಾವತಿಸುವಂತೆ ತಿಳಿಸಲಾಗಿದೆ.
ಶೌಚಾಲಯದ ಗುಂಡಿಯು ಭರ್ತಿಯಾಗಿದಲ್ಲಿ ನಿಗದಿತ ಶುಲ್ಕವನ್ನು ಕಛೇರಿಗೆ ಪಾವತಿಸಿ ಸಕ್ಕಿಂಗ್ ಯಂತ್ರದ ಮೂಲಕ ಗುಂಡಿಯಲ್ಲಿರುವ ಶೌಚಾಲಯ ತ್ಯಾಜ್ಯ ಖಾಲಿ ಮಾಡಿಸಿಕೊಳ್ಳಬೇಕು. ತಪ್ಪಿದಲ್ಲಿ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುವದು ಎಂದು ಮುಖ್ಯಾಧಿಕಾರಿ ಸುಜಯ್ ಕುಮಾರ್ ನೋಟೀಸ್ ನಲ್ಲಿ ಸೂಚಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪಪಂ ಆರೋಗ್ಯ ಅಧಿಕಾರಿ ಉದಯ್, ದಫೇದಾರ್ ಕುಮಾರ್ ನೇತೃತ್ವದಲ್ಲಿ ಪೌರಕಾರ್ಮಿಕ ಸಿಬ್ಬಂದಿಗಳು ಪಟ್ಟಣದ ವಿವಿಧೆಡೆ ಕಾರ್ಯಾಚರಣೆ ನಡೆಸುತ್ತಿದ್ದು, ಕಟ್ಟಡಗಳಿಂದ ನೇರವಾಗಿ ಚರಂಡಿಗೆ ಪೈಪ್ ಮೂಲಕ ಕಲುಷಿತ ನೀರನ್ನು ಹರಿಸುತ್ತಿರುವ ಪ್ರಕರಣಗಳನ್ನು ಪತ್ತೆಹಚ್ಚಲು ಕ್ರಮಕೈಗೊಂಡಿದ್ದಾರೆ ಎಂದು ಮುಖ್ಯಾಧಿಕಾರಿ ಸುಜಯ್‍ಕುಮಾರ್ ತಿಳಿಸಿದ್ದಾರೆ.