ಮಡಿಕೇರಿ, ಜ.25 : ನಗರದ ಫೀ.ಮಾ.ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ತಾ.29 ರಂದು ಪತ್ರಿಕೋದ್ಯಮ ವಿಚಾರ ಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ತಾ.29 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಫೀ.ಮಾ. ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ಸಂವಾದ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಡಿ.ತಿಮ್ಮಯ್ಯ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಫೀ.ಮಾ.ಕಾರ್ಯಪ್ಪ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆ ಶೋಭಾ ಸುಬ್ಬಯ್ಯ ವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿದ್ದು, ಶಕ್ತಿ ದಿನ ಪತ್ರಿಕೆಯ ಸಹಾಯಕ ಸಂಪಾದಕ ಚಿ.ನಾ.ಸೋಮೇಶ್ “ಪತ್ರಿಕೋದ್ಯಮದಲ್ಲಿ ಯುವಜನತೆಗಿರುವ ವಿಫುಲ ಅವಕಾಶಗಳು” ಎಂಬ ವಿಷಯ ಮಂಡನೆ ಮಾಡಲಿದ್ದಾರೆ. ಚಿತ್ತಾರ ವಾಹಿನಿಯ ನಿರ್ದೇಶಕ ಆನಂದ್ ಕೊಡಗು “ಮಾಧ್ಯಮದಲ್ಲಿ ಸುದ್ದಿ ತಯಾರಿ ಹೇಗೆ? ಎಂಬದರ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ. ವಿಜಯ ಕರ್ನಾಟಕ ವರದಿಗಾರ್ತಿ ಉದಿಯಂಡ ಜಯಂತಿ “ಪತ್ರಿಕೋದ್ಯಮ ಶಿಕ್ಷಣ ಮತ್ತು ವೃತ್ತಿ”ಎಂಬ ವಿಷಯ, ಶಕ್ತಿ ಪತ್ರಿಕೆಯ ಉಪ ಸಂಪಾದಕ ಸಂತೋಷ್ ಕುಡೆಕಲ್ “ಸಮಾಜದಲ್ಲಿ ಪತ್ರಕರ್ತನ ಹೊಣೆಗಾರಿಕೆ” ಎಂಬ ವಿಷಯವನ್ನು ಮಂಡನೆ ಮಾಡಲಿದ್ದಾರೆ ಎಂದು ಸವಿತಾರೈ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಸಂಘದ ಖಜಾಂಚಿ ಅರುಣ್‍ಕುಮಾರ್ ಉಪಸ್ಥಿತರಿದ್ದರು.