ಗುಡ್ಡೆಹೊಸೂರು, ಜ. 26: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಾರ್ಷಿಕೋತ್ಸವ ಅದ್ಧೂರಿಯಾಗಿ ನಡೆಯಿತು. ಇಲ್ಲಿನ ಕಲಾಮಂದಿರದಲ್ಲಿ ವಿಶಿಷ್ಟ ರೀತಿಯಲ್ಲಿ ಸುಮಾರು 30 ಮಂದಿ ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯ ನಡೆಯಿತು.
ಕಾರ್ಯಕ್ರಮದ ಆಧ್ಯಕ್ಷತೆಯನ್ನು ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಬೋಧ ಸ್ವರೂಪಾನಂದ ಸ್ವಾಮೀಜಿ ವಹಿಸಿದ್ದರು. ಮೈಸೂರಿನ ಜಾನಪದ ವಿದ್ವಾಂಸ ಪಿ.ಕೆ. ರಾಜಶೇಖರ್ ಶಾಲಾ ಸಂಚಿಕೆಯನ್ನು ಬಿಡುಗಡೆ ಮಾಡಿದರು. ನಂತರ ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು. ಶಾಲಾ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ ಪ್ರಾಸ್ತಾವಿಕ ನುಡಿಯಾಡಿ, ಬಸವನಹಳ್ಳಿಯ ಶಾಲೆಯು ನಡೆದು ಬಂದ ಹಾದಿಯ ಬಗ್ಗೆ ತಿಳಿಸಿದರು.
10ನೇ ತರಗತಿ ವಿದ್ಯಾರ್ಥಿ ಹರ್ಷಿತ್ ಶಾಲಾ ವರದಿ ಮಂಡಿಸಿದರು. ಈ ಸಂದರ್ಭ ಸ್ವಾಮೀಜಿಯವರಿಂದ ಆಶೀರ್ವಚನ ನಡೆಯಿತು. ಕೂಡಿಗೆಯ ಡಯಟ್ನ ಹಿರಿಯ ಉಪಾನ್ಯಾಸಕ ಕೆ.ವಿ. ಸುರೇಶ್, ತಾ.ಪಂ. ಸದಸ್ಯೆ ಪುಷ್ಪ, ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಸಿ.ಆರ್. ಭಾರತಿ ಮತ್ತು ಕುಶಾಲನಗರ ಆರಕ್ಷಕ ಉಪ ನಿರೀಕ್ಷಕ ಪಿ.ಪಿ. ಸ್ವಾಮೀಗೌಡ ಉಪಸ್ಥಿತರಿದ್ದರು.