ಮಡಿಕೇರಿ, ಜ. 26: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಜಯಂತಿ ಆಚರಣೆಗೆ ಸರ್ಕಾರ ರೂ.10 ಲಕ್ಷ ಹಣ ಘೋಷಣೆ ಮಾಡಿದ್ದು, ಜಿಲ್ಲಾಧಿಕಾರಿಗಳು ವೈಯಕ್ತಿಕ ಕಾರಣದಿಂದ ರಜೆ ಇರುವ ಹಿನ್ನೆಲೆಯಲ್ಲಿ ಪ್ರಬಾರ ಜಿಲ್ಲಾಧಿಕಾರಿಯವರ ನೇತೃತ್ವದಲ್ಲಿ ಕಾರ್ಯಪ್ಪ ಅವರ ಜಯಂತಿಯನ್ನು ಉತ್ತಮವಾಗಿ ಆಚರಿಸಲಾಗುವದು ಎಂದು ಉಸ್ತುವಾರಿ ಸಚಿವ ಸಾರಾ ಮಹೇಶ್ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಗೆ ವಿಶೇಷ ಜಿಲ್ಲಾಧಿಕಾರಿಯವರನ್ನು ನೇಮಕ ಮಾಡಲಿದ್ದು, ಪುನರ್ವಸತಿ ಕಾರ್ಯಗಳನ್ನು ಚುರುಕುಗೊಳಿಸಲಾಗುವದು ಎಂದು ಸಚಿವರು ಮಾಹಿತಿಯಿತ್ತರು. ಮೈತ್ರಿ ಸರಕಾರದ ವಿರುದ್ಧ ಬಿಜೆಪಿ ಮಾಡುತ್ತಿರುವ ಆಪರೇಷನ್ ಕಮಲ ‘ಮಿಸ್ಫೈರ್’ ಆಗುತ್ತಿದೆ ಎಂದು ಲೇವಡಿ ಮಾಡಿದರು. ದಿ. ಶಿವಕುಮಾರ ಸ್ವಾಮೀಜಿಯವರಿಗೆ ಭಾರತರತ್ನ ನೀಡುವ ಸಂಬಂಧ ಸಿಎಂ ಕುಮಾರಸ್ವಾಮಿಯವರು ಸದ್ಯದಲ್ಲೇ ಪ್ರಧಾನಮಂತ್ರಿಯನ್ನು ಭೇಟಿ ಮಾಡಿ ಮನವಿ ಮಾಡಲಿದ್ದಾರೆ ಎಂದು ಸಾರಾ ಮಹೇಶ್ ಹೇಳಿದರು.