ಶ್ರೀಮಂಗಲ, ಜ. 26: ದಿನಸಿ ಅಂಗಡಿಗಳಲ್ಲಿ ಕೀಟನಾಶಕ ಮತ್ತು ಕ್ರಿಮಿನಾಶಕಗಳನ್ನು ಮಾರಾಟ ಮಾಡುವದು ಕಾನೂನು ಪ್ರಕಾರ ಅಪರಾಧವಾಗಿದ್ದು, ಈ ನಿಟ್ಟಿನಲ್ಲಿ ಕೃಷಿ ಇಲಾಖಾಧಿಕಾರಿಗಳಿಂದ ದಿನಸಿ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ ಎಂದು ಶ್ರೀಮಂಗಲ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎ.ಪಿ. ಮೀರ ಹೇಳಿದ್ದಾರೆ.

ಶ್ರೀಮಂಗಲ ಪಟ್ಟಣದ ದಿನಸಿ ಅಂಗಡಿಗಳಿಗೆ ದಿಡೀರ್ ಭೇಟಿ ನೀಡಿ ಈ ಬಗ್ಗೆ ಅವರು ಪರಿಶೀಲಿಸಿದರು. ಕೀಟನಾಶಕ ಕಾಯ್ದೆ 1968ರ ಸೆಕ್ಷನ್ 10ಸಿ ಪ್ರಕಾರ ಪರವಾನಗೆ ಪಡೆಯದೆ ಆಹಾರ ಪದಾರ್ಥಗಳನ್ನು ದಾಸ್ತಾನು ಇರಿಸಿದ ಸ್ಥಳದಲ್ಲಿ ಕೀಟನಾಶಕ ಮಾರಾಟ ಮಾಡುವದು ಅಪರಾಧವಾಗಿರುತ್ತದೆ. ಇದೇ ಕಾಯ್ದೆಯ ಸೆಕ್ಷನ್ 18ರ ಪ್ರಕಾರ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚು ಬೆಲೆಯಲ್ಲಿ ಕೀಟನಾಶಕಗಳನ್ನು ಮಾರಾಟ ಮಾಡುವದು ಸಹ ಅಪರಾಧವಾಗಿರುತ್ತದೆ ಎಂದರು.

ವೀರಾಜಪೇಟೆ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಎ. ರೀನ ಕೀಟನಾಶಕ ಮಾರಾಟ ಮಾಡುವದು ಗೊತ್ತಾದರೆ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವದು ಎಂದು ಹೇಳಿದರು.

ಅಂಗಡಿಗಳಲ್ಲಿ ಕೀಟನಾಶಕ ಅಕ್ರಮವಾಗಿ ಮಾರಾಟ ಮಾಡುವದನ್ನು ಪತ್ತೆ ಹಚ್ಚಿದ ಸಂದರ್ಭ, ಅಂಗಡಿಯ ಮಾಲೀಕರೋರ್ವರು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.