ಮಡಿಕೇರಿ, ಜ. 26: ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರ ಕಟಿಬದ್ಧವಾಗಿದೆ ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಇಲಾಖೆ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ. ಮಹೇಶ್ ಹೇಳಿದರು.ಜಿಲ್ಲಾಡಳಿತದ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಸಮಾಜವಾದಿ ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ರೂಪಿಸುವಲ್ಲಿ ಅನೇಕ ದೇಶ ಭಕ್ತರು, ಸ್ವಾತಂತ್ರ್ಯ ಹೋರಾಟಗಾರರು, ರಾಷ್ಟ್ರ ನಾಯಕರು ಶ್ರಮಿಸಿದ್ದಾರೆ. ಅವರೆಲ್ಲರ ತ್ಯಾಗ ಬಲಿದಾನಗಳಿಂದಾಗಿ ಇಂದು ಭಾರತ ಬಲಿಷ್ಠ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರೂಪುಗೊಂಡಿದೆ ಈ ಸುಧೀರ್ಘ 69 ವರ್ಷಗಳ ಅವಧಿಯಲ್ಲಿ ಸಾಧಿಸಿರುವದು ಅಪಾರ. ಸಾಧಿಸಬೇಕಾಗಿರುವದು ಇನ್ನೂ ಇದೆ. ದೇಶದ ಜನರಿಗೆ ನಮ್ಮ ಸರ್ಕಾರ ಎಲ್ಲಾ ಜಾತಿ, ಧರ್ಮ, ಭಾಷೆ ಗಡಿಗಳನ್ನು ಮೀರಿ ಸರ್ವರ ಹಿತಕ್ಕಾಗಿ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದರು.ಕಳೆದ ಆಗಸ್ಟ್ನಲ್ಲಿ ಬಿದ್ದ ಅತಿಯಾದ ಮಳೆಯಿಂದ ಇಡೀ ಕೊಡಗು ಜಿಲ್ಲೆ ತತ್ತರಿಸಿ ಹೋಯಿತು. ನಾಗರಿಕರು ಮನೆ ಮಾರುಗಳನ್ನು ಕಳೆದುಕೊಂಡು ನಿರಾಶ್ರಿತರಾದರು. ನಮ್ಮ ಸರ್ಕಾರ ಈ ನಿರಾಶ್ರಿತರಿಗೆ ಪುನರ್ ಬದುಕನ್ನು ಕಟ್ಟಿಕೊಡಲು ಅಪಾರವಾಗಿ ಶ್ರಮಿಸುತ್ತಿದೆ.
ಪ್ರಕೃತಿ ವಿಕೋಪದಿಂದ ಮೂಲಭೂತ ಸೌಕರ್ಯಗಳಾದ ರಸ್ತೆ, ಸೇತುವೆಗಳು, ಶಾಲಾ ಕಾಲೇಜು, ಅಂಗನವಾಡಿ ಕಟ್ಟಡಗಳು ಹಾನಿಯಾಗಿದ್ದು, ಅವುಗಳನ್ನು ಪುನರ್ನಿರ್ಮಿಸಲು ನಮ್ಮ ಸರ್ಕಾರ ಎಲ್ಲಾ ತುರ್ತು ನೆರವುಗಳನ್ನು ನೀಡಿದೆ. ಜಿಲ್ಲೆಯ ಮುಖ್ಯ ರಸ್ತೆಗಳ ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆಗೆ 99.22 ಕೋಟಿ ಅನುದಾನ ನೀಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿದೆ.
ಪ್ರಕೃತಿ ವಿಕೋಪದಿಂದ ಮನೆಗಳನ್ನು ಕಳೆದುಕೊಂಡ ಜನರ ಬದುಕನ್ನು ಹಸನು ಮಾಡಲು ಅವರಿಗೆ ಸರ್ಕಾರದಿಂದ ಮನೆಕಟ್ಟಿ ಕೊಡಲು ಜಿಲ್ಲೆಯ ಕರ್ಣಂಗೇರಿ, ಮದೆ, ಬಿಳಿಗೇರಿ, ಗಾಳಿಬೀಡು, ಜಂಬೂರು ಪ್ರದೇಶಗಳಲ್ಲಿ ಜಮೀನು ಗುರುತಿಸಿ, ಪ್ರತೀ ಮನೆಯನ್ನು 9.85 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಬಡಾವಣೆಯೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ರೈತರಲ್ಲಿ ಆತ್ಮವಿಶ್ವಾಸ ತುಂಬಲು ಸರ್ಕಾರ ‘ರೈತ ಬಂಧು’ ಬೆಳೆ ಸಾಲಮನ್ನಾ ಯೋಜನೆಯನ್ನು ಜಾರಿಗೆ ತಂದಿದೆ. ಜಿಲ್ಲೆಯ ಒಟ್ಟು 47,346 ರೈತರು ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕ್ಗಳಲ್ಲಿ ಮಾಡಿದ್ದ ಬೆಳೆ ಸಾಲ ಮನ್ನಾ ಮಾಡಲು ರೈತರಿಂದ ನೋಂದಣಿಗಾಗಿ ಅರ್ಜಿ
(ಮೊದಲ ಪುಟದಿಂದ) ಸ್ವೀಕರಿಸಲು ತಂತ್ರಾಂಶ ರೂಪಿಸಿ ಅರ್ಜಿಗಳನ್ನು ಸ್ವೀಕರಿಸುತ್ತಿದ್ದು, ಶೇ. 90 ರಷ್ಟು ರೈತರ ನೋಂದಣಿ ಕಾರ್ಯ ಪೂರ್ಣಗೊಂಡಿದ್ದು, ಸಾಲ ಮನ್ನಾ ಬಗ್ಗೆ ಪರಿಶೀಲನೆ ಪ್ರಗತಿಯಲ್ಲಿದೆ.
ಕಂದಾಯ ಇಲಾಖೆಯಿಂದ ವಸತಿ, ಸ್ಮಶಾನ, ಕಸವಿಲೇವಾರಿ ಘಟಕ ಸ್ಥಾಪನೆ ಇತ್ಯಾದಿ ಸಾರ್ವಜನಿಕ ಉದ್ಧೇಶಗಳಿಗಾಗಿ ಒಟ್ಟು 149.18 ಎಕ್ರೆ ಜಮೀನನ್ನು ಕಾಯ್ದಿರಿಸಲಾಗಿದೆ. ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಈ ಹಿಂದೆ ಅರ್ಜಿಸಲು ಸಾಧ್ಯವಾಗದಿದ್ದ ಪ್ರಕರಣಗಳಲ್ಲಿ ಪ್ರಸ್ತುತ ಅರ್ಜಿ ಸಲ್ಲಿಸಿ ಸಕ್ರಮ ಮಾಡಿಸಿಕೊಳ್ಳಲು ಅನುವಾಗುವಂತೆ ನಮೂನೆ-57ನ್ನು ಜಾರಿಗೊಳಿಸಿದ್ದು, ಅರ್ಹ ಫಲಾನುಭವಿಗಳಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ. ಹಾಗೆಯೇ ವಿವಿಧ ರೀತಿಯ ಪಿಂಚಣಿ ಯೋಜನೆಗಳಡಿಯಲ್ಲಿ 2018-19ನೇ ಸಾಲಿನಲ್ಲಿ ಒಟ್ಟು 2,257 ಪ್ರಕರಣಗಳಲ್ಲಿ ಫಲಾನುಭವಿಗಳಿಗೆ ಮಾಸಾಶನಗಳನ್ನು ಮಂಜೂರು ಮಾಡಲಾಗಿದೆ.
ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡಲು, ಸ್ಥಳೀಯ ಸಂಪನ್ಮೂಲಗಳ ಬಳಕೆ ಮಾಡಿಕೊಂಡು ಸ್ಥಳೀಯರಿಗೆ ಉದ್ಯೋಗಾವಕಾಶಕ್ಕಾಗಿ ಸರ್ಕಾರ, ಕಾಂಪೀಟ್ ವಿತ್ ಚೈನಾ ಹೆಸರಿನಲ್ಲಿ 2ನೇ ಸ್ತರದ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುತ್ತಿದೆ. ಪ್ರತಿ ಜಿಲ್ಲೆಯಲ್ಲಿ ತಲಾ 1 ಲಕ್ಷ ಉದ್ಯೋಗ ನೀಡಲು 9 ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್ಗಳನ್ನು ಆರಂಭಿಸುತ್ತಿದೆ.
ಆದ್ಯತಾ ಕುಟುಂಬಗಳ ಗರ್ಭಿಣಿ ಮಹಿಳೆಯರು ಮತ್ತು ಬಾಣಂತಿಯರಿಗೆ ಆರು ತಿಂಗಳ ಅವಧಿಗೆ ಹಣಕಾಸಿನ ನೆರವು ನೀಡಲು ಮಾತೃ ಹೃದಯದ ಸರ್ಕಾರ, ಮುಖ್ಯಮಂತ್ರಿಯವರ ಮಾತೃಶ್ರೀ ಯೋಜನೆಯನ್ನು ಜಾರಿಗೆ ತಂದಿದೆ. ತುಂಬು ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿರುತ್ತದೆ. ಈ ಅವಧಿಯಲ್ಲಿ ಅವರುಗಳು ದುಡಿಮೆ ಮಾಡದೆ ಮಗು ಹಾಗೂ ಅವರ ಕಾಳಜಿ ಮಾಡುವಂತಾಗಲು ಈ ಯೋಜನೆ ಜಾರಿಯಾಗಿದೆ.
ಕೊಡಗು ಜಿಲ್ಲೆ ಪ್ರವಾಸಿ ತಾಣವಾಗಿದ್ದು, ಕರ್ನಾಟಕದ ಕಾಶ್ಮೀರ ಎಂಬ ಹೆಸರು ಗಳಿಸಿದೆ. ಇತ್ತೀಚೆಗೆ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯ ಪ್ರವಾಸೋದ್ಯಮ ಕುಂಠಿತಗೊಂಡಿದ್ದು, ಪ್ರವಾಸೋದ್ಯಮವನ್ನೇ ನಂಬಿ ಬದುಕು ಸಾಗಿಸುತ್ತಿರುವ ಕುಟುಂಬಗಳ ಜಂಘಾ ಬಲವೇ ಹುದುಗಿ ಹೋಗಿತ್ತು. ಈ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬಲು ಮತ್ತು ಪ್ರವಾಸೋದ್ಯಮವನ್ನು ಪುನ:ಶ್ಚೇತನಗೊಳಿಸಲು ಜಿಲ್ಲೆಯಲ್ಲಿ ಸರ್ಕಾರದ ವತಿಯಿಂದ ಕೈಗೊಂಡ ಪ್ರವಾಸಿ ಉತ್ಸವ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಹುರುಪು ಬಂದಂತಾಗಿದೆ ಎಂದು ಸಾ.ರಾ. ಮಹೇಶ್ ಹೇಳಿದರು.
ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಮಾಜಿ ಸಚಿವರಾದ ಯಂ.ಸಿ. ನಾಣಯ್ಯ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್, ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ, ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೀನಿವಾಸ, ಉಪ ವಿಭಾಗಾಧಿಕಾರಿ ಟಿ. ಜವರೇಗೌಡ ಇತರರು ಇದ್ದರು.
ಈ ಬಾರಿಯ ಗಣರಾಜ್ಯೋತ್ಸವದಲ್ಲಿ ವೀರಾಜಪೇಟೆ ತಾಲೂಕಿನ ಗಿರಿಜನ ಆಶ್ರಮ ಶಾಲೆಯ ವಿದ್ಯಾರ್ಥಿಗಳು ‘ಬುಡಕಟ್ಟು ಸಾಂಸ್ಕøತಿಕ ನೃತ್ಯ’ ಪ್ರದರ್ಶನ ವಿಶೇಷವಾಗಿತ್ತು. ಜೊತೆಗೆ ‘ಮತದಾನದ ಮಹತ್ವ’ ಕುರಿತ ಸಂದೇಶ ಒಳಗೊಂಡ ಸ್ತಬ್ಧಚಿತ್ರ ಗಮನಸೆಳೆಯಿತು.