ಪೊನ್ನಂಪೇಟೆ, ಜ. 26: ಹುಣಸೂರು- ಗೋಣಿಕೊಪ್ಪ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸುವಂತೆ ಕೋರಿ ರಾಜ್ಯ ಹೈಕೋರ್ಟ್‍ನಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಶಕ್ತಿ ಅರ್ಜಿಯ ಹಿಂದೆ ಕೊಡಗಿನ ಕೆಲ ಜನವಿರೋಧಿ ಡೋಂಗಿ ಪರಿಸರವಾದಿಗಳ ನೇರ ಕೈವಾಡವಿದೆ ಎಂದು ಮಾಜಿ ಶಾಸಕ ಎ.ಕೆ ಸುಬ್ಬಯ್ಯ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಕೆಲ ಉನ್ನತ ಅರಣ್ಯಧಿಕಾರಿಗಳ ಪಾತ್ರವೂ ಇದರಲ್ಲಿ ತಳ್ಳಿ ಹಾಕುವಂತಿಲ್ಲ. ಆದ್ದರಿಂದ ಕೊಡಗಿನ ಜನತೆ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಗೊಳಿಸಿರುವ ಅವರು, ಹುಣಸೂರಿನಿಂದ ಆನೆಚೌಕೂರು- ಮತ್ತಿಗೋಡು ಮಾರ್ಗವಾಗಿ ಕೊಡಗಿನ ತಿತಿಮತಿ- ಗೋಣಿಕೊಪ್ಪಲು ಕಡೆಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸುವಂತೆ ಕೋರಿ ಪರಿಸರವಾದಿಗಳೆಂದು ಹಣೆಪಟ್ಟಿ ಕಟ್ಟಿಕೊಂಡಿರುವ ಬೆಂಗಳೂರು ಮೂಲದ ವ್ಯಕ್ತಿಗಳಿಬ್ಬರು ರಾಜ್ಯ ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ (ಪಿ.ಐ.ಎಲ್.) ದಾಖಲಿಸಿರುವದು ಮತ್ತು ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ಪ್ರತಿವಾದಿಗಳಿಗೆ ನೋಟೀಸ್ ಜಾರಿ ಮಾಡಿದೆ ಎಂದಿದ್ದಾರೆ.
ಕಳೆದ 3 ತಿಂಗಳ ಹಿಂದೆ ಮತ್ತಿಗೋಡು ಹೆದ್ದಾರಿ ಬಳಿ ಅಲ್ಲಿನ ಶಿಬಿರದ ಆನೆಯೊಂದು ವಾಹನ ಅಪಘಾತದಲ್ಲಿ ಮೃತ್ತಪಟ್ಟ ಸಂದರ್ಭದಲ್ಲೇ ಇದನ್ನು ನಿರೀಕ್ಷಿಸಿದ್ದೆ. ಕಾರಣ ಇಂತಹ ಸಂದರ್ಭಗಳನ್ನು ದುರುಪಯೋಗ ಪಡಿಸಿಕೊಳ್ಳಲೆಂದೇ ಪರಿಸರವಾದಿಗಳು ಕಾಯುತ್ತಿರುತ್ತಾರೆ. ನ್ಯಾಯಾಲಯದಲ್ಲಿ ಅರ್ಜಿಯೊಂದು ಸಲ್ಲಿಕೆಯಾದ ಕ್ಷಣದಲ್ಲೆ ಇವರ ಖಾತೆಗೆ ಹಣ ಸಂದಾಯವಾಗುತ್ತದೆ. ವಿದೇಶಿ ದೇಣಿಗೆ ಹಣಕ್ಕೆ ಕಣ್ಣಿಟ್ಟುಕೊಂಡು ಅಗತ್ಯವಿಲ್ಲದ ವಿಚಾರಗಳಿಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಸಲು ಹದ್ದಿನಂತೆ ಅವಕಾಶಕ್ಕಾಗಿ ಕಾಯುತ್ತಿರುವದು ಪರಿಸರವಾದಿಗಳ ದಿನನಿತ್ಯದ ಕಸುಬಾಗಿ ಹೋಗಿದೆ ಎಂದು ಸುಬ್ಬಯ್ಯ ಅವರು ಕಿಡಿ ಕಾರಿದ್ದಾರೆ.
ಟಾಟು ಮೊಣ್ಣಪ್ಪ ಟೀಕೆ
ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜಿಲ್ಲೆಯ ಬೆರಳೆಣಿಕೆಯಷ್ಟು ಮಂದಿ ಜನ ವಿರೋಧಿ ಕಾರ್ಯಗಳಲ್ಲಿ ತೊಡಗಿದ್ದು, ಅಘೋಷಿತ ದಿಗ್ಬಂಧನ ಹೇರುವ ಷಡ್ಯಂತ್ರ ನಡೆಯುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟುಮೊಣ್ಣಪ್ಪ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲೆಯ ಜನರ ನೆಮ್ಮದಿ ಕೆಡಿಸುವ ಡೋಂಗಿ ಪರಿಸರವಾದಿಗಳ ತೆರೆಮರೆಯ ಪ್ರಯತ್ನಗಳು ಮುಂದುವರೆದಿದ್ದು, ಇದೀಗ ಮತ್ತಿಗೋಡು ಆನೆ ಶಿಬಿರದ ಬಳಿ ಹಾದು ಹೋಗುವ ರಾಜ್ಯ ಹೆದ್ದಾರಿ ಸಂಖ್ಯೆ-90ರ 11 ಕಿ.ಮೀ. ಉದ್ದದ ರಸ್ತೆಯಲ್ಲಿ ಸಂಜೆ 6 ರಿಂದ ಬೆಳಗ್ಗೆ 6ರ ವರೆಗೆ ವಾಹನ ಸಂಚಾರ ನಿಷೇಧಿಸಬೇಕೆನ್ನುವ ಬೇಡಿಕೆ ಪ್ರಸ್ತಾಪವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆನೆಗಳ ಸಂರಕ್ಷಣೆ ಹಿನ್ನೆಲೆಯಲ್ಲಿ ಈ 11 ಕಿ. ಮೀ. ಉದ್ದದ ರಸ್ತೆಗೆ ಪರ್ಯಾಯ ರಸ್ತೆ ನಿರ್ಮಾಣ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಈ ರೀತಿಯ ನಿಯಮ ಜಾರಿಯಾದರೆ ದಕ್ಷಿಣ ಕೊಡಗಿನ ಜನರ ಪರಿಸ್ಥಿತಿ ಶೋಚನೀಯವಾಗಲಿದ್ದು, ಅಘೋಷಿತ ದಿಗ್ಬಂಧನ ಹೇರಿದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.