(ಕಾಯಪಂಡ ಶಶಿ ಸೋಮಯ್ಯ)
ಮಡಿಕೇರಿ, ಜ. 25: ದೇಶ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವದಂತಹ ರಾಷ್ಟ್ರೀಯತೆಯನ್ನು ಸಾರುವ ದೇಶ ಪ್ರೇಮವನ್ನು ಪ್ರತಿಬಿಂಬಿಸುವ ಯುವ ಪೀಳಿಗೆಗೆ ದೇಶಾಭಿಮಾನ ಮೂಡಿಸುವ ಆಚರಣೆಗಳನ್ನು ಸಂಭ್ರಮ - ಸಡಗರಗಳಿಂದ ಇಂದು ನಾವೆಲ್ಲರೂ ಕಾಣುತ್ತೇವೆ.
ಈ ನಿಟ್ಟಿನಲ್ಲಿ ಹಲವಾರು ಮಂದಿಯ ಕೊಡುಗೆಗಳಿವೆ. ಇದು ಒಂದೆಡೆಯಾದರೆ ಸ್ವಾತಂತ್ರ್ಯ ಬಂದ ನಂತರವೂ, ದೇಶಕ್ಕೆ ಹತ್ತು - ಹಲವಾರು ಅಪಾಯಗಳು ಎದುರಾಗಿವೆ. ಇದು ಆಂತರಿಕವಾಗಿರಬಹುದು. ಶತ್ರು ರಾಷ್ಟ್ರಗಳಿಂದಾದರೂ ಇರಬಹುದು. ಇದನ್ನು ದಿಟ್ಟವಾಗಿ ಎದುರಿಸಿ ಜಾಗತಿಕ ಮಟ್ಟದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿಯುತ್ತಿರುವವರು ನಮ್ಮ ಹೆಮ್ಮೆಯ ಸೈನಿಕರು.
ಕೊಡಗು ರಾಜ್ಯದ ಪುಟ್ಟ ಜಿಲ್ಲೆಯಾದರೂ ದೇಶದ ರಕ್ಷಣಾಪಡೆಗೆ ದೊಡ್ಡ ಕೊಡುಗೆಯನ್ನೇ ನೀಡಿರುವದು ಸಾರ್ವಕಾಲಿಕ ಸತ್ಯ. ಇಂತಹವರ ನಡುವೆ ದೇಶದ ರಕ್ಷಣೆಗೆ ತೆರಳಿ ತಮ್ಮ ತವರು ಜಿಲ್ಲೆಗೆ ಜೀವಂತವಲ್ಲದಿದ್ದರೂ ಕನಿಷ್ಟ ಪಾರ್ಥಿವ ಶರೀರ ಕೂಡ ಬರದ... ವೀರ ಮರಣವನ್ನು ಅಪ್ಪಿದ ಸೈನಿಕರೊಬ್ಬರ ಕಥೆಯಿದು... ಒಳ್ಳೆಯ ಕೆಲಸ ಮಾಡಿದ್ದರೆ ಅವರು ಎಂದಿಗೂ ಸ್ಮರಣೀಯರು ಎಂಬದಕ್ಕೆ ಇದೊಂದು ನಿದರ್ಶನವೂ ಆಗಿದೆ.
ಇವರೇ ಬಯವಂಡ ಬಿ. ಸುಬ್ಬಯ್ಯ...
ಅದು 1962ನೇಯ ಇಸವಿ ಭಾರತದೊಂದಿಗೆ ಚೈನಾ ರಾಷ್ಟ್ರ ಯುದ್ಧಕ್ಕೆ ಇಳಿದಿತ್ತು. ಈ ಯುದ್ಧದಲ್ಲಿ ಎಷ್ಟೋ ಸೈನಿಕರು ವೀರ ಮರಣವನ್ನು ಹೊಂದಿದ್ದಾರೆ. ಇವರಲ್ಲಿ ಒಬ್ಬರು ದಕ್ಷಿಣ ಕೊಡಗಿನ ಹುದಿಕೇರಿಯ ಬಯವಂಡ ಬಿ. ಸುಬ್ಬಯ್ಯ ಅವರು...
ಬಯವಂಡ ಬೋಪಯ್ಯ ಹಾಗೂ ಕಾವೇರಮ್ಮ ದಂಪತಿಯ ಹಿರಿಯ ಪುತ್ರರಾಗಿದ್ದ ಬಿ.ಬಿ. ಸುಬ್ಬಯ್ಯ ಅವರು ಭಾರತೀಯ ಸೇನೆಗೆ ಸೇರಿದ್ದರು. 44 ಲೈಟ್ ರೆಜಿಮೆಂಟ್‍ನಲ್ಲಿ ಇವರು ಅರುಣಾಚಲ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದಾಗ ಭಾರತ - ಚೈನಾ ಯುದ್ಧ ನಡೆದಿತ್ತು. ಈ ಯುದ್ಧದಲ್ಲಿ ಇವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ.
ಯುದ್ಧ ಸ್ಮಾರಕದಲ್ಲಿ ಸುಬ್ಬಯ್ಯ ಹೆಸರು...
ಈ ಯುದ್ಧದಲ್ಲಿ ಮಡಿದವರಿಗಾಗಿ ಅರುಣಾಚಲ ಪ್ರದೇಶದ ತವಾಂಗ್ ಎಂಬಲ್ಲಿ ಯುದ್ಧ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಈ ವಿಭಾಗದಲ್ಲಿ ಹುತಾತ್ಮರಾದ ಸುಮಾರು 2440 ರಷ್ಟು ಅಧಿಕಾರಿಗಳು... ಸೈನಿಕರ ಹೆಸರನ್ನು ಈ ಯುದ್ಧ ಸ್ಮಾರಕದಲ್ಲಿ ಅಳವಡಿಸಲಾಗಿದೆ. ಇದೇ ಯುದ್ಧದಲ್ಲಿ ಜೋಗಿಂದರ್ ಸಿಂಗ್ ಎಂಬವರೂ ವೀರತ್ವ ತೋರಿ ಹುತಾತ್ಮರಾಗಿದ್ದು, ಇವರಿಗೆ ಪರಮವೀರ ಚಕ್ರವನ್ನು ಪ್ರದಾನ ಮಾಡಲಾಗಿದೆ. ಅತ್ಯಾಕರ್ಷಕವಾಗಿ ಇವರೆಲ್ಲರ ಗೌರವಾರ್ಥವಾಗಿ ಈ ಯುದ್ಧ ಸ್ಮಾರಕವನ್ನು ನಿರ್ಮಿಸಲಾಗಿದೆ. ಹುತಾತ್ಮರಾದವರ ಪಟ್ಟಿಯಲ್ಲಿ ಕೊಡಗಿನವರಾದ ಲ್ಯಾನ್ಸ್ ನಾಯಕ್ ಆಗಿದ್ದ ಬಿ.ಬಿ. ಸುಬ್ಬಯ್ಯ ಅವರ ಹೆಸರೂ ಇದೆ...
ಬೆಳಕಿಗೆ ಬಂದದ್ದು...
ಜಿಲ್ಲೆಯ ನಿವಾಸಿ ಮೈಸೂರಿನಲ್ಲಿ ಉದ್ಯೋಗದಲ್ಲಿರುವ ಅಮ್ಮುಣಿಚಂಡ ದರ್ಶನ್ ಅಪ್ಪಚ್ಚು ಎಂಬವರು ಇತ್ತೀಚೆಗೆ ಇಲ್ಲಿಗೆ ಸ್ನೇಹಿತರೊಂದಿಗೆ ಪ್ರವಾಸ ತೆರಳಿದ್ದ ಸಂದರ್ಭ ಯುದ್ಧ ಸ್ಮಾರಕದಲ್ಲಿ ಬಿ.ಬಿ. ಸುಬ್ಬಯ್ಯ ಹೆಸರು ಗಮನಿಸಿ ಇವರು ಕೊಡಗಿನವರೆಂದು ಭಾವಿಸಿ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಇದನ್ನು ಗಮನಿಸಿ ಅವರ ಬಂಧುವೊಬ್ಬರಲ್ಲಾದ ಕಡೇಮಾಡ ಪ್ರಮೋದ್ ತಿಮ್ಮಯ್ಯ ಇದನ್ನು ಖಚಿತಪಡಿಸಿದ್ದಾರೆ...
ಆಗ ಏನಾಗಿತ್ತು...
ಈ ಯುದ್ಧದ ಸಂದರ್ಭ ಕಾರ್ಯಾಚರಣೆಯಲ್ಲಿದ್ದ ಸುಬ್ಬಯ್ಯ ಅವರು ಹುತಾತ್ಮರಾಗಿದ್ದರು... 1962 ರ ನವೆಂಬರ್ 18 ರಂದು ಈ ಬಗ್ಗೆ ಮಾಹಿತಿ ಹೊರ ಬಿದ್ದಿತ್ತು... ಆದರೆ ಅವರ ಪಾರ್ಥಿವ ಶರೀರ ಮಾತ್ರ ದೊರೆತಿರಲಿಲ್ಲ. ಆರು ತಿಂಗಳ ಬಳಿಕ ಒಂದು ಬಾಕ್ಸ್‍ನಲ್ಲಿ ಬಟ್ಟೆ... ಚಾಕು... ಇತ್ಯಾದಿಗಳನ್ನು ಕೊಡಗಿಗೆ ಕಳುಹಿಸಿಕೊಡಲಾಗಿದ್ದು, ಮನೆ ಮಂದಿ ಶಾಂತಿಪೂಜೆಯನ್ನು ನೆರವೇರಿಸಿದ್ದಾರೆ... ಈ ಬಗ್ಗೆ ಸುಬ್ಬಯ್ಯ ಅವರ ಸಹೋದರಿಯಾಗಿರುವ ನಿವೃತ್ತ ಶಿಕ್ಷಕಿ ಶ್ರೀಮಂಗಲದಲ್ಲಿರುವ ಬಾಚಂಗಡ ಮಾಯಮ್ಮ ಅವರು ‘ಶಕ್ತಿ’ ಇದರ ಹಿನ್ನೆಲೆ ಅರಸಿದಾಗ ತಮ್ಮ ನೆನಪಿನಂತೆ ವಿವರವಿತ್ತರು. ಅಲ್ಲದೆ ನೆಲ್ಲಿಹುದಿಕೇರಿಯವರಾದ ಪಾಲಚಂಡ ಉತ್ತಪ್ಪ ಅವರು ಈ ಸಂದರ್ಭ ಸುಬ್ಬಯ್ಯ ಇದ್ದ ಸ್ಥಳದಲ್ಲಿದ್ದು ಇವರಿಗೆ ಹೆಚ್ಚಿನ ಮಾಹಿತಿ ಇದೆ ಎಂದು ತಿಳಿಸಿದರು...
ಯುದ್ಧ ಸಂದರ್ಭದ ಮೆಲುಕು...
ಇದರಂತೆ ‘ಶಕ್ತಿ’ ನೆಲ್ಲಿಹುದಿಕೇರಿಯಲ್ಲಿರುವ ಇಳಿ ವಯಸ್ಸಿನವರಾದ ಮಾಜಿ ಯೋಧ ಹವಾಲ್ದಾರ್ ಪಾಲಚಂಡ ಡಿ. ಉತ್ತಪ್ಪ ಅವರನ್ನು ಸಂಪರ್ಕಿಸಿದಾಗ ಅವರು ತಟ್ಟನೆ ಕೇಳಿದ್ದು ಯಾರು... ಬಿ.ಬಿ. ಸುಬ್ಬಯ್ಯ ಅವರ ಕುರಿತಾಗಿ ಕೇಳುತ್ತಿದ್ದೀರೇನು ಎಂದು...!
ಉತ್ತಪ್ಪ ಅವರು ಹೇಳುವಂತೆ...
ಭಾರತ - ಚೀನಾ ಯುದ್ಧ ನಡೆದಾಗ ಸುಬ್ಬಯ್ಯರೊಂದಿಗೆ ಅದೇ ಸ್ಥಳದಲ್ಲಿ ಉತ್ತಪ್ಪ ಅವರು ಕರ್ತವ್ಯದಲ್ಲಿದ್ದರು. ಆಗಿನ ಸನ್ನಿವೇಶವನ್ನು ಸ್ಮರಿಸಿಕೊಂಡ ಅವರು ಈ ಕುರಿತು ಮಾಹಿತಿ ಒದಗಿಸಿದರು.
ಅದೊಂದು ತೀರಾ ಹಿಮಪಾತವಾಗುತ್ತಿದ್ದ ಸ್ಥಳ... ಅಲ್ಲಿ ಸಿಗ್ನಲ್ ಸೆಕ್ಷನ್‍ನಲ್ಲಿ ಇದ್ದ ಸುಬ್ಬಯ್ಯ ಅವರು ತಮ್ಮ ಮೇಲಧಿಕಾರಿ ಕ್ಯಾಪ್ಟನ್ ಬಿ.ಎಂ. ರಾಯ್ ಎಂಬವರೊಂದಿಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಮುಂಚೂಣಿಯಲ್ಲಿ ತೆರಳುತ್ತಿದ್ದ ಇವರುಗಳು ತಮ್ಮ ಹಿಂದಿನವರಿಗೆ ಶತ್ರುಗಳ ಕುರಿತಾಗಿ ಮಾಹಿತಿ ನೀಡುತ್ತಿದ್ದರು. ಒಂದು ಸಂದರ್ಭದಲ್ಲಿ ಇವರುಗಳು ದೂರವಾಗಿದ್ದಾರೆ... ಭಾರೀ ಬೆಟ್ಟವೊಂದನ್ನು ಕ್ಯಾಪ್ಟನ್ ರಾಯ್ ಹಾಗೂ ಸುಬ್ಬಯ್ಯ ಏರಿದ್ದರು... ಅಲ್ಲಿಂದ ಮಾಹಿತಿ ನೀಡುತ್ತಿದ್ದ ಇವರುಗಳು ಕಾರ್ಯಾಚರಣೆ ನಡುವೆ ಕಣ್ಮರೆಯಾಗಿದ್ದರು... ಬಳಿಕ ಪರಿಸ್ಥಿತಿ ತಿಳಿಯಾಗುತ್ತಿದ್ದಂತೆ ಕೆಲವರು ಸಂಕಷ್ಟದ ಸ್ಥಳಗಳಿಂದ ಮರಳಿದರಾದರೂ ಇವರುಗಳ ಸುಳಿವೇ ಸಿಕ್ಕಿರಲಿಲ್ಲ...
ಈ ಕಾರ್ಯಾಚರಣೆಯಲ್ಲಿ 2440 ರಷ್ಟು ಮಂದಿ ಸಾವಿಗೀಡಾಗಿದ್ದಾರೆ... 1970 ರಲ್ಲಿ ಸೇನೆಯಿಂದ ನಿವೃತ್ತರಾದ ಉತ್ತಪ್ಪ ಅವರು ಬಳಿಕ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯಲ್ಲೂ ಕರ್ತವ್ಯ ನಿರ್ವಹಿಸಿದ್ದು ಈ ಸಂದರ್ಭ ಶಿಕ್ಷಕಿಯಾಗಿದ್ದ ಸುಬ್ಬಯ್ಯ ಸಹೋದರಿ ಮಾಯಮ್ಮ ಅವರೊಂದಿಗೆ ಈ ಕುರಿತು ಹೇಳಿಕೊಂಡಿದ್ದರು...
ಸೇನಾ ಮೂಲಗಳಂತೆ ಇವರು ಯುದ್ಧದಲ್ಲಿ ಹುತಾತ್ಮರಾಗಿರುವ ವಿವರವಿದೆ... ಇದೇ ಯುದ್ಧದಲ್ಲಿ ಕುಂಜಿಲಗೇರಿ - ಪಾರಾಣೆಯ ವಿ.ಎಂ. ಕಾಳಯ್ಯ ಹಾಗೂ ಬೇಗೂರುವಿನ ಎಂ.ಬಿ. ದೇವಯ್ಯ ಅವರುಗಳು ಹುತಾತ್ಮರಾಗಿರುವ ದಾಖಲೆಯೂ ಸೈನಿಕ ಇಲಾಖೆಯಲ್ಲಿದೆ.