ಮಡಿಕೇರಿ, ಜ. 23: ಮಾನವ ಬಂಧುತ್ವ ವೇದಿಕೆಯ ಕೊಡಗು ಘಟಕದ ವತಿಯಿಂದ ‘ಸಂವಿಧಾನದ ಆಶಯಗಳು’ ಕುರಿತಾದ ಒಂದು ದಿನದ ಕಾರ್ಯಾಗಾರ ತಾ. 27 ರಂದು ನಗರದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವೇದಿಕೆಯ ಜಿಲ್ಲಾ ಸಂಚಾಲಕ ಪಿ.ಇ. ಸುರೇಶ್ ಅವರು, ನಗರದ ಸುದರ್ಶನ ವೃತ್ತದ ಬಳಿಯ ಅಂಬೇಡ್ಕರ್ ಭವನದಲ್ಲಿ ಅಂದು ಬೆಳಿಗ್ಗೆ 10.30 ಗಂಟೆಗೆ ಕಾರ್ಯಾಗಾರ ನಡೆಯಲಿದೆ ಎಂದರು. ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಹಾಗೂ ಚಿಂತಕ ಹೆಚ್.ಎನ್. ನಾಗಮೋಹನ್ ದಾಸ್ ಅವರು ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
ಮಾನವ ಬಂಧುತ್ವ ವೇದಿಕೆಯ ಕೊಡಗು ಘಟಕದ ಪ್ರಧಾನ ಸಂಚಾಲಕ ಕೆ.ಎಂ. ಕುಂಞÂ ಅಬ್ದುಲ್ಲ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಚ್ಚ ನ್ಯಾಯಾಲಯದ ಹಿರಿಯ ವಕೀಲ ಹಾಗೂ ಸರ್ಕಾರಿ ಅಭಿಯೋಜಕ ಹೆಚ್.ಎಸ್. ಚಂದ್ರಮೌಳಿ, ವೇದಿಕೆಯ ಜಿಲ್ಲಾ ಗೌರವ ಸಂಚಾಲಕ ಕೆ.ಆರ್. ವಿದ್ಯಾಧರ್, ರಾಜ್ಯ ಸಂಚಾಲಕ ರವಿ ನಾಯ್ಕರ್, ಬೆಂಗಳೂರು ವಿಭಾಗೀಯ ಸಂಚಾಲಕ ಅನಂತ ನಾಯ್ಕ್, ಉತ್ತರ ಕನ್ನಡದ ‘ಸಹಯಾನ’ದ ವಿಠಲ ಭಂಡಾರಿ, ವೇದಿಕೆಯ ಮೈಸೂರು ವಿಭಾಗೀಯ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಮಾನವ ಬಂಧುತ್ವ ವೇದಿಕೆಯು ರಾಜ್ಯಾದ್ಯಂತ ಜನ ಸಮುದಾಯದಲ್ಲಿ ವೈಚಾರಿಕ ಜಾಗೃತಿ ಮತ್ತು ಸ್ವಾಭಿಮಾನ ಮೂಡಿಸುವಲ್ಲಿ ಅನೇಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬರುತ್ತಿದೆ. ಜನರ ಬದುಕನ್ನು ಅಭದ್ರಗೊಳಿಸುತ್ತಿರುವ ಜೀವ ವಿರೋಧಿ ಮೌಢ್ಯಗಳ ಬಲೆಯಿಂದ ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ವೈಚಾರಿಕತೆಯ ಸಂದೇಶವನ್ನು ಬಿತ್ತುತ್ತಿದೆ. ಬುದ್ಧ, ಬಸವ, ನಾರಾಯಣಗುರು, ಅಂಬೇಡ್ಕರ್ ಅವರ ಚಿಂತನೆಗಳು ಮತ್ತು ಸಂವಿಧಾನದ ಆಶಯಗಳ ಬಗ್ಗೆ ಬದ್ಧತೆಯನ್ನು ಹೊಂದಿದೆ ಎಂದು ಸುರೇಶ್ ತಿಳಿಸಿದರು.
ಗೋಷ್ಠಿಯಲ್ಲಿ ವೇದಿಕೆಯ ಸೋಮವಾರಪೇಟೆ ಸಂಚಾಲಕ ಜೆ.ಎ. ಜನಾರ್ಧನ, ವೀರಾಜಪೇಟೆಯ ಕೆ.ಹೆಚ್. ರಜಾಕ್, ಕೆ.ಎ. ಹೂವಯ್ಯ ಕೂಗೆಕೋಡಿ ಹಾಗೂ ಮಡಿಕೇರಿಯ ಅಲ್ಲಾರಂಡ ವಿಠಲ ಉಪಸ್ಥಿತರಿದ್ದರು.