ಸುಂಟಿಕೊಪ್ಪ, ಜ. 23: ಸುಂಟಿಕೊಪ್ಪ ಪಟ್ಟಣದಲ್ಲಿ ಸೂಕ್ತ ಬಸ್ ನಿಲ್ದಾಣವಿಲ್ಲದೆ ಸಾರ್ವಜನಿಕರು, ಪ್ರಯಾಣಿಕರು ಶಾಲಾ ಮಕ್ಕಳು ಪರದಾಡು ವಂತಾಗಿದೆ. ಮತ್ತೊಂದೆಡೆ ಖಾಸಗಿ ಬಸ್ಸಿನವರು ರಾಷ್ಟ್ರೀಯ ಹೆದ್ದಾರಿ ಬಸ್ಸನ್ನು ಗಂಟೆ ಗಟ್ಟಲೇ ನಿಲ್ಲಿಸಿ ಪ್ರಯಾಣಿಕರನ್ನು ಕರೆದೋಯ್ಯು ತ್ತಿರುವದರಿಂದ ಟ್ರಾಫಿಕ್ ಜಾಮ್ ಕಿರಿಕಿರಿ ಅನುಭವಿಸುವಂತಾಗಿದೆ.

ಸುಂಟಿಕೊಪ್ಪ ಬೆಳೆಯುತ್ತಿರುವ ಪಟ್ಟಣವಾಗಿದ್ದು ರೈತಾಪಿ ವರ್ಗದವರು ವರ್ತಕರು ಕೂಲಿಕಾರ್ಮಿಕರು ಹೆಚ್ಚಾಗಿ ನೆಲೆಸಿದ್ದಾರೆ. ಈಗಾಗಲೇ ರಾಜ್ಯ ಹೆದ್ದಾರಿ ವಿಸ್ತರಣೆಯಿಂದ ಸುಂಟಿಕೊಪ್ಪ ಅರ್ಧಭಾಗದ ಅಂಗಡಿ ಹೊಟೇಲ್ ಮನೆಯ ಮಾಲೀಕರು ಜಾಗ ಕಳಕೊಂಡು ಅತಂತ್ರರಾಗಿದ್ದಾರೆ. ಈಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸದ್ಯದಲ್ಲೇ ಆರಂಭವಾಗುತ್ತಿರುವದರಿಂದ ಹೆದ್ದಾರಿ ಬಳಿಯ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ.

7 ವರ್ಷಗಳ ಹಿಂದೆ ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಡಿ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಈ ನಿಲ್ದಾಣದಲ್ಲಿ ಖಾಸಗಿ ಬಸ್ಸು ಬಂದು ಆರಂಭದಲ್ಲಿ ನಿಲ್ಲುತ್ತಿತ್ತು. ಈಗ ಖಾಸಗಿ ವಾಹನಗಳೇ ಹೆಚ್ಚಾಗಿ ನಿಲ್ಲುತ್ತಿರುವದ ರಿಂದ ಖಾಸಗಿ ಬಸ್ಸಿನವರು ರಾಷ್ಟ್ರೀಯ ಹೆದ್ದಾರಿ ಬಳಿ ನಿಂತು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾರೆ.

ಸಾರ್ವಜನಿಕರು ಅಂಗಡಿ ಹೊಟೇಲ್ ಮುಂಭಾಗ ಬದಿಯಲ್ಲಿ ನಿಂತು ಬಸ್‍ಗಾಗಿ ಕಾಯುವ ದೃಶ್ಯ ಮಾಮೂಲಿಯಾಗಿದೆ. ಈ ಬಸ್ಸ್ ತಂಗುದಾಣದಲ್ಲಿ ಸಾರ್ವಜನಿಕರ ಬಸ್ಸಿಗಾಗಿ ಕಾಯುವದು ಕಂಡು ಬರುತ್ತಿಲ್ಲ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆಗೊಳಿಸದ ಹಿನ್ನೆಲೆ ಪ್ರಯಾಣಿಕರು ವಾಣಿಜ್ಯ ಮಳಿಗೆಗಳ ಮುಂಭಾಗದಿಂದ ಬಸ್ಸನ್ನು ಹತ್ತುವ ಸನ್ನಿವೇಶ ಎದುರಾಗಿದೆ.

ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಅವರ ವಿಶೇಷ ಆಸಕ್ತಿಯಿಂದ ಮಲೆನಾಡು ಅಭಿವೃದ್ಧಿ ನಿಧಿ ಹಾಗೂ ಶಾಸಕರ ನಿಧಿಯಿಂದ ಈ ಬಸ್ ನಿಲ್ದಾಣ ಕಾರ್ಯರೂಪಕ್ಕೆ ಬರಲು ಕಾರಣವಾಗಿದೆ. ಶಾಸಕ ಅಪ್ಪಚ್ಚು ರಂಜನ್ ಅವರು 12 ವರ್ಷದ ಹಿಂದೆ ಬೆಂಗಳೂರಿಗೆ ತೆರಳಲು ಬಸ್ಸಿಗಾಗಿ ಸುಂಟಿಕೊಪ್ಪದಲ್ಲಿ ಕಾಯುತ್ತಿದ್ದಾಗ ಸಾರ್ವಜನಿಕರು ಪ್ರಶ್ನಿಸಿ ಬಸ್ ನಿಲ್ದಾಣ ಇಲ್ಲಿ ‘ಸರ್’ ನೀವೇ ಅಂಗಡಿ ಮುಂದೆ ನಿಂತಿದ್ದೀರ ಎಂದು ಹೇಳಿದ್ದರು (!). ಆಗ ಶಾಸಕರು ಈಗಿನ ಬಸ್ ನಿಲ್ಧಾಣಕ್ಕೆ ಹಸಿರು ನಿಶಾನೆ ನೀಡಿ ಬಸ್ ನಿಲ್ದಾಣ ಶೌಚಾಲಯ ವಾಣಿಜ್ಯ ಸಂಕೀರ್ಣಕ್ಕೆ ಅನುದಾನ ಒದಗಿಸಿದಕ್ಕೆ ಬಸ್ ನಿಲ್ದಾಣ ಸ್ಥಾಪನೆಯಾಯಿತು ಎನ್ನಲಾಗಿದೆ.

ಆದರೆ ಲಕ್ಷಾಂತರ ರೂ. ವಿನಿಯೋಗಿಸಿ ನಿರ್ಮಿಸಲಾದ ಬಸ್ ತಂಗುದಾಣ ಬಸ್ಸುಗಳು ನಿಲುಗಡೆ ಗೊಳ್ಳದಿರುವದರಿಂದ ಪ್ರಯಾಣಿಕರ ಉಪಯೋಗಕ್ಕೆ ಬಾರದಂತಾಗಿದೆ.

ವಾಹನ ಧಟ್ಟಣೆಯಿಂದ ಸಾರ್ವಜನಿಕರು ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದು, ಸಂತೆ ದಿನವಾದ ಭಾನುವಾರ ಜನದಟ್ಟಣೆ ಪ್ರವಾಸಿಗರ ದಂಡು ಮತ್ತೊಂದೆಡೆ ವಾಹನ ಓಡಾಟದಿಂದ ಜನರು ತೊಂದರೆಗೊಳಗಾಗುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಪೊಲೀಸರು ಟ್ರಾಫಿಕ್ ಜಾಮ್‍ನಿಂದ ಜನರು ಕಿರಿಕಿರಿಗೆ ಒಳಗಾಗುವದನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. - ರಾಜುರೈ