ಮಡಿಕೇರಿ, ಜ. 23: ಕಳೆದ ತಾ. 17 ರಂದು ತೆಲಂಗಾಣ ರಾಜ್ಯದ ಸರೂರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಣಿ ಉದ್ಯಮಿಯೊಬ್ಬರ ಪುತ್ರ; ಪೋಷಕರೊಂದಿಗೆ ತಿಳಿಸಿ ಬೆಂಗಳೂರಿಗೆ ಬಂದಿದ್ದಾತನ ಕಾರು, ಇಲ್ಲಿನ ಜಿಲ್ಲಾಧಿಕಾರಿ ಬಂಗಲೆ ಬಳಿ ಹಳೆಯ ಸಿದ್ದಾಪುರ ರಸ್ತೆ ಬದಿ ಪತ್ತೆಯಾಗಿದೆ. ಕಾರಿನ ಮಾಲೀಕನೂ ಆಗಿರುವ ವಿನಯ್ (28) ಎಂಬಾತ ನಿಗೂಢ ರೀತಿ ನಾಪತ್ತೆಯಾಗಿರುವ ಯುವಕನೆಂದು ದೃಢಪಟ್ಟಿದೆ.ಪ್ರಸಕ್ತ ತೆಲಂಗಾಣ ರಾಜ್ಯಕ್ಕೆ ಸೇರಿರುವ ಸರೂರ್ ನಗರ ಹೈದರಾಬಾದ್‍ಗೆ ಸಮೀಪವಿದ್ದು, ಅಲ್ಲಿನ ಗಣಿ ಉದ್ಯಮಿ ಮಾರುತಿ ಪ್ರಸಾದ್ ಪುತ್ರ ವಿನಯ್ ಕೂಡ ತಂದೆಯೊಂದಿಗೆ ವ್ಯವಹಾರ ನಡೆಸುತ್ತಿದ್ದು, ತಾ. 17 ರಿಂದ ನಾಪತ್ತೆಯಾಗಿದ್ದಾನೆ. ಅಂದು ತನ್ನ ತಾಯಿ ಮಲ್ಲಿಕಾ ಬಳಿ ಬೆಂಗಳೂರಿಗೆ ಹೋಗಿ ಬರುವದಾಗಿ ತಿಳಿಸಿದ್ದಾನೆ.ಆ ದಿನ ರಾತ್ರಿ 10 ಗಂಟೆ ಸುಮಾರಿಗೆ ತನ್ನ ತಾಯಿ ಹಾಗೂ ಕಿರಿಯ ಸಹೋದರ ವಿಶಾಲ್ ಬಳಿ ದೂರವಾಣಿಯಲ್ಲಿ (ಮೊಬೈಲ್) ಸಂಭಾಷಣೆ ನಡೆಸಿ, ತಾನು ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಕೊಡಗಿಗೂ ಪ್ರವಾಸ ತೆರಳುವದಾಗಿ ತಿಳಿಸಿದ್ದಾನೆಂದು ಈತನ ತಂದೆ ಖಚಿತಪಡಿಸಿದ್ದಾರೆ. ಅದಾದ ಬಳಿಕ ಕೇವಲ 10 ನಿಮಿಷ ಅಂತರದಲ್ಲಿ ತಂದೆಯೊಂದಿಗೆ ಮಾತನಾಡಿ, ತಾನು ಹೈದರಾಬಾದ್‍ನಲ್ಲೇ ಇದ್ದು, 10 ನಿಮಿಷದಲ್ಲಿ ಮನೆಗೆ ಬರುವ ದಾಗಿಯೂ ಹೇಳಿಕೊಂಡಿದ್ದನಂತೆ.
ಇದಾದ ಬಳಿಕ ತಾ. 18 ರಂದು ಬೆಳಿಗ್ಗೆ 6 ಗಂಟೆಯಿಂದ ಪೋಷಕರು ವಿನಯ್‍ನನ್ನು ಸಂಪರ್ಕಿಸಲು ಎಷ್ಟೇ ಪ್ರಯತ್ನಿಸಿದರೂ, ಸಂಪರ್ಕ ಸಾಧ್ಯವಾಗದೆ ಮೊಬೈಲ್ ‘ಸ್ವಿಚ್‍ಆಪ್’ ಎಂದು ಸಂದೇಶ ರವಾನೆಯಾಗುವಂತಾಗಿದೆ. ಪರಿಣಾಮ ವಿನಯ್ ಪೋಷಕರು ಅಲ್ಲಿನ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಇತ್ತ ಕಾರು ಸುಳಿವು : ಇತ್ತ ಹಳೆ ಸಿದ್ದಾಪುರ ರಸ್ತೆಯ ನಿವಾಸಿ ಬಿ. ಬಬ್ಬು ಗಣಪತಿ ಅವರು, ತಮ್ಮ ಮನೆಯ ಬಳಿ ಕೆಂಪು ‘ಸ್ಕೋಡಾ’ ಕಾರೊಂದು (ಟಿ.ಎಸ್. 07 - ಎಫ್.ಕ್ಯೂ. 3377) ವಾರಸುದಾರರಿಲ್ಲದೆ ನಿಂತಿರುವ ಬಗ್ಗೆ ನಗರ ಠಾಣೆ ಪೊಲೀಸರಿಗೆ ಸುಳಿವು ನೀಡಿದ್ದಾರೆ. ಆ ಮೇರೆಗೆ ನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಸಂಬಂಧಿಸಿದ ಕಾರಿಗೆ ‘ಲಾಕ್’ ಮಾಡದಿರುವದು ಗೋಚರಿಸಿದೆ. ಅಲ್ಲದೆ ಕಾರಿನಲ್ಲಿ ಮೊಬೈಲ್ ಕೂಡ ಪತ್ತೆಯಾಗಿದೆ. ಈ ಮೊಬೈಲ್ ವಶಪಡಿಸಿಕೊಂಡ ಪೊಲೀಸರು ಪರಿಶೀಲಿಸಲಾಗಿ, ಅದರಲ್ಲಿ ತೆಲಂಗಾಣದ ವಿಳಾಸ ಪತ್ತೆಯಾಗಿದೆ.
ಈ ಸುಳಿವು ಪಡೆದ ಮಡಿಕೇರಿ ಪೊಲೀಸರು, ತೆಲಂಗಾಣದ ಸರೂರ್ ನಗರ ಪೊಲೀಸ್ ಠಾಣೆಗೆ ಸಂಪರ್ಕಿಸಲಾಗಿ, ಅಲ್ಲಿ ಅದಾಗಲೇ ಕಾರು ಮಾಲೀಕ ನಾಪತ್ತೆಯಾಗಿರುವ ಸಂಬಂಧ ದೂರು ದಾಖಲಾಗಿರುವದು ಗೊತ್ತಾಗಿದೆ. ಅಲ್ಲದೆ ಈ ಬಳಿಕ ಅಲ್ಲಿನ ಪೊಲೀಸರು ವಿನಯ್ ಪೋಷಕರನ್ನು ಸಂಪರ್ಕಿಸಿ
(ಮೊದಲ ಪುಟದಿಂದ) ಹೆಚ್ಚಿನ ಮಾಹಿತಿ ತಿಳಿಯುವದರೊಂದಿಗೆ, ಈ ಸಂಜೆ ಮಡಿಕೇರಿಗೆ ಧಾವಿಸಿದ್ದಾರೆ. ಇಲ್ಲಿ ಆಗಮಿಸಿ ಸಂಬಂಧಿಸಿದ ಕಾರಿನ ಪರಿಶೀಲನೆಯೊಂದಿಗೆ ನಗರ ಪೊಲೀಸರ ಸಹಕಾರದೊಂದಿಗೆ ಯುವಕನ ಪತ್ತೆಗೆ ಮುಂದಾಗಿದ್ದಾರೆ.
ಸಿಸಿ ಕ್ಯಾಮರಾ ಪರಿಶೀಲನೆ: ಕಾರು ಪತ್ತೆಯಾಗಿರುವ ಸ್ಥಳದಿಂದ ಅನತಿ ದೂರದಲ್ಲಿರುವ ದೇವಿಗ್ಯಾಸ್ ಮಾಲೀಕರಾದ ರೇವತಿ ಕುಮಾರೇಶನ್ ಮನೆಯ ಸಿಸಿ ಕ್ಯಾಮರಾವನ್ನು ಪರಿಶೀಲಿಸುತ್ತಿರುವ ತೆಲಂಗಾಣ ಪೊಲೀಸರು, ನಗರಸಭಾ ಸದಸ್ಯೆ ವೀಣಾಕ್ಷಿ ಹಾಗೂ ಅಕ್ಕಪಕ್ಕ ನಿವಾಸಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅಲ್ಲಿನ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಯಾದಯ್ಯ ಅವರು, ಸಿಸಿ ಕ್ಯಾಮರಾ ಪರಿಶೀಲನೆಯಿಂದ ಇದುವರೆಗೆ ಯಾವದೇ ಸುಳಿವು ಲಭಿಸಿಲ್ಲವೆಂದು, ಕೊಡಗು ಪೊಲೀಸರ ಸಹಕಾರದಿಂದ ಹೆಚ್ಚಿನ ತನಿಖೆ ಕೈಗೊಳ್ಳಲಾಗುವದು ಎಂದು ಮಾಹಿತಿ ನೀಡಿದ್ದಾರೆ. ತೆಲಂಗಾಣ ಪೊಲೀಸ್ ಮಹೇಶ್ ಸಿಸಿ ಕ್ಯಾಮರಾ ಪರಿಶೀಲನೆಯಲ್ಲಿ ತೊಡಗಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ. ನಾಪತ್ತೆಯಾಗಿರುವ ವಿನಯ್ ತನ್ನ ಸ್ನೇಹಿತರೊಂದಿಗೆ ವರ್ಷದ ಹಿಂದೆಯೂ ಕೊಡಗಿಗೆ ಪ್ರವಾಸ ಬಂದಿದ್ದಾಗಿ ಆತನ ತಂದೆ ತಿಳಿಸಿದ್ದು, ಇದೀಗ ಮಗ ನಾಪತ್ತೆಯಾಗಿ ಕಾರು ಗೋಚರಿಸಿದ್ದರಿಂದ ತೀವ್ರ ಆತಂಕಗೊಂಡಿದ್ದಾರೆ.