ಮಡಿಕೇರಿ, ಜ. 24: ಮಾದಾಪುರದ ಕಲ್ಲುಕೋರೆಯಲ್ಲಿ ಪ್ರಕೃತಿ ವಿಕೋಪಕ್ಕೆ ಸಿಲುಕಿ ಹಾನಿಗೊಳಗಾಗಿ ಪ್ರಸಕ್ತ ನವೀಕರಣಗೊಂಡಿರುವ ಶ್ರೀ ಚೌಂಡಿಯಮ್ಮ ಹಾಗೂ ಶ್ರೀ ಗುಳಿಗಪ್ಪ ದೇವಾಲಯಗಳÀ ಲೋಕಾರ್ಪಣಾ ಸಮಾರಂಭ ಹಾಗೂ ಹಿಂದೂ ಐಕ್ಯ ಸಮ್ಮೇಳನ ತಾ. 27 ರಂದು ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ಮೇವಡ ಜಿ. ಅಯ್ಯಣ್ಣ ಅವರು, ಕಳೆದ ಆಗಸ್ಟ್‍ನಲ್ಲಿ ಕೊಡಗಿನಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪಕ್ಕೆ ಸಿಲುಕಿ ಹಾನಿಗೀಡಾದ ಶ್ರೀ ಚೌಂಡಿಯಮ್ಮ ಹಾಗೂ ಶ್ರೀ ಗುಳಿಗಪ್ಪ ದೇವಾಲಯಗಳನ್ನು ಹಿಂದೂ ಜಾಗರಣ ವೇದಿಕೆಯ ‘ಪರಿವರ್ತನ ಟ್ರಸ್ಟ್ ಹಾಗೂ ಶ್ರೀ ಚೌಂಡಿಯಮ್ಮ ಹಾಗೂ ಗುಳಿಗಪ್ಪ ದೈವಸ್ಥಾನ ಸಮಿತಿ ವತಿಯಿಂದ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 3.50 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಲಾಗಿದೆ ಎಂದರು.

ತಾ. 26 ಹಾಗೂ 27ರಂದು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಲೋಕಾರ್ಪಣೆ ಮಾಡಲಾಗುವದು ಎಂದು ತಿಳಿಸಿದರು.

ಜ. 26 ರಂದು ಬೆಳಿಗ್ಗೆ 7 ಗಂಟೆಗೆ ಶ್ರೀ ಗಣಪತಿ ಹೋಮದೊಂದಿಗೆ ದೈವಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಬಳಿಕ ಮೃತ್ಯುಂಜಯ ಹೋಮ, ಸದರ್ಶನ ಹೋಮ, ರಾತ್ರಿ 7 ಗಂಟೆಗೆ ದೇವಿಪೂಜೆ, ಮಂಗಳ ಪೂಜೆ, ತಾ. 27 ರಂದು ಬೆಳಿಗ್ಗೆ 7 ಗಂಟೆಯೊಂದಿಗೆ ಗಣಪತಿ ಹೋಮ 9.30ಕ್ಕೆ ಶ್ರೀದೇವಿ ಹಾಗೂ ದೈವ ಪ್ರತಿಷ್ಠಾಪನೆ, ಸಂಜೆ 7 ಗಂಟೆಗೆ ದೇವಿ ಪೂಜೆ ನಡೆಯಲಿದೆ ಎಂದು ವಿವರಿಸಿದರು.

ನೂತನ ದೇವಾಲಯದ ಪ್ರತಿಷ್ಠಾಪನಾ ಕಾರ್ಯಕ್ರಮದ ಬಳಿಕ ಅಂದು ಬೆಳಗ್ಗೆ 10.30ಗಂಟೆಗೆ ಕಲ್ಲುಕೋರೆ ದೇವಾಲಯದಿಂದ ಮಾದಾಪುರದ ಎಸ್‍ಜೆಎಂ ಶಾಲಾ ಮೈದಾನದವರೆಗೆ ಸುಮಾರು 3 ಸಾವಿರ ಮಂದಿಯ ಶೋಭಾಯಾತ್ರೆ ನಡೆಯಲಿದ್ದು, ನಂತರ ಶಾಲಾ ಮೈದಾನದಲ್ಲಿ ಹಿಂದೂ ಐಕ್ಯ ಸಮ್ಮೇಳನ ಜರುಗಲಿದೆ ಎಂದು ನುಡಿದರು.

ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಎಲ್ಲಾ ಜಾತಿ ಸಂಘಟನೆಗಳ ಮುಖಂಡರ ನೇತೃತ್ವದಲ್ಲಿ ನÀಡೆಸಲಾಗುವ ಈ ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಸೋಮವಾರಪೇಟೆ ವಿರಕ್ತ ಮಠದ ಶ್ರೀ ವಿಶ್ವೇಶ್ವರ ಸ್ವಾಮೀಜಿ ವಹಿಸಲಿದ್ದು, ಕೇರಳದ ಹಿಂದು ಐಕ್ಯ ವೇದಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಬ್ರಹ್ಮಚಾರಿ ಭಾರ್ಗವರಾಮ್, ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ ಹೆಗಡೆ, ಹಿಂದೂ ಜಾಗರಣ ವೇದಿಕೆಯ ಪರಿವರ್ತನ ಟ್ರಸ್ಟ್‍ನ ಅಧ್ಯಕ್ಷ ಆರ್. ನಾಗೇಂದ್ರ ಪ್ರಸಾದ್ ಪಾಲ್ಗೊಳ್ಳಲಿದ್ದಾರೆ. ಸ್ಥಳೀಯ ಕಾಫಿ ಬೆಳೆಗಾರ ಮಧು ಬೋಪಣ್ಣ ಅಧ್ಯಕ್ಷತೆವಹಿಸಲಿದ್ದು, ಹಿಂದೂ ಜಾಗರಣ ವೇದಿಕೆ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದೇವಾಲಯ ಸಮಿತಿ ಅಧ್ಯಕ್ಷ ಕೆ.ಪಿ.ಪ್ರಭಾಕರ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ.ಟಿ. ಸುಭಾಷ್ ತಿಮ್ಮಯ್ಯ, ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಎಂ.ಬಿ. ಉಮೇಶ್, ಸುನಿಲ್ ಹಾಗೂ ಸಿ.ಕೆ. ನಂದೀಶ್ ಉಪಸ್ಥಿತರಿದ್ದರು.