ಕುಶಾಲನಗರ, ಜ. 24: ವಿದ್ಯಾರ್ಥಿಗಳು ಜ್ಞಾನ ಗಳಿಕೆ ಮತ್ತು ಗುರಿ ಸಾಧನೆಗೆ ಆದ್ಯತೆ ನೀಡಬೇಕು ಎಂದು ಕೂಡಿಗೆಯ ಸರಕಾರಿ ಪಿಯು ಕಾಲೇಜು ಪ್ರಾಂಶುಪಾಲ ಮಹಾಲಿಂಗಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರ ವಿವೇಕಾನಂದ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಎದುರಾಗುವ ಅಡೆತಡೆಗಳಿಗೆ ಕುಗ್ಗದೆ ಸವಾಲಾಗಿ ಸ್ವೀಕರಿಸಿದಾಗ ಮಾತ್ರ ಯಶಸ್ಸಿನ ಉತ್ತುಂಗ ತಲಪಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಹಂತದಲ್ಲಿ ತಮ್ಮ ಗಮನವನ್ನು ಸದಾ ಜ್ಞಾನಾರ್ಜನೆಯತ್ತ ಕೇಂದ್ರೀಕರಿಸ ಬೇಕಿದೆ.
ದೇಶದ ಮಹಾನ್ ನಾಯಕರು, ಸಾಧಕರನ್ನು ತಮ್ಮ ರೋಲ್ ಮಾಡೆಲ್‍ಗಳಾಗಿ ಪರಿಗಣಿಸಿ ಅವರ ಆದರ್ಶ ಗುಣಗಳಿಂದ ಪ್ರೇರಿತರಾಗಬೇಕಿದೆ ಎಂದು ಸಲಹೆ ನೀಡಿದರು.
ಕೊಡಗು ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಕೆಂಚಪ್ಪ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ರೀತಿಯ ಬದಲಾವಣೆ, ಬೆಳವಣಿಗೆಗಳು ಕಂಡುಬರುತ್ತಿವೆ. ವಿದ್ಯಾರ್ಥಿಗಳಿಗೆ ಪೂರಕವಾದ ವ್ಯವಸ್ಥೆಗಳು ವ್ಯಾಪಾಕವಾಗಿ ಲಭಿಸುತ್ತಿದೆ. ವಿದ್ಯಾರ್ಥಿ ಗಳು ಕೂಡ ಶಿಸ್ತು, ಕಠಿಣ ಅಭ್ಯಾಸ ಮೂಲಕ ಉತ್ತಮ ಫಲಿತಾಂಶ ತರುವ ಮೂಲಕ ರಾಜ್ಯದಲ್ಲಿ ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೇರಿಸಬೇಕಿದೆ ಎಂದರು.
ವಿದ್ಯಾಸಂಸ್ಥೆ ಅಧ್ಯಕ್ಷ ಎನ್.ಎನ್. ಶಂಭುಲಿಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಕುಶಾಲನಗರ ಫಾತಿಮಾ ಪ್ರೌಢಶಾಲಾ ಮುಖ್ಯಶಿಕ್ಷಕಿ ಸವರಿನ್ ಡಿಸೋಜ, ಕಾಲೇಜು ಪ್ರಾಂಶುಪಾಲ ನಾಗೇಶ್ ಇದ್ದರು.
ಕಾರ್ಯಕ್ರಮದಲ್ಲಿ ಮಾನವ ಕಂಪ್ಯೂಟರ್ ಖ್ಯಾತಿಯ ಬಸವರಾಜ್ ಶಂಕರ್ ಉಮ್ರಾಣಿ ತಮ್ಮ ವಿಶಿಷ್ಟ ನೆನೆಪಿನ ಶಕ್ತಿ, ಸಂಖ್ಯಾಶಾಸ್ತ್ರ ಪ್ರತಿಭೆ ಮೂಲಕ ನೆರೆದಿದ್ದವರನ್ನು ಚಕಿತಗೊಳಿಸಿದರು.
ಉತ್ತಮ ಅಂಕಗಳಿಸಿದ ಮತ್ತು ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಣೆ ನಡೆಯಿತು. ನಂತರ ವಿದ್ಯಾರ್ಥಿ ಗಳಿಂದ ಆಕರ್ಷಕ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.