ಕೂಡಿಗೆ, ಜ. 24: ವಿದ್ಯಾರ್ಥಿಗಳ ಮನಸ್ಸು ಏಕಾಗ್ರತೆ ಗೊಳ್ಳಲು ಸಂಗೀತ ಸಹಕಾರಿಯಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಹೇಳಿದ್ದಾರೆ. ಶಿರಂಗಾಲದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಕಾಲೇಜು ರಜತ ಮಹೋತ್ಸವದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣದ ಜೊತೆಗೆ ಕಲೆ ಮತ್ತು ಸಂಸ್ಕೃತಿಯನ್ನು ಬೆಳೆಸುವಲ್ಲಿ ವಿದ್ಯಾರ್ಥಿ ಗಳ ಪಾತ್ರ ಬಹುಮುಖ್ಯವಾಗಿದೆ. ನಾಡು-ನುಡಿ ಉಳಿಯ ಬೇಕಾದರೆ ಭಾಷೆ, ಸಂಸ್ಕೃತಿಯನ್ನು ಬೆಳೆಸಬೇಕು. ವಿದ್ಯಾರ್ಥಿಗಳು ಓದಿನೊಂದಿಗೆ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು. ಕಾರ್ಯಕ್ರಮದ ಉದ್ಘಾಟನೆ ಯನ್ನು ನೆರೆವೇರಿಸಿ ಮಾತನಾಡಿದ ಶಿರಂಗಾಲ ಕಾಲೇಜು ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್, ಗ್ರಾಮೀಣ ಕಲೆ ಮತ್ತು ಸಂಸ್ಕøತಿಯನ್ನು ಉಳಿಸುವದರಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿದೆ ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಮಣಜೂರು ಮಂಜುನಾಥ್ ಮಾತನಾಡಿ, ಇಲಾಖಾ ವತಿಯಿಂದ ವಿವಿಧ ಗ್ರಾಮೀಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಸೊಗಡನ್ನು ಬಿಂಬಿಸುವ ವಿವಿಧ ಕಾರ್ಯಕ್ರಮಗಳನ್ನು ವರ್ಷವಿಡೀ ನಡೆಸುವದರ ಮೂಲಕ ಕಲೆ ಹಾಗೂ ಸಂಸ್ಕøತಿಯನ್ನು ಬೆಳೆಸಲು ಇಲಾಖೆ ಮುಂದಾಗುತ್ತಿದೆ ಎಂದರು. ವೇದಿಕೆಯಲ್ಲಿ ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ರಮೇಶ್, ಶಿರಂಗಾಲ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ್, ತೊರೆನೂರು ಸಹಕಾರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳು, ಶಿರಂಗಾಲ ದೇವಾಲಯ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.