ಸೋಮವಾರಪೇಟೆ, ಜ. 24: ಜಿ.ಪಂ., ತಾ.ಪಂ., ಪಶು ವೈದ್ಯ ಆಸ್ಪತ್ರೆ ಹಾಗೂ ಗರ್ವಾಲೆ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಉತ್ತಮ ರಾಸುಗಳ ಪ್ರದರ್ಶನ ಹಾಗೂ ಪಶು ಆರೋಗ್ಯ ಶಿಬಿರ ನಡೆಯಿತು.
ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಚಾಲನೆ ನೀಡಿ ಮಾತನಾಡಿ, ರೈತರ ಒಡನಾಡಿಯಾಗಿ ರುವ ಜಾನುವಾರುಗಳನ್ನು ಎಲ್ಲ ರೈತರು ಸಂರಕ್ಷಿಸುವ ಕೆಲಸ ಮಾಡಬೇಕಿದೆ. ಕೃಷಿಯೊಂದಿಗೆ ಹೈನುಗಾರಿಕೆ ಯಿಂದಲೂ ಹೆಚ್ಚಿನ ಲಾಭಗಳಿಸಲು ಅವಕಾಶವಿದ್ದು, ಉನ್ನತ ತಂತ್ರಜ್ಞಾನ ದೊಂದಿಗೆ ಹೈನುಗಾರಿಕೆ ಮಾಡಬೇಕೆಂದರು.
ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ಕಳೆದ ಮಳೆಗಾಲದಲ್ಲಿ ಗರ್ವಾಲೆ ಹಾಗೂ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಹಾನಿಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದಿಂದ ನೀಡುವ ಸವಲತ್ತುಗಳನ್ನು ಅಧಿಕಾರಿಗಳು ಶೀಘ್ರವಾಗಿ ತಲುಪಿಸಬೇಕೆಂದರು.
ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಕೆ. ನಾಗರಾಜ್ ಮಾತನಾಡಿ, ಕುರಿ, ಕೋಳಿ, ಹಂದಿ ಹಾಗೂ ಜಾನುವಾರುಗಳನ್ನು ವೈಜ್ಞಾನಿಕವಾಗಿ ಸಾಕುವದರಿಂದ ಅಧಿಕ ಲಾಭದೊಂದಿಗೆ ಕೃಷಿ ಚಟುವಟಿಕೆಗೆ ಬೇಕಾದ ಗೊಬ್ಬರ ದೊರೆಯಲಿದೆ ಎಂದರು. ಸರ್ಕಾರ ಬಂಜೆ ರಾಸುಗಳ ತಪಾಸಣೆ ಮತ್ತು ಚಿಕಿತ್ಸೆ, ರಾಸುಗಳಿಗೆ ಉಚಿತ ಲಸಿಕೆ, ಜಂತುಹುಳುಗಳ ನಿವಾರಣೆಗಾಗಿ ಔಷಧಿ ವಿತರಣೆ, ಅನುಪಯುಕ್ತ ಹೋರಿಗಳ ಕಸಿ ಮಾಡುವದು, ಸಾಮಾನ್ಯ ರೋಗ ತಪಾಸಣೆ, ಸಾಕು ನಾಯಿ, ಬೆಕ್ಕುಗಳಿಗೆ ರೇಬಿಸ್ ಲಸಿಕೆ ಹಾಕುವದು, ಕುರಿ ಮೇಕೆಗಳಿಗೆ ಕರುಳು ಬೇನೆ ಲಸಿಕೆ ಸೇರಿದಂತೆ ಹಲವು ಯೋಜನೆಗಳಿದ್ದು, ರೈತರು ಈ ಯೋಜನೆಗಳನ್ನು ಬಳಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗರ್ವಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಂ. ಸುಭಾಶ್ ವಹಿಸಿದ್ದರು. ವೇದಿಕೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷ ಪಳಂಗಪ್ಪ, ಅಭಿವೃದ್ಧಿ ಅಧಿಕಾರಿ ತಮ್ಮಯ್ಯ ಉಪಸ್ಥಿತರಿದ್ದರು. ವೈದ್ಯರಾದ ಸಂಜೀವಕುಮಾರ್, ಶ್ರೀದೇವ್, ಜಾನುವಾರು ಅಭಿವೃದ್ಧಿ ಅಧಿಕಾರಿ ಜಯರುದ್ರಯ್ಯ, ಹಿರಿಯ ಪಶು ಪರೀಕ್ಷಕರಾದ ಸತ್ತರ್ ಖಾನ್, ಎನ್.ಟಿ. ವಸಂತ್ ಮತ್ತು ಸಿಬ್ಬಂದಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭ ರೈತರಿಗೆ ಪಶು ಆಹಾರ ವಿತರಿಸಲಾಯಿತು.