ಸೋಮವಾರಪೇಟೆ, ಜ. 24: ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ ಸಮಿತಿ ವತಿಯಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಬಿ.ಎಸ್. ಸದಾನಂದ್ ತಿಳಿಸಿದರು.
ಇಲ್ಲಿನ ಮಾನಸ ಸಭಾಂಗಣದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ. ವಿದ್ಯಾರ್ಥಿ ಹಂತದಲ್ಲಿಯೇ ಅವರ ವಿಚಾರಧಾರೆಗಳನ್ನು ಅರಿತುಕೊಳ್ಳಬೇಕು. ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಜಯಂತ್ಯೋತ್ಸವ ಸಮಿತಿಯ ಕಾರ್ಯದರ್ಶಿ ಎಸ್. ಮಹೇಶ್ ಮಾತನಾಡಿ, ಸಮಿತಿಯ ವತಿಯಿಂದ ತಾ. 28 ರಂದು ಬೆಳಿಗ್ಗೆ 10.30ಕ್ಕೆ ವಿವೇಕಾನಂದ ಅವರ ಜಯಂತಿ ಕಾರ್ಯಕ್ರಮವನ್ನು ಮಾನಸ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾಗುವ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಗುವದು ಎಂದರು.
ವೇದಿಕೆಯಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಪಿ.ಕೆ. ರವಿ, ಕಾರ್ಯದರ್ಶಿ ನಾಗೇಶ್, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಲೇಬೇಲೂರು ನಿರ್ವಾಣಿ ಶೆಟ್ಟಿ, ಸಮಿತಿಯ ಖಜಾಂಚಿ ಮೃತ್ಯುಂಜಯ, ವಿವೇಕಾನಂದ ಯುವ ಬ್ರಿಗೇಡ್ ಅಧ್ಯಕ್ಷ ಅಭಿಷೇಕ್ ಅವರುಗಳು ಉಪಸ್ಥಿತರಿದ್ದರು.
ನಂತರ 1 ರಿಂದ 3ನೇ ತರಗತಿ ವಿದ್ಯಾರ್ಥಿಗಳಿಗೆ ‘ಪ್ರಕೃತಿ’ಯ ಚಿತ್ರ ಬಿಡಿಸುವದು, 4 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಚಿತ್ರ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಸ್ವಾಮಿ ವಿವೇಕಾನಂದರ ಮೇಲೆ ರಾಮಕೃಷ್ಣ ಪರಮಹಂಸರ ಪ್ರಭಾವ’ ವಿಷಯದ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ನಡೆಸಲಾಯಿತು.