ಕುಶಾಲನಗರ, ಜ. 24: ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಆಶ್ರಯದಲ್ಲಿ ಉಚಿತ ದಂತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಕುಶಾಲನಗರ ದಲ್ಲಿ ನಡೆಯಿತು.

ಸ್ಥಳೀಯ ವಾಸವಿ ಮಹಲ್ ಹಿಂಭಾಗದ ಸಭಾಂಗಣದಲ್ಲಿ ನಡೆದ ಶಿಬಿರಕ್ಕೆ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್‍ನ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವೀರಾಜಪೇಟೆಯ ದಂತ ವೈದ್ಯಕೀಯ ಮಹಾವಿದ್ಯಾಲಯದ ಮುಖ್ಯಸ್ಥರಾದ ಡಾ.ಭಾವನಾ ಶಿಬಿರದ ಕುರಿತು ಮಾಹಿತಿ ಒದಗಿಸಿದರು. ಹಲ್ಲುಗಳ ಸ್ವಚ್ಛತೆ ಮತ್ತು ಸಂರಕ್ಷಣೆ ಬಗ್ಗೆ ಉದಾಸೀನ ತೋರಬಾರದು. ಕಾಲಕಾಲಕ್ಕೆ ತಪಾಸಣೆ ನಡೆಸಿ ವೈದ್ಯರ ಸಲಹೆ ಪಡೆದು ಸಮರ್ಪಕ ನಿರ್ವಹಣೆ ಮೂಲಕ ಹಲ್ಲುಗಳ ಆರೋಗ್ಯ ಸದಾ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಹುಳುಕು ಹಲ್ಲು ತುಂಬಿಸುವದು, ಹಲ್ಲು ಸ್ವಚ್ಛಗೊಳಿಸುವದು, ಕೃತಕ ದಂತ ಜೋಡಣೆ ಸೇರಿದಂತೆ ವಕ್ರದಂತ, ವಸಡು ರೋಗ, ಬಾಯಿಯ ಅರ್ಭುದ ರೋಗ, ಎಂಡೋಡಾಂಟಿಕ್ಸ್ ತಪಾಸಣೆ ನಡೆಯಿತು. 50 ಕ್ಕೂ ಅಧಿಕ ಮಂದಿ ಫಲಾನುಭವಿಗಳು ಶಿಬಿರದಲ್ಲಿ ಪಾಲ್ಗೊಂಡು ದಂತ ತಪಾಸಣೆ ಮಾಡಿಸಿಕೊಂಡರು.

ಕಾರ್ಯಕ್ರಮದಲ್ಲಿ ದಂತ ವೈದ್ಯರಾದ ಡಾ.ಪೊನ್ಕಾಟಿ, ಡಾ.ಪ್ರಶಾಂತ್, ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಸಹ ಸಂಘಗಳ ಅಧ್ಯಕ್ಷರುಗಳಾದ ಶೋಭಾ ಸತ್ಯ, ಲಕ್ಷ್ಮಿ ರವಿಚಂದ್ರ, ನಾಗಪ್ರವೀಣ್, ಪಪಂ ಸದಸ್ಯ ಅಮೃತ್‍ರಾಜ್ ಇದ್ದರು. ಟ್ರಸ್ಟ್ ಪ್ರಮುಖರಾದ ವಿ.ಪಿ.ನಾಗೇಶ್ ಕಾರ್ಯಕ್ರಮ ನಿರೂಪಿಸಿದರು, ಬಿ.ಎಲ್.ಸತ್ಯನಾರಾಯಣ ಸ್ವಾಗತಿಸಿದರು, ಬಿ.ಎಲ್. ಉದಯಕುಮಾರ್ ವಂದಿಸಿದರು.