ನಾಪೋಕ್ಲು: ಜ. 22. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬಳಸಿ ಕೊಡಗನ್ನು ಬಲಿಕೊಡುತ್ತಿರುವ ಡೊಂಗಿ ಪರಿಸರವಾದಿಗಳ ವಿರುದ್ದ ಸೇವ್ ಕೊಡಗು ಆಂದೋಲನ ವೇದಿಕೆ ವತಿಯಿಂದ ಫೆ.11 ರಂದು ಗೋಣಿಕೊಪ್ಪದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ರ್ಯಾಲಿಗೆ ಜಯಕರ್ನಾಟಕ ಸಂಘಟನೆ, ನಾಲ್ಕುನಾಡು ಪ್ಲಾಂಟರ್ಸ್ ಕ್ಲಬ್ ಹಾಗೂ ಬಿಜೆಪಿ ನಾಪೋಕ್ಲು ಹೋಬಳಿ ಘಟಕ ಬೆಂಬಲ ಸೂಚಿಸಿವೆ.
ನಾಪೋಕ್ಲುವಿನ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಯಕರ್ನಾಟಕ ಸಂಘಟನೆಯ ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ಜಿನ್ನು ನಾಣಯ್ಯ, ಕೊಡಗು ಜಿಲ್ಲೆ ಕಳೆದ ಇಪ್ಪತ್ತು ವರ್ಷಗಳಿಂದ ಡೊಂಗಿ ಪರಿಸರವಾದಿಗಳ ವಸಾಹತುಶಾಹಿಗೆ ಒಳಪಟ್ಟಿದೆ. ಕೊಡಗಿನಲ್ಲಿ ಡೊಂಗಿ ಪರಿಸರವಾದಿಗಳೇ ಪ್ರಥಮ ಪ್ರಜೆಗಳಾಗಿದ್ದು, ಸರಕಾರಿ ಅಧಿಕಾರಿಗಳು ಕಾರ್ಪೋರೇಟ್ ರೆಸಾರ್ಟ್ ಮಾಲೀಕರು ದ್ವಿತೀಯ ಪ್ರಜೆಗಳಾಗಿದ್ದಾರೆ. ಕೊಡಗಿನ ಮೂಲ ನಿವಾಸಿಗಳು ಸೇರಿದಂತೆ ಜನಸಾಮಾನ್ಯರು ತೃತೀಯ ಪ್ರಜೆಗಳಾಗಿದ್ದಾರೆ. ಸರಕಾರಿ ಅಧಿಕಾರಿಗಳು ಡೊಂಗಿ ಪರಿಸರವಾದಿಗಳ ಅಪ್ಪಣೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಕೊಡಗಿನ ಜನಸಾಮಾನ್ಯರ ಕೆಲಸಕಾರ್ಯಗಳ ಬಗ್ಗೆ ಅಸಡ್ಡೆ ತೋರುವ ಅಧಿಕಾರಿಗಳು ಬೃಹತ್ ಪ್ರಮಾಣದ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಈ ಹಿನ್ನೆಲೆಯಲ್ಲಿ ಕೊಡಗಿನ ಎಲ್ಲಾ ಜನಸಾಮಾನ್ಯರು ಮುಕ್ತವಾಗಿ ಹೋರಾಟಕ್ಕಿಳಿದರೇ ಮಾತ್ರ ಕೊಡಗನ್ನು ಕೊಡಗಾಗಿ ಉಳಿಸಿಕೊಳ್ಳಲು ಸಾಧ್ಯವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗಿನ ಜನತೆಯನ್ನು ಕಾಡುತ್ತಿರುವ ಆನೆ ಮತ್ತು ವನ್ಯಪ್ರಾಣಿಗಳ ಸಮಸ್ಯೆ ಪರಿಹಾರ, ಕೋವಿ ವಿನಾಯಿತಿ ಪತ್ರಕ್ಕೆ ಅಡ್ಡಗಾಲು ಹಾಕುವದರೊಂದಿಗೆ ಕೊಡಗಿನ ಜನತೆಗೆ ಯಾವ ಪರಿಹಾರವಿಲ್ಲದೇ, ಇಡಿ ಜಿಲ್ಲೆಯನ್ನು ಇಂಗಾಲದ ಗುಂಡಿಯಾಗಿ ಪರಿವರ್ತಿಸಲು ವಿದೇಶದಿಂದ ಗುತ್ತಿಗೆ ಪಡೆದವರು ಯಾರೆಂದು ಜಿನ್ನು ನಾಣಯ್ಯ ತೀಕ್ಷ್ಣವಾಗಿ ಪ್ರಶ್ನಿಸಿದರು.
ಬಾಣೆ ಜಮೀನಿನ ಕಾನೂನಾತ್ಮಕ ಪರಿಹಾರದ ಹೋರಾಟಕ್ಕೆ ಅಡ್ಡಿ, ಕೊಡಗಿನ 55 ಗ್ರಾಮಗಳನ್ನು ಇಕೋ ಸೆನ್ಸಿಟೀವ್ ಝೋನ್‍ಗೆ ಸೇರ್ಪಡೆಗೊಳಿಸಲು ಮಾಧವ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ಸಮಿತಿಯನ್ನು ಪ್ರತಿನಿಧಿಸಿದವರು ಯಾರು? ಸಂರಕ್ಷಣೆಯ ನೆಪದಲ್ಲಿ ಕೋಟ್ಯಾಂತರ ಹಣ ತಿಂದವರು ಯಾರು? ಕ್ರಿಯೆಯಲ್ಲಿ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸಿದವರು ಯಾರು?
ಕೊಡಗಿನಲ್ಲಿ ಕಾರ್ಪೋರೇಟ್ ರೆಸಾರ್ಟ್ ಸಂಸ್ಕøತಿಯನ್ನು ತಂದವರು ಯಾರು? ಮತ್ತು ಇದರಿಂದ ಇಡೀ ಕಂದಾಯ ಇಲಾಖೆಯನ್ನು ಭ್ರಷ್ಟಾಚಾರದಲ್ಲಿ ಮುಳುಗಿಸುವದರೊಂದಿಗೆ ಕೊಡಗಿನ ಸಾಮಾನ್ಯ ಜನರ ಕಡತಗಳ ಬಗ್ಗೆ ಅಧಿಕಾರಿಗಳಿಗೆ ಅಸಡ್ಡೆ ತೋರಿಸುವಂತಾಗಲು ಕಾರಣಕರ್ತರು ಯಾರು?
ಡೊಂಗಿ ಪರಿಸರವಾದಿಗಳು ಸರ್ಕಾರಕ್ಕೆ ಪಾವತಿಸಬೇಕಾದ ಹಣವನ್ನು ಪಾವತಿಸದೇ ಅಕ್ರಮವಾಗಿ ಸರ್ಕಾರಿ ಅಧಿಕಾರಿಗಳನ್ನು ಹಾಗೂ ಮಾದ್ಯಮಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದಾರೆಂದು ಆರೋಪಿಸಿದ ಜಿನ್ನು ನಾಣಯ್ಯ, ಇವೆಲ್ಲದಕ್ಕೂ ಕಾರಣಕರ್ತರಾದ ಡೊಂಗಿ ಪರಿಸರವಾದಿಗಳನ್ನು ಕೊಡಗಿನಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಜಾತ್ಯತೀತವಾಗಿ ಪಕ್ಷಾತೀತವಾಗಿ ಮತ್ತು ಸ್ವಾರ್ಥರಹಿತವಾಗಿ ಒಮ್ಮತದಿಂದ ಹೋರಾಡೋಣವೆಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಾಲ್ಕುನಾಡು ಪ್ಲಾಂಟರ್ಸ್ ಕ್ಲಬ್‍ನ ಅಧ್ಯಕ್ಷ ಪಟ್ರಪಂಡ ಮೋಹನ್ ಮುದ್ದಪ್ಪ, ಬಿಜೆಪಿ ನಾಪೋಕ್ಲು ಹೋಬಳಿ ಘಟಕದ ಮಾ.ಅಧ್ಯಕ್ಷ ಕುಂಡ್ಯೋಳಂಡ ರಮೇಶ್ ಮುದ್ದಯ್ಯ ಇತರರು ಉಪಸ್ಥಿತರಿದ್ದರು.