ಮಡಿಕೇರಿ, ಜ. 22: ಕೊಡಗಿನ ಮೂಲಕ ಹಾದುಹೋಗುವ ಉದ್ದೇಶಿತ ರೈಲ್ವೇ ಮಾರ್ಗ ಮತ್ತು ಹೆದ್ದಾರಿ ಯೋಜನೆಯನ್ನು ಯಥಾಸ್ಥಿತಿ ಕಾಪಾಡುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಹೆಚ್ಚುವರಿ ಅಡ್ವೋಕೇಟ್ ಜನರಲ್ ಮತ್ತು ಸ್ಪೆಷಲ್ ಪಬ್ಲಿಕ್ ಪ್ರಾಸಿ ಕ್ಯೂಟರ್‍ಗೆ ನಿರ್ದೇಶನ ನೀಡಿದೆ.
ಈ ಯೋಜನೆಯಿಂದ ಕೊಡಗಿನ ಅರಣ್ಯ ಸಂಪತ್ತು ಹಾಳಾಗುವದಲ್ಲದೆ, ದಕ್ಷಿಣ ಭಾರತದ ಜೀವನದಿ ಕಾವೇರಿ ನದಿಗೆ ಹಾನಿಯಾಗುವದರಿಂದ, ಉದ್ದೇಶಿತ ರೈಲ್ವೇ ಮತ್ತು ಹೆದ್ದಾರಿ ಯೋಜನೆ ವಿರುದ್ಧ ಕೂರ್ಗ್ ವೈಲ್ಡ್‍ಲೈಫ್ ಸೊಸೈಟಿ (ಸಿಡಬ್ಲ್ಯೂಎಸ್) ಸಲ್ಲಿಸಿರುವ ಮೇಲ್ಮನವಿಯನ್ನು ಕಾಯ್ದಿರಿಸುವಂತೆ ಸೂಚಿಸಿದೆ.
ಸಿಡಬ್ಲ್ಯೂಎಸ್ ಅಧ್ಯಕ್ಷ ಕೆ.ಸಿ. ಬಿದ್ದಪ್ಪ ‘ಶಕಿ’್ತಯೊಂದಿಗೆ ಮಾತನಾಡಿ, ತಲಚೇರಿ-ಪಿರಿಯಾಪಟ್ಟಣ ಮತ್ತು ಮೈಸೂರು, ಮೈಸೂರು-ಕುಶಾಲನಗರ, ಮಡಿಕೇರಿ ಮತ್ತು ಮಂಗಳೂರು ಹಾಗೂ ಮೈಸೂರಿನಿಂದ ಕುಶಾಲನಗರ, ಸುಂಟಿಕೊಪ್ಪ ಮತ್ತು ಮಡಿಕೇರಿ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275 ಅಗಲೀಕರಣ ಕಾಮಗಾರಿಯನ್ನು ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಮೇಲ್ಮನವಿಯನ್ನು ಪರಿ ಶೀಲಿಸಿದ ಹೈಕೋರ್ಟ್, ರಾಜ್ಯ ಅಡಿಷನಲ್ ಅಡ್ವೊಕೇಟ್ ಜನರಲ್‍ಗೆ ಯಥಾಸ್ಥಿತಿ ಕಾಪಾಡುವಂತೆ ಹೇಳಿದೆ.
ಐಐಎಸ್‍ಸಿ ವರದಿ: ಈ ಮಧ್ಯೆ ಬೆಂಗಳೂರಿನ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‍ಸಿ), ತನ್ನ ವರದಿಯನ್ನು ಬಿಡುಗಡೆ ಮಾಡಿ, ಈ ಉದ್ದೇಶಿತ ಹೆದ್ದಾರಿ ಮತ್ತು ರೈಲ್ವೇ ಯೋಜನೆಯಿಂದ ಕೊಡಗಿಗೆ ಅಪಾರ ಹಾನಿಯಾಗಲಿದೆ. ಅಲ್ಲದೆ, ಈ ಯೋಜನೆಯಿಂದ ಕೊಡಗು ಜಿಲ್ಲೆಯ ಪರಿಸರದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಕೊಡಗು ಜಿಲ್ಲೆಯಲ್ಲಿ ಮೂಲಸೌಕರ್ಯ ಮತ್ತು ಪ್ರವಾಸೋದ್ಯಮ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ದುರ್ಬಲ ಪರಿಸರ ವ್ಯವಸ್ಥೆಗೆ ರಾಜ್ಯ ಮತ್ತು ಕೇಂದ್ರ ಸರಕಾರ ಹಸ್ತಕ್ಷೇಪ ಮಾಡಬಾರದು ಎಂದು ಎಚ್ಚರಿಸಿದೆ. ಇದರಿಂದ ಅಂತಿಮವಾಗಿ ವಿನಾಶಕಾರಿ ಮತ್ತು ಪ್ರತಿರೋಧಕ ಸಾಬೀತಾದಂತಾಗುತ್ತದೆ ಎಂದು ಹೇಳಿದೆ.
ಸಹ್ಯಾದ್ರಿ ಸರಣಿಯ ಭಾಗವಾಗಿ 264 ಪುಟಗಳ ವರದಿಯನ್ನು ಎನರ್ಜಿ ಮತ್ತು ವೆಟ್ ಲ್ಯಾಂಡ್ಸ್ ಗ್ರೂಪ್‍ನ ಡಾ. ಟಿ.ವಿ. ರಾಮಚಂದ್ರ, ಸೆಂಟರ್ ಫಾರ್ ಎಕೋಲಾಜಿಕಲ್ ಸೈನ್ಸಸ್, ಐಐಎಸ್‍ಸಿ. ಭಾರತ್ ಸೆತ್ತೂರು, ಎಸ್. ವಿನಯ್, ವಿಷ್ಣು ಡಿ. ಮುಕ್ರಿ ಮತ್ತು ಜಿ.ಆರ್. ರಾವ್ ತಯಾರಿಸಿದ್ದಾರೆ. ಕೂರ್ಗ್ ವೈಲ್ಡ್‍ಲೈಫ್ ಸೊಸೈಟಿಯು ಮಾರ್ಚ್ 22, 2018 ರಂದು ಸಲ್ಲಿಸಿದ್ದ ಮೇಲ್ಮನವಿ ಮೇರೆಗೆ ಅಧ್ಯಯನ ಕೈಗೆತ್ತಿಕೊಂಡಿತ್ತು.
ಜೀವವೈವಿಧ್ಯತೆಯ ಕೇಂದ್ರ
ಕೊಡಗು ಜಿಲ್ಲೆಯು ಜೀವವೈವಿಧ್ಯತೆಯ ಕೇಂದ್ರ ಬಿಂದುವಾಗಿದ್ದು, ಫಲವತ್ತಾದ ಭೂಮಿ ಮತ್ತು ಜಲ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಅತಿಯಾದ ಮರಗಳ ಹನನ ಮತ್ತು ಕಾಫಿ ಪ್ಲಾಂಟೇಷನ್‍ಗಳ ವಿಸ್ತರಣೆ ಇನ್ನಿತರ ಚಟುವಟಿಕೆಗಳಿಂದಾಗಿ ಶೇ. 40.29 ರಿಂದ (40.47 ರಿಂದ 27.14) ಇಳಿಮುಖವಾಗಿದೆ ಎಂದು ವರದಿ ತಿಳಿಸಿದೆ. ‘ಸಣ್ಣ ಸಣ್ಣ ಅವಘಡಗಳು ನಡೆದರೂ ದುರಂತ ಸಂಭವಿಸುವ ಹಂತದಲ್ಲಿರುವ ಕೊಡಗಿನಲ್ಲಿ ಇಂತಹ ದೊಡ್ಡ ಪ್ರಮಾಣದ ಹೆದ್ದಾರಿ ಮತ್ತು ರೈಲ್ವೇ ಯೋಜನೆಗಳನ್ನು ಕೈಗೆತ್ತಿಕೊಳ್ಳುವದು ಅಪಾಯಕಾರಿ ಎಂದು ವರದಿ ಎಚ್ಚರಿಸಿದೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದ ಕೊಡಗು ಭಾರೀ ಹಾನಿಗೊಳಗಾಗಿದ್ದನ್ನು ಸ್ಮರಿಸಬಹುದು.
ಪ್ರವಾಹ, ಭೂಕುಸಿತದ ಎಚ್ಚರಿಕೆ
ಬೆಂಗಳೂರು-ಬಂಟ್ವಾಳ ರಸ್ತೆ ಅಗಲೀಕರಣ, ಹಳೇಬೀಡು-ಕುಟ್ಟ, ಮಡಿಕೇರಿ-ಚನ್ನರಾಯಪಟ್ಟಣ ಮತ್ತು ಮೈಸೂರು-ತಲಚೇರಿ ರೈಲ್ವೆ ಮಾರ್ಗ ಸೇರಿದಂತೆ ಇನ್ನಿತರ ಯೋಜನೆಗಳ ಬಗ್ಗೆ ವರದಿ ಸಮಗ್ರವಾಗಿ ಚರ್ಚಿಸಿದೆ. ರಸ್ತೆ ಅಗಲೀಕರಣ ಮತ್ತು ರೈಲ್ವೇ ನೆಟ್‍ವರ್ಕ್ ಯೋಜನೆಗಳಿಂದ ಪರಿಸರದ ಮೇಲೆ ಅಪಾರ ಪ್ರತಿಕೂಲ ಪರಿಣಾಮ ಬೀರಲಿದೆ. ವಿವೇಕವಿಲ್ಲದೆ ಭೂಮಿಯನ್ನು ಬಳಸುವದರಿಂದ ಕಳಪೆ ಮಟ್ಟದ ಹೈಡ್ರಾಲಿಕ್ ಮತ್ತು ನದಿಯ ನೀರನ್ನು ಸಂಗ್ರಹಿಸುವ ಸಾಮಥ್ರ್ಯವನ್ನು ಕಳೆದುಕೊಳ್ಳುವದಲ್ಲದೆ, ಇದರ ಪರಿಣಾಮವಾಗಿ ಪ್ರವಾಹಗಳು, ಬರಗಾಲಗಳು, ಭೂಕುಸಿತಗಳು ಮತ್ತು ಮಣ್ಣು ಕುಸಿತದಿಂದ ಇಲ್ಲಿನ ಜನಜೀವನ ಮತ್ತು ಆಸ್ತಿಪಾಸ್ತಿ ನಾಶವಾಗುತ್ತಿದೆ ಎಂದು ಹೇಳಿದೆ.
ನೀರಿನ ಕೊರತೆ: ಅಭಿವೃದ್ಧಿ ಹೆಚ್ಚಿದಂತೆ ಮಳೆಗಾಲವಲ್ಲದ ಸಮಯದಲ್ಲಿ ನೀರಿನ ಕೊರತೆ, ಕಡಿಮೆ ಬೆಳೆ ಉತ್ಪನ್ನದಿಂದಾಗಿ ಜೀವನೋಪಾಯಕ್ಕೆ ತೊಂದರೆ ಯಾಗುವದಲ್ಲದೆ, ಮಾನವ-ಪ್ರಾಣಿ ಸಂಘರ್ಷ ಅಧಿಕವಾಗುತ್ತದೆ. ರಾಜ್ಯದ ಪ್ರಮುಖ ನದಿಗಳಲ್ಲಿ ನೀರಿನ ಕೊರತೆಯಿಂದಾಗಿ ರಾಜ್ಯದ ಒಳಗೆ ಮತ್ತು ಅಂತರ್ರಾಜ್ಯ ಮಾನವ ಸಾಮಾಜಿಕ ಸಂಘರ್ಷಗಳು ಹೆಚ್ಚಾಗುವದರಿಂದ ಇವೆಲ್ಲವೂ ಪರಿಸರ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ.
ಈ ವರದಿಯು ಕೊಡಗು ಜಿಲ್ಲೆಯಲ್ಲಿ ಸುಮಾರು 300 ಪರಿಸರ ವಿಜ್ಞಾನದ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದು, ಆ ಪ್ರದೇಶಗಳನ್ನು ಬಳಕೆ ಮಾಡುವದರಿಂದ ಆವಾಸ ಸ್ಥಾನದ ನಷ್ಟ, ವಿಘಟನೆ, ಕಾಡ್ಗಿಚ್ಚು, ಪರಿಸರ ವಿಘಟನೆ, ಅನಧಿಕೃತ ಅರಣ್ಯ ನಾಶ, ಜನರ ಸ್ಥಳಾಂತರ, ಸಾವಿರಾರು ಮರಗಳ ಹನನ ದಿಂದಾಗಿ ವನ್ಯಜೀವಿಗಳ ಮೇಲೆ ಪರಿಣಾಮ ಬೀರುವದಲ್ಲದೆ, ಅವುಗಳ ಚಲನ ಮಾರ್ಗಗಳು ನಾಶವಾಗುತ್ತವೆ. ಇದರಿಂದ ಅತಿಯಾದ ಮರಗಳ ಕಳ್ಳ ಸಾಗಣೆ ಮತ್ತು ಅರಣ್ಯ ಸಂಪತ್ತು ಲೂಟಿ ಸಂಭವಿಸುತ್ತದೆ ಎಂದು ವರದಿ ಸೂಚಿಸಿದೆ.