ಮಡಿಕೇರಿ, ಜ. 22: ಕೊಡಗಿನಲ್ಲಿ ಪಾರಂಪರಿಕ ಜೇನು ಕೃಷಿಗೆ ಶತಮಾನದ ಹಿಂದೆ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಸ್ವಾಮಿ ಶಾಂಭವಾನಂದರು ವಿಶೇಷ ಕಾಳಜಿಯೊಂದಿಗೆ ಪ್ರೋತ್ಸಾಹ ನೀಡಿದ್ದು, ಆ ದಿಸೆಯಲ್ಲಿ ಪ್ರಸಕ್ತ ಕೊಡಗಿನ ಸಂತ್ರಸ್ತ ಕುಟುಂಬಗಳಿಗೆ ಜೇನುಕೃಷಿ ತರಬೇತಿ ಕಲ್ಪಿಸಲಾಗುವದು ಎಂದು ಆಶ್ರಮ ಅಧ್ಯಕ್ಷರಾಗಿರುವ ಶ್ರೀ ಬೋಧ ಸ್ವರೂಪಾನಂದ ಮಹಾರಾಜ್ ಕರೆ ನೀಡಿದರು.ಸೂರ್ಲಬ್ಬಿಯಲ್ಲಿ ಪೊನ್ನಂಪೇಟೆ ಅರಣ್ಯ ಕಾಲೇಜಿನ ತಜ್ಞರಾದ ಡಾ. ಕೆಂಚಾರೆಡ್ಡಿ ಅವರ ಮೂಲಕ ಜೇನುಕೃಷಿ ತರಬೇತಿ ಶಿಬಿರ ಆಯೋಜನೆ ವೇಳೆ ಸ್ವಾಮೀಜಿ ಮಾರ್ಗದರ್ಶನ ನೀಡಿದರು.
ಗ್ರಾಮೀಣ ಜನತೆ ಪ್ರಾಕೃತಿಕ ದುರಂತದ ಕಾರಣಕ್ಕಾಗಿ ಗ್ರಾಮಗಳನ್ನು ತೊರೆಯದೆ, ಜೇನು ಕೃಷಿ, ಹೊಲಿಗೆ ತರಬೇತಿ, ತಿಂಡಿಗಳ ತಯಾರಿಕೆ, ವಾಹನ ಚಾಲನಾ ತರಬೇತಿಯಿಂದ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಮಠದಿಂದ ಸಹಕಾರ ನೀಡಲಾಗುವದು ಎಂದು ಅವರು ಭರವಸೆ ನೀಡಿದರು. ಮಠದ ಕರೆಗೆ ಓಗೊಟ್ಟು ಅರಣ್ಯ ಕಾಲೇಜಿನ ಸಂಪನ್ಮೂಲ ವ್ಯಕ್ತಿಗಳು ತರಬೇತಿ ಶಿಬಿರದಲ್ಲಿ ಕೈ ಜೋಡಿಸಿರುವ ಬಗ್ಗೆ ಸ್ವಾಮೀಜಿ ಶ್ಲಾಘಿಸಿದರು.
ಕೊಡಗಿನವರೇ ಆಗಿದ್ದ ಸ್ವಾಮಿ ಶಾಂಭವಾನಂದರು; ಹಿಂದೆ ಜನತೆ ಕಷ್ಟದಲ್ಲಿ ಸಿಲುಕಿದ್ದಾಗ ಜೇನು ಕೃಷಿಗೆ ಒತ್ತು ನೀಡಿದ್ದನ್ನು ನೆನಪಿಸಿದ ಅವರು, ಆ ದಿಸೆಯಲ್ಲಿ ತರಬೇತಿ ಹೊಂದಿ ಉತ್ತಮ ಜೀವನ ಕಂಡುಕೊಳ್ಳುವಂತೆ ಜನತೆಗೆ ಕರೆ ನೀಡಿದರು.
ಜೇನು ಕೃಷಿಯಿಂದ ಆರೋಗ್ಯ
ಪೊನ್ನಂಪೇಟೆ ಅರಣ್ಯ ಕಾಲೇಜಿನ ಜೇನು ಕೃಷಿ ತಜ್ಞ ಡಾ. ಕೆಂಚಾರೆಡ್ಡಿ ಮಾಹಿತಿ ನೀಡುತ್ತಾ, ಜೇನು ಸಾಕಾಣೆಯಿಂದ ಮನುಷ್ಯನ ಆರೋಗ್ಯಕ್ಕೆ ಪೂರಕ ಅಂಶಗಳು ದೊರಕಲಿದ್ದು, ಜೇನುನೊಣ ಕಚ್ಚಿದರೆ ರೋಗ ನಿರೋಧಕ ಶಕ್ತಿಯೊಂದಿಗೆ ಸಂಧುಗಳ ನೋವು ಇತ್ಯಾದಿ ದೂರವಾಗಲಿದೆ ಎಂದು ನೆನಪಿಸಿದರು.
(ಮೊದಲ ಪುಟದಿಂದ) ಜೇನುತುಪ್ಪ, ಜೇನು ಮೇಣ, ಜೇನುಗೂಡುಗಳ ಮಾರಾಟ ಆರ್ಥಿಕ ಸ್ವಾವಲಂಭನೆಗೆ ಸಹಕಾರಿ ಎಂದು ಉದಾಹರಿಸಿದ ಅವರು, ಇಂತಹ ಕಾಯಕ ಕಂಡುಕೊಳ್ಳುವಲ್ಲಿ ಸಮಯ ವ್ಯರ್ಥ ಮಾಡದೆ, ದೈನಂದಿನ ಜೀವನದಲ್ಲಿ ಉಪ ಕಸುಬು ರೀತಿ ನೆಮ್ಮದಿಯ ಬದುಕು ಕಂಡುಕೊಳ್ಳಲು ಸಾಧ್ಯವೆಂದು ನೆನಪಿಸಿದರು.
ವಿವಿಧ ತಳಿಯ ಜೇನುಗೂಡುಗಳ ಮಹತ್ವ ಹಾಗೂ ಬಹು ಉಪಯೋಗಿ ಜೇನು ಉತ್ಪನ್ನಗಳ ಬಗ್ಗೆ ವಿವರಿಸಿದ ಅವರು, ಹವಾಮಾನಕ್ಕೆ ತಕ್ಕಂತೆ ಜೇನು ಹುಳಗಳ ರಕ್ಷಣೆಯೊಂದಿಗೆ ಜೇನುಗೂಡುಗಳನ್ನು ಪೋಷಿಸುವ ಕಲೆಯನ್ನು ತಿಳಿ ಹೇಳಿದರು. ಅಲ್ಲದೆ ಜೇನು ಸಾಕಾಣೆಯಿಂದ ಹಂತ ಹಂತವಾಗಿ ಲಾಭಗಳಿಸುವ ಮಾರ್ಗ ಸೂಚಿಯನ್ನು ಗ್ರಾಮಸ್ಥರಿಗೆ ತಿಳಿಸಿಕೊಟ್ಟರು.
ಮಡಿಕೇರಿ ತೋಟಗಾರಿಕಾ ಮತ್ತು ಕೃಷಿ ಕೇಂದ್ರದ ಬಸವ ಲಿಂಗಪ್ಪ, ಆಶ್ರಮ ಅನುಯಾಯಿಗಳಾದ ಸುಬೋಧ್ರಾವ್, ಶಂಕರ್, ರಾಜೇಶ್ ಸೇರಿದಂತೆ ಶಿಬಿರದಲ್ಲಿ ಹೆಚ್ಚಿನ ಗ್ರಾಮವಾಸಿಗಳು ಪಾಲ್ಗೊಂಡಿದ್ದರು.