ಸೋಮವಾರಪೇಟೆ,ಜ.22: ಸೋಮವಾರಪೇಟೆ ಪಟ್ಟಣದಲ್ಲಿ ಬೀಡಾಡಿ ತಿರುಗುತ್ತಿದ್ದ ಹಲವಷ್ಟು ಜಾನುವಾರುಗಳು ಇತ್ತೀಚೆಗೆ ಕಣ್ಮರೆಯಾಗುತ್ತಿರುವ ಘಟನೆಗಳ ಹಿಂದೆ ಹೈಟೆಕ್ ದನಗಳ್ಳರ ಕೈವಾಡವಿದೆಯೇ ಎಂಬ ಅನುಮಾನ ಮೂಡುವಂತೆ ಮಾಡಿದೆ.ಪಟ್ಟಣದ ಹೃದಯ ಭಾಗ ಸೇರಿದಂತೆ ಹಲವು ವಾರ್ಡ್‍ಗಳಲ್ಲಿ ರಸ್ತೆಯ ಬದಿಯಲ್ಲಿಯೇ ಬೀಡುಬಿಡುತ್ತಿದ್ದ ಜಾನುವಾರುಗಳ ಸಂಖ್ಯೆ ಇದೀಗ ಇಳಿಕೆಯಾಗುತ್ತಿದ್ದು, ಹಲವಷ್ಟು ದನಗಳು ಕಣ್ಮರೆಯಾಗಿವೆ. ಈ ಕಣ್ಮರೆ ಘಟನೆಗಳ ಹಿಂದೆ ಹೈಟೆಕ್ ಮಾದರಿಯಲ್ಲಿ ದನಗಳನ್ನು ಕಳ್ಳತನ ಮಾಡುವ ಗುಂಪು ಸಕ್ರಿಯವಾಗಿ ರುವದು ಇದೀಗ ದೃಢಪಡುತ್ತಿದೆ.ನಿನ್ನೆ ರಾತ್ರಿ 12 ಗಂಟೆ ಸುಮಾರಿಗೆ ಪಟ್ಟಣದ ಅಲೋಕ ಫ್ಯಾಮಿಲಿ ರೆಸ್ಟೋರೆಂಟ್ ಮುಂಭಾಗ ಐಷಾರಾಮಿ ಝೈಲೋ ಕಾರಿನಲ್ಲಿ ಜಾನುವಾರನ್ನು ತುಂಬಿಕೊಂಡು ಹೋಗಿರುವ ದೃಶ್ಯ ಎದುರಿಗಿರುವ ಕಿರಣ್ ವರ್ಕ್‍ಶಾಪ್‍ನಲ್ಲಿನ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.

ನಡುರಾತ್ರಿ 12ಕ್ಕೆ ಸರಿಯಾಗಿ ಕಾವೇರಿ ಪ್ರತಿಮೆಯ ಕಡೆಯಿಂದ ಕ್ಲಬ್‍ರಸ್ತೆಗೆ ಆಗಮಿಸುವ ವಾಹನ, ಪ.ಪಂ. ಗೇಟ್‍ನ ಮುಂಭಾಗ ತಿರುವು ಪಡೆದು, ಅಲೋಕ ರೆಸ್ಟೋರೆಂಟ್ ಮುಂಭಾಗದಿಂದ ಎಡಕ್ಕೆ ಚಲಿಸಿದೆ. ಕೆಲ ಸೆಕೆಂಡ್‍ಗಳ ನಂತರ ನಾಲ್ಕೈದು ಜಾನುವಾರು ಗಳನ್ನು ಬಾರ್‍ನ ಮುಂಭಾಗಕ್ಕೆ ಓಡಿಸಿಕೊಂಡು ಬಂದಿದ್ದು, ಈ ಸಂದರ್ಭ ವಾಹನದಿಂದ ಈರ್ವರು ಇಳಿದು ಬರುವ ದೃಶ್ಯಾವಳಿಗಳು ಸೆರೆಯಾಗಿದೆ.