ಸೋಮವಾರಪೇಟೆ,ಜ.22: ಪಟ್ಟಣ ಪಂಚಾಯಿತಿಯಿಂದ ಪ್ರತಿ ಆರು ತಿಂಗಳಿಗೆ ಒಮ್ಮೆ ಜನಸಂಪರ್ಕ ಸಭೆಗಳನ್ನು ನಡೆಸುವಂತಾಗಬೇಕು. ಆಗ ಮಾತ್ರ ಪಟ್ಟಣದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು, ಸಾರ್ವಜನಿಕರು ಪ.ಪಂ. ಆಡಳಿತಾಧಿಕಾರಿಯನ್ನು ಆಗ್ರಹಿಸಿದರು.

ಇಲ್ಲಿನ ಪ. ಪಂ.ನ ಪ್ರಸಕ್ತ ಸಾಲಿನ ಮುಂಗಡ ಪತ್ರ ತಯಾರಿ ಕುರಿತು ಪಂಚಾಯಿತಿ ಸಭಾಂಗಣದಲ್ಲಿ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ಮಹೇಶ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಆಗ್ರಹ ಕೇಳಿಬಂತು.

ಹಿಂದೆ ಆಡಳಿತ ನಡೆಸಿದ್ದ ಜನಪ್ರತಿನಿಧಿಗಳು ಕೇವಲ ಕಚ್ಚಾಟದಲ್ಲೇ ಕಾಲ ಕಳೆದಿದ್ದರಿಂದ ಪಟ್ಟಣದ ಅಭಿವೃದ್ಧಿ ಕುಂಠಿತಗೊಂಡಿದ್ದು, ಮುಂದಿನ ದಿನಗಳಲ್ಲಿ ಹೀಗಾಗದಂತೆ ನೂತನ ಸದಸ್ಯರು ಎಚ್ಚರಿಕೆ ವಹಿಸಬೇಕು. ರಾಜಕೀಯ ಮರೆತು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಬೇಕೆಂದು ರೋಟರಿ ಸಂಸ್ಥೆಯ ಮಾಜೀ ಅಧ್ಯಕ್ಷ ಎ.ಪಿ. ವೀರರಾಜು ಸಲಹೆ ನೀಡಿದರು.

ಜಯಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಸುರೇಶ್ ಶೆಟ್ಟಿ ಮಾತನಾಡಿ, ಪಟ್ಟಣದಲ್ಲಿ ಚೆನ್ನಾಗಿರುವ ರಸ್ತೆಯ ಮೇಲೆ ಡಾಂಬರೀಕರಣ ಮಾಡಲಾಗಿದೆ. ಬಹುತೇಕ ವಾರ್ಡ್‍ಗಳಲ್ಲಿ ಅವೈಜ್ಞಾನಿಕ ಚರಂಡಿ ನಿರ್ಮಾಣದಿಂದ ನೀರು ನಿಂತು ಸೊಳ್ಳೆಗಳ ಆವಾಸ ಕೇಂದ್ರವಾಗಿ ಮಾರ್ಪಟ್ಟಿದೆ. ಪಂಚಾಯಿತಿಗೆ ತಿಳಿಸಿದಾಗ ಪೌರಕಾರ್ಮಿಕರ ಕೊರತೆಯ ಬಗ್ಗೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಆರೋಗ್ಯದ ಕಡೆ ಗಮನಹರಿಸಬೇಕಾದ ಪ.ಪಂ.ಯಲ್ಲಿ ಆರೋಗ್ಯ ನಿರೀಕ್ಷಕರಿಲ್ಲ. ತಕ್ಷಣವೇ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಖಾಲಿ ಇರುವ ಹುದ್ದೆಗಳನ್ನು ತುಂಬಬೇಕೆಂದು ಆಡಳಿತಾಧಿಕಾರಿಗೆ ಮನವಿ ಮಾಡಿದರು.

ವಕ್ರ್ಸ್‍ಶಾಪ್ ಪ್ರದೇಶದಲ್ಲಿ ರಸ್ತೆ ವ್ಯವಸ್ಥೆ ಸರಿಯಾಗಿಲ್ಲದೆ ಧೂಳಿನಿಂದ ಆವೃತ್ತಗೊಂಡಿದೆ. ಸಂತೆ ದಿನವಾದ ಸೋಮವಾರದಂದು ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ. ಪಟ್ಟಣದ ಪೊಲೀಸ್ ಠಾಣೆಗೂ ರಸ್ತೆಯಿಲ್ಲ್ಲ ಅದನ್ನು ಸರಿಪಡಿಸಬೇಕೆಂದು ಮೋಟಾರ್ ಯೂನಿಯನ್‍ನ ರಂಗಸ್ವಾಮಿ ಹೇಳಿದರು.

ಪಟ್ಟಣದಲ್ಲಿರುವ ಹೈಮಾಸ್ಟ್ ಲ್ಯಾಂಪ್ ಮತ್ತು ಬೀದಿದೀಪಗಳು ಸಮರ್ಪಕವಾಗಿ ಉರಿಯುತ್ತಿಲ್ಲ. ಇದರಿಂದ ಕಳ್ಳರಿಗೆ ಅನುಕೂಲ ಮಾಡಿಕೊಟ್ಟಂತಾಗಿವೆ. ತಕ್ಷಣವೆ ಸರಿಪಡಿಸಬೇಕೆಂದು ದೊರೆ ಹೇಳಿದರು. ಸಭೆಯಲ್ಲಿ ಮುಖ್ಯಾಧಿಕಾರಿ ನಟರಾಜ್, ಎಫ್‍ಡಿಸಿ ಪಿಯೂಸ್ ಡಿಸೋಜ ಉಪಸ್ಥಿತರಿದ್ದರು.