ಗೋಣಿಕೊಪ್ಪ ವರದಿ, ಜ. 22 :ವಿದೇಶಿ ಹಣದ ವ್ಯಾಮೋಹದಿಂದ ಕೆಲವು ಪರಿಸರವಾದಿಗಳು ಕೊಡಗಿನ ಜನರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಫೆಬ್ರವರಿ 11 ರಂದು ಗೋಣಿಕೊಪ್ಪದಲ್ಲಿ ಪರಿಸರವಾದಿಗಳ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲು ವಿವಿಧ ಪಕ್ಷಗಳ ಪ್ರಮುಖರು ಇಲ್ಲಿನ ಆರ್‍ಎಂಸಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದಾರೆ.ವಿವಿಧ ಪಕ್ಷದ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡು ಕೊಡಗಿನಲ್ಲಿ ಪರಸರದ ಹೆಸರಿನಲ್ಲಿ ಕೆಲವು ಪರಿಸರವಾದಿಗಳು ಅನವಶ್ಯಕ ಗೊಂದಲ ಮೂಡಿಸುತ್ತಿದ್ದಾರೆ. ಇದನ್ನು ಖಂಡಿಸಲು ಬೃಹತ್ ಪ್ರತಿಭಟನೆ ನಡೆಸಲು ಒಮ್ಮತದಿಂದ ನಿರ್ಧಾರ ತೆಗೆದುಕೊಂಡರು.ಸಭೆಯಲ್ಲಿ ಶಾಸಕರುಗಳಾದ ಕೆ. ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ, ಬಿಜೆಪಿ ಪ್ರಮುಖರುಗಳಾದ ಮನು ಮುತ್ತಪ್ಪ, ಕುಂಞಂಗಡ ಅರುಣ್ ಭೀಮಯ್ಯ, ಶಶಿ ಸುಬ್ರಮಣಿ, ಸಿ.ಕೆ. ಬೋಪಣ್ಣ, ಕಾಂಗ್ರೆಸ್ ನಾಯಕರುಗಳಾದ ತೀತೀರ ಧರ್ಮಜ, ಟಾಟು ಮೊಣ್ಣಪ್ಪ, ಬಾನಂಡ ಪ್ರಥ್ವಿ ಸೇರಿದಂತೆ ಜಯ ಕರ್ನಾಟಕ ಸಂಘಟನೆ

(ಮೊದಲ ಪುಟದಿಂದ) ಪ್ರಮುಖ ಜಿನ್ನು ನಾಣಯ್ಯ, ಮಧು ಬೋಪಣ್ಣ ಪಾಲ್ಗೊಂಡು ಪ್ರತಿಭಟನಾ ರ್ಯಾಲಿ ನಡೆಸುವ ಬಗ್ಗೆ ಚರ್ಚೆ ನಡೆಸಿದರು.

ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕೊಡಗಿನ ಬಾಣೆ ಜಮೀನನ್ನು ಸರ್ಕಾರದ ಅರಣ್ಯ ಪ್ರದೇಶ ಎಂದು ಘೋಷಿಸಿ ಸುತ್ತೋಲೆ ಹೊರಡಿಸುವಲ್ಲಿ ಕೆಲವು ಪರಿಸರವಾದಿಗಳು ಯಶಸ್ವಿಯಾಗಿದ್ದಾರೆ. ವಿಶ್ವ ಪಾರಂಪಾರಿಕ ಪಟ್ಟಿಗೆ ಸೇರಿಸುವದು, ಜಿಲ್ಲೆಯನ್ನು ಸಂಪೂರ್ಣವಾಗಿ ಸೂಕ್ಷ್ಮ ಪರಿಸರವನ್ನಾಗಿ ಘೋಷಿಸುವದು, ಬಾಣೆ ಜಮೀನನ್ನು ಡೀಮ್ಡ್ ಫಾರೆಸ್ಟ್ ಎಂದು ಘೋಷಿಸಲು ನಿರಂತರ ಹುನ್ನಾರ ನಡೆಸಿ ಕೊಡಗಿನ ಹಿಡುವಳಿದಾರರನ್ನು ನಿರ್ಗತಿಕರನ್ನಾಗಿ ಮಾಡುವ ಹುನ್ನಾರ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಸಭೆಯಲ್ಲಿ ವ್ಯಕ್ತಗೊಂಡವು.

ಹುಲಿ ರಕ್ಷಣೆಯ ಹೆಸರಿನಲ್ಲಿ ವಿದೇಶಿ ಹಣ ಪಡೆದು ನಾಗರಹೊಳೆ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಿದ್ದಾರೆ. ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿಕೊಂಡು ಮಡಿಕೇರಿ ಸುತ್ತಮುತ್ತಲಿನ ಪ್ರಕೃತಿ ವಿಕೋಪದ ಜಾಗವನ್ನು ದುಪ್ಪಟ್ಟು ಬೆಲೆ ನೀಡುವದಾಗಿ ಹೇಳಿಕೊಂಡು ಸಂತ್ರಸ್ತರನ್ನು ಅಂತಹ ಜಾಗದಿಂದ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿಗೆ ಒತ್ತಾಯಿಸುತ್ತಿದ್ದಾರೆ. ಹೀಗೆ ಹಲವು ಜನವಿರೋಧಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಆರೋಪಗಳು ವ್ಯಕ್ತಗೊಂಡವು. ಇಂತಹವುಗಳನ್ನು ಖಂಡಿಸಿ ಜನರಿಗೆ ಕೆಲವು ಪರಿಸರವಾದಿಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲು ನಿರ್ಧರಿಸಲಾಯಿತು.

-ಸುದ್ದಿಪುತ್ರ