ಮಡಿಕೇರಿ, ಜ. 22: ನಡೆದಾಡುವ ದೈವ, ಕಾಯಕ ಯೋಗಿ ಸಿದ್ಧಗಂಗಾ ಶ್ರೀ ಮುರುಘಮಠದ ಪೂಜ್ಯ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರ ನಿಧನಕ್ಕೆ ಕಂಬನಿ ಮಿಡಿದಿರುವ ವಿವಿಧ ಸಂಘ-ಸಂಸ್ಥೆಗಳು ಕಾರ್ಯಕ್ರಮ ಏರ್ಪಡಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.ಸೋಮವಾರಪೇಟೆಯಲ್ಲಿ ಪಟ್ಟಣ ಬಂದ್

ಕಾಯಕಯೋಗಿ, ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ಕರೆಯಲ್ಪಡುವ ಸಿದ್ಧಗಂಗಾ ಶ್ರೀಗಳಾದ ಶ್ರೀ ಶಿವಕುಮಾರಸ್ವಾಮೀಜಿ ಅವರ ನಿಧನಕ್ಕೆ ಪಟ್ಟಣದಲ್ಲಿ 2 ಗಂಟೆಗಳ ಕಾಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಸಂತಾಪ ಸೂಚಿಸಲಾಯಿತು. ಇದರೊಂದಿಗೆ ವಿವಿಧ ಸಂಘಸಂಸ್ಥೆಗಳಿಂದ ಜೇಸೀ ವೇದಿಕೆಯಲ್ಲಿ ಸಂತಾಪ ಸಭೆ ಆಯೋಜಿಸಿ ನುಡಿನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಸಿದ್ಧಗಂಗಾ ಶ್ರೀಗಳ ಸೇವೆ ಸದಾ ಸ್ಮರಣೀಯ. ಅವರ ಕಾಯಕಗಳೇ ಅವರನ್ನು ಸಮಾಜದಲ್ಲಿ ಜಿರಂಜೀವಿಯನ್ನಾಗಿಸಿದೆ. ಎಲ್ಲಾ ಸಮುದಾಯವನ್ನೂ ಸಮಾನವಾಗಿ ಕಂಡಂತಹ ಮಹಾನ್ ಚೇತನವಾಗಿದ್ದ ಶ್ರೀಗಳು ತಮ್ಮ ಜೀವನದುದ್ದಕ್ಕೂ ದಾಸೋಹದೊಂದಿಗೆ ಸಮಾಜ ಸುಧಾರಣೆಗೆ ಶ್ರಮಿಸಿದವರು ಎಂದು ಬಣ್ಣಿಸಿದರು.

ಇಂತಹ ಮೇರು ವ್ಯಕ್ತಿತ್ವದ ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂಬ ಬೇಡಿಕೆಯನ್ನು ಪಕ್ಷದಿಂದ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ರಂಜನ್ ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇಲ್ಲಿನ ಸಂತ ಜೋಸೆಫರ ಕಾಲೇಜಿನ ಫಾ. ಟೆನ್ನಿ ಕುರಿಯನ್ ಅವರು ಮಾತನಾಡಿ, ತ್ರಿವಿಧ ದಾಸೋಹಿಗಳ ಆದರ್ಶ ಪಾಲನೆಯಾಗಬೇಕು ಎಂದರು.

ಮುಸ್ಲಿಂ ಸಮಾಜದ ಧರ್ಮಗುರು ಅಬ್ದುಲ್ ಅಜೀಜ್ ಸಖಾಫಿ ಮಾತನಾಡಿ, ಮಾದರಿ ಸಾಧಕರಾಗಿರುವ ಶ್ರೀಗಳ ಆದರ್ಶಗಳೇ ಸಮಾಜಕ್ಕೆ ದಾರಿದೀಪವಾಗಿದ್ದು, ಅವರ ಮಾರ್ಗದರ್ಶನದಲ್ಲಿ ಸಮಾಜ ಮುಂದುವರೆಯಬೇಕು ಎಂದು ಆಶಿಸಿದರು.

ನಿವೃತ್ತ ಪ್ರೊಫೆಸರ್ ಧರ್ಮಪ್ಪ ಮಾತನಾಡಿ, ನಿಜವಾದ ಜಾತ್ಯತೀತ ಭಾರತವನ್ನು ಸಿದ್ಧಗಂಗಾ ಮಠದಲ್ಲಿ ಕಾಣಬಹುದಾಗಿದ್ದು, ಸಾವಿರಾರು ವಿದ್ಯಾರ್ಥಿಗಳು ಜಾತಿ, ಧರ್ಮದ ಭೇದವಿಲ್ಲದೇ ಅಕ್ಷರ ಜ್ಞಾನ ಪಡೆಯುತ್ತಿದ್ದಾರೆ ಎಂದರು.

ಶಿಕ್ಷಣದಿಂದ ಮಾತ್ರ ಬಡತನದ ನಿವಾರಣೆ ಸಾಧ್ಯ ಎಂಬದನ್ನು ಮನಗಂಡ ಶ್ರೀ ಶಿವಕುಮಾರ ಸ್ವಾಮೀಜಿಗಳು ನೂರಾರು ವಿದ್ಯಾಸಂಸ್ಥೆಗಳನ್ನು ನಿರ್ಮಿಸುವ ಮೂಲಕ ಅಕ್ಷರ ದಾಸೋಹದ ಕ್ರಾಂತಿ ಮಾಡಿದರು. ಬಸವಣ್ಣನವರ ತತ್ವಗಳನ್ನು ಅಕ್ಷರಶಃ ಪಾಲಿಸುವ ಮೂಲಕ ಅಭಿನವ ಬಸವಣ್ಣ ಎನಿಸಿಕೊಂಡರು ಎಂದು ಬಣ್ಣಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ಪ್ರಮುಖರಾದ ಜೆ.ಸಿ. ಶೇಖರ್, ಜವರಪ್ಪ, ಮೃತ್ಯುಂಜಯ, ಶಿವಣ್ಣ, ಗಿರೀಶ್, ಚಂದ್ರಶೇಖರ್, ಮೋಹನ್‍ಮೂರ್ತಿ ಶಾಸ್ತ್ರೀ ಸೇರಿದಂತೆ ಇತರರು ಕಾರ್ಯಕ್ರಮ ನಿರ್ವಹಿಸಿದರು.

ಭಜನಾ ಮಂಡಳಿ ಸದಸ್ಯರುಗಳಾದ ಪಂಕಜ ಶ್ಯಾಂಸುಂದರ್, ರಾಗಿಣಿ, ಗೀತಾಂಜಲಿ ಮಹೇಶ್, ದಾಕ್ಷಾಯಿಣಿ, ಲೋಕೇಶ್ವರಿ ಗೋಪಾಲ್ ಸೇರಿದಂತೆ ಇತರರಿಂದ ಭಜನೆ, ಮಂತ್ರ ಪಠಣಗಳು ನಡೆಯಿತು. ಶಿವಕುಮಾರ ಸ್ವಾಮೀಜಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಅನ್ನದಾಸೋಹ ನೆರವೇರಿತು. ಇದರೊಂದಿಗೆ ಪಟ್ಟಣದ ಬಸವೇಶ್ವರ ದೇವಾಲಯ, ರಾಮಮಂದಿರದಲ್ಲೂ ಭಜನೆ, ಪ್ರಾರ್ಥನೆ ಸಲ್ಲಿಸಲಾಯಿತು.

ಅಲಂಕೃತ ರಥದಲ್ಲಿ ಮೆರವಣಿಗೆ

ಹೆಬ್ಬಾಲೆ ಶ್ರೀ ಬಸವೇಶ್ವರ ದೇವಾಲಯ ಸಮಿತಿ ಮತ್ತು ಮರೂರು ಶ್ರೀಗಳ ಭಕ್ತ ಮಂಡಳಿ ಹಾಗೂ ಗ್ರಾಮಸ್ಥರ ವತಿಯಿಂದ ತುಮಕೂರು ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಗಳು ಶಿವೈಕ್ಯರಾದ ಹಿನ್ನೆಲೆಯಲ್ಲಿ ಬೆಳ್ಳಿರಥದಲ್ಲಿ ಶ್ರೀಗಳ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.

ವಿವಿಧ ಪುಷ್ಪಗಳಿಂದ ಅಲಂಕಾರಗೊಂಡಿದ್ದ ಏಳು ಕುದುರೆಗಳನ್ನು ಹೊಂದಿರುವ ಬೆಳ್ಳಿರಥದಲ್ಲಿ ಶ್ರೀಗಳ ಭಾವಚಿತ್ರವನ್ನು ಇರಿಸಿ ಪುಷ್ಪಹಾರ ಹಾಕಿ ಪೂಜೆ ಸಲ್ಲಿಸುವ ಮೂಲಕ ಗ್ರಾಮದ ಬಸ್ ನಿಲ್ದಾಣದಿಂದ ಮೆರವಣಿಗೆ ಆರಂಭಗೊಂಡಿತು. ಮೆರವಣಿಗೆಯು ಗ್ರಾಮದ ಮುಖ್ಯಬೀದಿಯಲ್ಲಿ ಸಾಗಿ ನಂತರ ಕೊಪ್ಪಲು , ಹೊಸಬೀದಿ ಹಾಗೂ ಕಾರಸಗೋಡು ಬೀದಿಗಳಲ್ಲಿ ಸಂಚಾರಿಸಿತು. ಮೆರವಣಿಗೆ ಸಂದರ್ಭ ನೂರಾರು ಶ್ರೀಗಳ ಭಕ್ತರು, ಅಭಿಮಾನಿಗಳು ಹಾಗೂ ಗ್ರಾಮಸ್ಥರು ಸಾಗಿ ಬಂದರು. ಈ ಸಂದರ್ಭ ಶಿವಕುಮಾರ ಸ್ವಾಮೀಜಿಗಳ ಪರವಾಗಿ ಘೋಷಣೆಗಳನ್ನು ಕೂಗಿದರು. ಊರಿನ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತಿದ್ದ ಸಂದರ್ಭ ಮಹಿಳೆಯರು ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು. ಅಲ್ಲದೆ ಮನೆಗಳ ಮುಂಭಾಗ ನಿಂತಿದ್ದ ಮಹಿಳೆಯರು ಕಣ್ಣೀರಧಾರೆ ಎರೆದರು. ನಂತರ ಮೆರವಣಿಗೆಯು ಗ್ರಾಮದ ಕೆನರಾ ಬ್ಯಾಂಕ್ ಬಳಿ ಮುಕ್ತಾಯಗೊಂಡಿತು. ಈ ಸಂದರ್ಭ ಊರಿನ ಮುಖಂಡ ಎಚ್.ಕೆ. ನಾರಾಯಣ (ಬುಲೆಟ್) ಮಾತನಾಡಿ, ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದು, ಇದರಿಂದ ನಾಡಿಗೆ ತುಂಬಲಾರದ ನಷ್ಟ ಉಂಟಾಗಿದೆ. ಶ್ರೀಗಳು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಲಕ್ಷಾಂತರ ಬಡ ಮಕ್ಕಳಿಗೆ ವಿದ್ಯಾಧಾನ ಮಾಡಿ ಅವರ ಭವಿಷ್ಯವನ್ನು ರೂಪಿಸಿದ್ದಾರೆ. ಸಿದ್ಧಗಂಗಾ ಶ್ರೀಗಳು ಆಧುನಿಕ ಬಸವಣ್ಣ ಎಂದು ಬಣ್ಣಿಸಿದರು. ಈ ಸಂದರ್ಭ ಊರಿನ ಮುಖಂಡರಾದ ಯಜಮಾನ್ ಎಚ್.ಎಲ್. ಕಾಂತರಾಜ್, ಎಚ್.ಎಸ್.ಪರಮೇಶ್, ವಿನೋದ್, ಪಾಟೇಲ್ ಪ್ರಕಾಶ್, ರೇಣುಕಾಸ್ವಾಮಿ, ವೆಂಕಟೇಶ್, ಅಭಿ, ಮೋಕ್ಷಿತ್, ಎಚ್.ಎನ್. ದೇವರಾಜ್ ಮತ್ತಿತರರು ಇದ್ದರು. ಇದೇ ಸಂದರ್ಭ ಎಲ್ಲರಿಗೂ ಪ್ರಸಾದ ವಿನಿಯೋಗಿಸಲಾಯಿತು.

ಸುಂಟಿಕೊಪ್ಪ: ಕಾಯಕಯೋಗಿ ತ್ರಿವಿಧಿ ದಾಸೋಹಿ ಅಧುನಿಕ ಬಸವಣ್ಣ ತುಮಕೂರು ಸಿದ್ಧಗಂಗಾ ಮಠದ ಪೀಠಾಧೀಶ ಡಾ. ಶಿವಕುಮಾರ ಮಹಾಸ್ವಾಮೀಜಿ ಶಿವೈಕ್ಯರಾದ ಅಂಗವಾಗಿ ಸುಂಟಿಕೊಪ್ಪ ವಿವಿಧ ಸಂಘಟನೆ ವತಿಯಿಂದ ಕನ್ನಡ ವೃತ್ತದಲ್ಲಿ ಸ್ವಾಮೀಜಿಯವರ ಭಾವಚಿತ್ರವನ್ನಿಟ್ಟು ಪುಷ್ಟಾರ್ಚನೆಗೈದು ಶ್ರದ್ಧಾಂಜಲಿ ಆರ್ಪಿಸಲಾಯಿತು.

ವಿವಿಧ ಸಂಘ ಸಂಸ್ಥೆಗಳವರು ಕನ್ನಡ ವೃತ್ತದಲ್ಲಿ ಜಮಾವಣೆಗೊಂಡು ಮದ್ಯಾಹ್ನ 1 ಗಂಟೆಯಿಂದ 1.45 ಗಂಟೆವರೆಗೆ ಸುಂಟಿಕೊಪ್ಪದ ಅಂಗಡಿ ಮುಂಗಟ್ಟು ಹೊಟೇಲ್‍ಗಳನ್ನು ಮುಚ್ಚಿ ಮೃತರಿಗೆ ಗೌರವ ಸೂಚಿಸಲಾಯಿತು.

ಚೆಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಡಿ. ನರಸಿಂಹ, ಡಾ. ಯಶೋಧರ ಪೂಜಾರಿ, ಹಿರಿಯ ನಾಗರಿಕ ಎಂ.ಎ.ವಸಂತ, ಮಾಜಿ ಗ್ರಾ.ಪಂ.ಅಧ್ಯಕ್ಷ ಪಿ.ಎಫ್. ಸಬಾಸ್ಟೀನ್, ಇಸಾಕ್‍ಖಾನ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್. ಸುನೀಲ್, ಮಾಜಿ ಅಧ್ಯಕ್ಷ ವಹೀದ್ ಜಾನ್ ನಡೆದಾಡುವ ದೇವರು ಶಿವಕುಮಾರ್ ಸ್ವಾಮೀಜಿ ಅವರ ಗುಣಗಾನ ಮಾಡಿ ಶ್ರದ್ಧಾಂಜಲಿ ಆರ್ಪಿಸಿದರು.

ಜಾತಿ, ಮತ, ಭೇದವಿಲ್ಲದೆ ನೆರೆದಿದ್ದ ಜನತೆ ಮೃತ ಸ್ವಾಮೀಜಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಅಂತಿಮ ನಮನ ಸಲ್ಲಿಸಿದರು.

ಶನಿವಾರಸಂತೆ: ಸಿದ್ಧಗಂಗಾ ಶ್ರೀಗಳ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಪ್ರತಿಷ್ಠಾಪಿಸಿ, ನೂರಾರು ಭಕ್ತರು, ಹಿಂದೂ, ಮುಸ್ಲಿಂ ಬೇಧಬಾವವಿಲ್ಲದೆ ಅಭಿಮಾನಿಗಳು ಇಂದು ಗುಡುಗಳಲೆ ಜಂಕ್ಷನಿಂದ ಶನಿವಾರಸಂತೆ ಪಟ್ಟಣದ ಬೀದಿಯಲ್ಲಿ ಕೊಂಡೊಯ್ಯುವಾಗ ಪಟ್ಟಣದ ಅಂಗಡಿ ಮುಂಗಟ್ಟುಗಳನ್ನು 1 ಗಂಟೆಯ ಕಾಲ ಬಂದ್ ಮಾಡಿ ಸಂತಾಪ ಸೂಚಿಸಲಾಯಿತು.

ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಏರ್ಪಡಿಸಲಾದ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆಯನ್ನು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪ್ರತಾಪ್ ವಹಿಸಿದ್ದರು.

ತಾ.ಪಂ. ಸದಸ್ಯ ಬಿ.ಎಸ್. ಅನಂತಕುಮಾರ್ ಅವರು ಮಾತನಾಡುತ್ತಾ, ಸ್ವಾಮೀಜಿಗಳ ಸಂದೇಶಗಳು ಸಮಾಜಕ್ಕೆ ದಾರಿ ದೀಪವಾಗಿದೆ ಎಂದು ಹೇಳಿದರು.

ನಿವೃತ್ತ ಸೈನಿಕ ಕೆ.ವಿ. ಮಂಜುನಾಥ ವೀರ ಶೈವ ಸಮಾಜದ ಪ್ರಮುಖರಾದ ಎಸ್.ಕೆ. ವೀರಪ್ಪ, ಜಿ.ಎಂ. ಕಾಂತರಾಜ್, ಸ್ವಾಮೀಜಿಗಳ ಶಿಷ್ಯರಾದ ಗುಂಡೇಗೌಡ ಬಾಲಿಕ ಪ್ರೌಢ ಶಾಲೆ ಶಿಕ್ಷಕ ಕೆ.ಪಿ. ಜಯಕುಮಾರ್, ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಗೌಸ್ ಅವರುಗಳು ಸ್ವಾಮೀಜಿಗಳು ನಡದು ಬಂದ ದಾರಿಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷ ಸಿ.ಜೆ. ಗಿರೀಶ್, ಜಿ.ಪಂ. ಮಾಜಿ ಸದಸ್ಯ ಡಿ.ಬಿ. ಧರ್ಮಪ್ಪ, ತಾ.ಪಂ. ಮಾಜಿ ಸದಸ್ಯೆ ಸವಿತಾ, ಹಂಡ್ಲಿ ಗ್ರಾ.ಪಂ. ಅಧ್ಯಕ್ಷ ಸುದೀಪ್, ಹಿಂದೂ ರುದ್ರ ಭೂಮಿ ಕಾರ್ಯದರ್ಶಿ ದಿವಾಕರ, ನಂಜಪ್ಪ, ಸುಶೀಲಮ್ಮ ಉಪಸ್ಥಿತರಿದ್ದು, ನಿವೃತ್ತ ಸೈನಿಕ ಪ್ರೇಮಕುಮಾರ್ ಸ್ವಾಮೀಜಿಯ ಬಗ್ಗೆ ಕವನ ವಾಚಿಸಿದರು. ಗ್ರಾ.ಪಂ. ಮಾಜಿ ಅಧ್ಯಕ್ಷೆ ಭುವನೇಶ್ವರಿ ಪ್ರಾರ್ಥಿಸಿ, ನಿವೃತ್ತ ಪ್ರಾಂಶುಪಾಲ ಚ.ಮಾ. ಪುಟ್ಟಸ್ವಾಮಿ ಸ್ವಾಗತಿಸಿ, ನಿರೂಪಣೆ ಮಾಡಿದರು. ಡಿ.ಬಿ. ಸೋಮಪ್ಪ ವಂದಿಸಿದರು. ಕೊನೆಯಲ್ಲಿ ಶ್ರೀಯುತರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಸರಕಾರಕ್ಕೆ ಒತ್ತಾಯಿಸುವಂತೆ ಕೋರಲಾಯಿತು.

ಕಾಯಕಯೋಗಿಗೆ ಕಸಾಪದಿಂದ ಶ್ರದ್ಧಾಂಜಲಿ

ನಡೆದಾಡುವ ದೇವರು., ಕಾಯಕಯೋಗಿ ಡಾ. ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಶಿವೈಕ್ಯರಾದ ಹಿನ್ನೆಲೆಯಲ್ಲಿ ಶ್ರೀಗಳ ಆತ್ಮಕ್ಕೆ ಚಿರಶಾಂತಿ ಕೋರಿ ಕಸಾಪ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕಸಾಪ ಕಚೇರಿ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮೌನಾಚರಣೆ ಮೂಲಕ ಶಾಂತಿ ಕೋರಲಾಯಿತು. ಶಕ್ತಿ ಸಹಾಯಕ ಸಂಪಾದಕ ಬಿ.ಜಿ.ಅನಂತಶಯನ ಅವರು ಮಾತನಾಡಿ ಸಂತರ ಹುಟ್ಟು, ಬದುಕು ಆಧ್ಯಾತ್ಮಿಕತೆಯಿಂದ ಕೂಡಿರುತ್ತದೆ, ಆದ್ಯಾತ್ಮಕ್ಕೆ ಸಾವೆಂಬದಿಲ್ಲ. ನಾವುಗಳು ಕೂಡ ಅದ್ಯಾತ್ಮದ ಬಗ್ಗೆ ತಿಳಿದುಕೊಂಡು, ಬದುಕಲ್ಲಿ ಅಳವಡಿಸಿಕೊಳ್ಳಬೇಕೆಂದರು.

ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅವರು ಲಕ್ಷಾಂತರ ಮಂದಿಗೆ ವಿದೈ, ಜೀವನ ಕಲ್ಪಿಸಿಕೊಟ್ಟವರು ಶ್ರೀಗಳು, ಎರಡು ಯುಗದಲ್ಲಿ ಸಾಧನೆ ಮಾಡಿ ಇತಿಹಾಸ ಸೇರಿದವರು, ಅಂತವರು ಬದುಕಿದ್ದ ಯುಗದಲ್ಲಿ ನಾವುಗಳು ಇದ್ದೆವು ಎಂಬದು ಹೆಮ್ಮೆಯೆನಿಸುತ್ತಿದೆ ಎಂದರು. ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಶ್ರೀಗಳ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳಾದ ಕೆ.ಕೆ. ನಾಗರಾಜ ಶೆಟ್ಟಿ, ಕೆ .ಆರ್.ಶಾಲಿನಿ, ತಳೂರು ಉಷಾರಾಣಿ, ಬಿ.ಎಸ್. ರಫಿಕ್ ಅಹ್ಮದ್, ಕೆ.ರಮೇಶ್, ಕಚೇರಿ ಸಿಬ್ಬಂದಿ ಶ್ವೇತ, ಇನ್ನಿತರರಿದ್ದರು. ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್ ಸ್ವಾಗತಿಸಿದರೆ, ಮಡಿಕೇರಿ ತಾಲೂಕು ಕಾರ್ಯದರ್ಶಿ ಡಾ.ಕೂಡಕಂಡಿ ದಯಾನಂದ ವಂದಿಸಿದರು.

ನಗರ ಕಾಂಗ್ರೆಸ್‍ನಿಂದ ಶ್ರದ್ಧಾಂಜಲಿ

ಕಾಯಕ ಯೋಗಿ ಡಾ.ಶ್ರೀಶಿವಕುಮಾರ ಸ್ವಾಮೀಜಿ ಲಿಂಗೈಕರಾದ ಹಿನ್ನೆಲೆಯಲ್ಲಿ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಸದಸ್ಯ ಟಿ.ಪಿ.ರಮೇಶ್ ಮಾತನಾಡಿ, ಬಡ ವಿದ್ಯಾರ್ಥಿಗಳಿಗೆ ವಿದ್ಯಾ ದಾನ, ನಿತ್ಯ ಅನ್ನ ದಾಸೋಹ ಮಾಡಿದ ಸ್ವಾಮೀಜಿಗಳ ಆದರ್ಶವನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕೆಂದರು.

ನಗರಸಭಾ ಸದಸ್ಯ ಚುಮ್ಮಿದೇವಯ್ಯ ಮಾತನಾಡಿ ಶ್ರೀಶಿವಕುಮಾರ ಸ್ವಾಮಿಗಳ ಕಾರ್ಯದಕ್ಷತೆಯ ಬಗ್ಗೆ ಗುಣಗಾನ ಮಾಡಿದರು.

ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ನಗರಸಭಾ ಸದಸ್ಯೆ ಜುಲೇಕಾಬಿ, ಪ್ರಮುಖರಾದ ತೆನ್ನಿರ ಮೈನಾ, ಆರ್.ಪಿ. ಚಂದ್ರಶೇಖರ್, ಸದಾಮುದ್ದಪ್ಪ, ಫ್ಯಾನ್ಸಿ ಪಾರ್ವತಿ, ಜಪ್ರುಲ್ಲ, ಶಶಿ, ಮಿನಾeóï ಪ್ರವೀಣ್, ಪೂರ್ಣಿಮ, ಚಂದ್ರು, ಆನಂದ್, ಕಾವೇರಪ್ಪ, ಕಚೇರಿ ಸಹಾಯಕರಾದ ರಾಣಿ ಹಾಗೂ ಉಷಾ ಸೇರಿದಂತೆ ಕಾರ್ಯಕರ್ತರು ಹಾಜರಿದ್ದು ಶ್ರೀಶಿವಕುಮಾರ ಸ್ವಾಮಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಸಿದ್ದಾಪುರ: ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯವಾದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಯ ವತಿಯಿಂದ ಸಿದ್ದಾಪುರ ಗ್ರಾ.ಪಂ. ಸಭಾಂಗಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಈ ಸಂದÀರ್ಭ ಮಾಜಿ ಜಿ.ಪಂ. ಸದಸ್ಯ ಹಾಗೂ ವಕೀಲ ಎಂ.ಎಸ್. ವೆಂಕಟೇಶ್ ಶ್ರೀಗಳ ಸಮಾಜ ಸೇವೆಯ ಕುರಿತು ಸ್ಮರಿಸಿದರು. ಸಿದ್ದಾಪುರ ಗ್ರಾ.ಪಂ. ಸದಸ್ಯರುಗಳು ಹಾಗೂ ವಿವಿಧ ಸಂಘಟನೆಯ ಪ್ರಮುಖರು ಹಾಜರಿದ್ದರು.

ಕುಶಾಲನಗರ : ಶ್ರೀ ಸಿದ್ದಗಂಗಾ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಕುಶಾಲನಗರ ಎಸ್‍ಕೆಎಸ್‍ಎಸ್‍ಎಫ್ ವತಿಯಿಂದ ಕಾರ್ಯಕ್ರಮ ನಡೆಯಿತು. ಸಂಘಟನೆಯ ಕೊಡಗು ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಮಜೀದ್ ನೇತೃತ್ವದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪ್ರಮುಖರಾದ ಬಿ.ಎಚ್.ಅಹಮ್ಮದ್ ಹಾಜಿ, ಹುಸೇನ್, ಲತೀಫ್ ಮತ್ತಿತರರು ಇದ್ದರು.