ಸೋಮವಾರಪೇಟೆ, ಜ.22: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ವರ್ಷಾಚರಣೆಯ ಅಂಗವಾಗಿ ಬೇಳೂರು ಬಾಣೆ ಹಾಲಿನ ಡೈರಿ ಸಮೀಪ ಆಯೋಜಿಸಿದ್ದ ಉತ್ತಮ ರಾಸು ಪ್ರದರ್ಶನ ಸ್ಪರ್ಧೆಯಲ್ಲಿ ಗೀರ್ ತಳಿಯ ಹಸುವನ್ನು ಸಾಕಣೆ ಮಾಡಿದ ಕುಸುಬೂರಿನ ಕೃಷಿಕರಾದ ಕೆ.ಡಿ. ಕುಮಾರ್‍ರವರು ಪ್ರಥಮ ಸ್ಥಾನ ಪಡೆದರು.

ಮಿಶ್ರತಳಿಯ ಹಸುವನ್ನು ಸಾಕಿದ್ದ ಕುಸುಬೂರಿನ ಪ್ರವೀಣ್ ಲಿಂಗರಾಜ್ ದ್ವಿತೀಯ, ಕುಸುಬೂರಿನ ಸುರೇಶ್ ಅಚ್ಚುತ್ತ ತೃತೀಯ, ನಾಟಿ ಹಸುವನ್ನು ಸಾಕಿದ್ದ ಬಸವನಹಳ್ಳಿಯ ಮಂಜುನಾಥ್ ಮಲ್ಲಪ್ಪ ಚತುರ್ಥ ಹಾಗೂ ಎಮ್ಮೆಯನ್ನು ಸಾಕಿದ್ದ ಬೇಳೂರಿನ ಮಂಗಳಮ್ಮ ಬಸವರಾಜು ಐದನೇ ಸ್ಥಾನ ಪಡೆದರು. ಇವರುಗಳಿಗೆ ಸಂಘದ ವತಿಯಿಂದ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.

ಉಳಿದಂತೆ ಉತ್ತಮ ರಾಸುಗಳನ್ನು ಸಾಕಣೆ ಮಾಡಿದ್ದ ಕೆಂಚಮ್ಮನಬಾಣೆಯ ಅಪ್ಪು ಸುಬ್ಬಮ್ಮ, ಬೇಳೂರಿನ ದೇವಕಿ ಕರುಣಾಕರ್, ಕುಸುಬೂರಿನ ಗಣೇಶ್ ಈರಪ್ಪ, ಬಸವನಳ್ಳಿಯ ಜಗದೀಶ್ ಮಲ್ಲಪ್ಪ ಹಾಗೂ ಕೆಂಚಮ್ಮನಬಾಣೆಯ ಶೇಷಪ್ಪ ಶಿವಪ್ಪ ಇವರುಗಳಿಗೆ ಪಶು ಸಂಗೋಪನೆ ಇಲಾಖೆಯಿಂದ ತಲಾ ಒಂದು ಚೀಲ ಮೇವನ್ನು ನೀಡಲಾಯಿತು. ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ಎಲ್ಲಾ ರಾಸುಗಳಿಗೆ ತಲಾ 5 ಕೆ.ಜಿ. ಮೇವನ್ನು ನೀಡಲಾಯಿತು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಡಿ. ಮಂಜುನಾಥ್‍ರವರ ಅಧ್ಯಕ್ಷತೆಯಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದ ವೇದಿಕೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಪೂರ್ಣಿಮಾ ಗೋಪಾಲ್, ಪಶುಸಂಗೋಪನಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ. ತಮ್ಮಯ್ಯ, ಡಾ. ನಾಗರಾಜ್, ಸಂಘದ ಉಪಾಧ್ಯಕ್ಷ ಕೆ.ಜಿ. ಸುರೇಶ್ ಹಾಗೂ ನಿರ್ದೇಶಕರುಗಳು, ಮಾಜಿ ಅಧ್ಯಕ್ಷರು ಹಾಗೂ ಮಾಜಿ ನಿರ್ದೇಶಕರುಗಳು, ಸಂಘದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಹಾಗೂ ಸಿಬ್ಬಂದಿ ಹರೀಶ್ ಉಪಸ್ಥಿತರಿದ್ದರು.