ಗೋಣಿಕೊಪ್ಪಲು, ಜ. 21: ಕ್ಷುಲ್ಲಕ ಕಾರಣಕ್ಕಾಗಿ ತನ್ನ ಅಂಗಡಿಯ ಮುಂಭಾಗದಲ್ಲಿ ಬ್ಯಾಟರಿ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದವನ ಮೇಲೆ ಕತ್ತಿಯಿಂದ ಕಡಿದು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಕಡಿತದಿಂದ ತೀವ್ರ ಗಾಯಗೊಂಡ ವ್ಯಕ್ತಿ ರಿಷನ್ ಸೈಮನ್ ಎಂದು ತಿಳಿದು ಬಂದಿದೆ.

ಗೋಣಿಕೊಪ್ಪಲು ವಿನಲ್ಲಿ ಅನೇಕ ವರ್ಷಗಳಿಂದ ಬ್ಯಾಟರಿ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ಸೈಮನ್ ತಲೆ, ಬುಜದ ಭಾಗಕ್ಕೆ ಸಮೀಪದ ಹಣ್ಣಿನ ಅಂಗಡಿ ನಡೆಸುತ್ತಿದ್ದ ಪ್ರಭು ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಸಂಜೆ 6.30ರ ಸುಮಾರಿಗೆ ಸೈಮನ್ ಸಮೀಪದ ಅಂಗಡಿ ತೆರಳಿ ವಾಪಸು ಬರುತ್ತಿದ್ದ ಸಂದರ್ಭದಲ್ಲಿ ಆರೋಪಿ ಪ್ರಭು ಏಕಾ ಎಕಿ ಸೈಮನ್ ತಲೆಯ ಭಾಗಕ್ಕೆ ಕಡಿದಿದ್ದಾನೆ ಎಂದು ಪ್ರತ್ಯೇಕ ದರ್ಶಿಗಳು ಮಾಹಿತಿ ನೀಡಿದ್ದಾರೆ.

ರಕ್ತದ ಮಡಿಲಿನಲ್ಲಿದ್ದ ಸೈಮನ್‍ನನ್ನು ಸ್ನೇಹಿತರು ಗೋಣಿಕೊಪ್ಪಲು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆ ನಂತರದಲ್ಲಿ ಹೆಚ್ಚಿನ ಚಿಕಿತ್ಸೆ ಗಾಗಿ ಮೈಸೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.

ಸುದ್ದಿ ತಿಳಿದ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಆಸ್ಪತ್ರೆಗೆ ತೆರಳಿ ಘಟನೆ ಬಗ್ಗೆ ಮಾಹಿತಿ ಪಡೆದರು. ಆಸ್ಪತ್ರೆಯ ಲ್ಲಿದ್ದ ಸ್ನೇಹಿತರು ಚಿಕಿತ್ಸಾ ವೆಚ್ಚವನ್ನು ಭರಿಸಲು ಸಹಾಯ ಹಸ್ತ ನೀಡಿದರು.

ಆರೋಪಿ ಪ್ರಭು ಎಂಬಾತನನ್ನು ವಶಕ್ಕೆ ಪಡೆದಿರುವ ಗೋಣಿಕೊಪ್ಪಲು ಪೋಲಿಸರು ಕೃತ್ಯಕ್ಕೆ ಬಳಸಿದ ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ. ನಗರದ ಜನ ನಿಭಿಡ ಪ್ರದೇಶದಲ್ಲಿ ನಡೆದ ಘಟನೆಯಿಂದ ನಾಗರಿಕರು ಭಯಭೀತಗೊಂಡಿದ್ದಾರೆ.

ನೂರಾರು ಸಂಖ್ಯೆಯಲ್ಲಿ ಜನರು ಆಸ್ಪತ್ರೆಯಲ್ಲಿ ಜಮಾಯಿಸಿದ್ದರು. ಠಾಣಾದಿಕಾರಿ ಶ್ರೀಧರ್, ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.

-ಹೆಚ್.ಕೆ. ಜಗದೀಶ್