ಮಡಿಕೇರಿ, ಜ. 21: ಮದ್ರೀರ ಸಂಜು ಬೆಳ್ಯಪ್ಪ ಎಂಬ ಸಾಕಷ್ಟು ಪ್ರತಿಭೆಗಳನ್ನು ಹೊಂದಿದ್ದ... ಅದರಲ್ಲೂ ಕೊಡವ ಸಾಹಿತ್ಯ-ಸಾಂಸ್ಕøತಿಕ ಲೋಕದಲ್ಲಿ ಎಲೆಮರೆಯ ಕಾಯಿಯಂತೆ ಉಳಿದಿದ್ದರೂ ತನ್ನದೇ ಆದ ಛಾಪು ಮೂಡಿಸಿದ್ದ ಮದ್ರೀರ ಸಂಜು ಕುಶಾಲಪ್ಪ ನಿಧನರಾಗಿದ್ದಾರೆ.
ತಾ. 21ರ ಬೆಳಗ್ಗಿನ ಜಾವ ದಿಢೀರನೆ ಅಸ್ವಸ್ಥತೆಗೊಂಡು 47ನೇ ವರ್ಷದಲ್ಲೇ ಇಹಲೋಕ ತ್ಯಜಿಸಿದ್ದಾರೆ. ಇವರು ಕುಂದ ಗ್ರಾಮದ ಈಚೂರು ನಿವಾಸಿ ದಿ. ಮದ್ರೀರ ರಾಜು ಕುಶಾಲಪ್ಪ ಅವರ ಪುತ್ರ. ತಮ್ಮ ನಿವಾಸದಲ್ಲಿ ಅಸ್ವಸ್ಥಗೊಂಡಿದ್ದ ಇವರನ್ನು ಗೋಣಿಕೊಪ್ಪಲುವಿನ ಲೋಪಾಮುದ್ರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ.
ಕೊಡವ ಸಾಹಿತ್ಯ, ಸಂಗೀತ, ನಾಟಕ ಕ್ಷೇತ್ರದಲ್ಲಿ ಸಂಜು ಗುರುತಿಸಿಕೊಂಡವರು. ಎಲ್ಲಾ ರೀತಿಯ ಸಂಗೀತ ಪರಿಕರಗಳನ್ನು ನುಡಿಸುವ ಪಾರಿಣ್ಯತೆ ಹೊಂದಿದ್ದ ಇವರು ಸಂಗೀತ ನುಡಿಸುತ್ತಾ ಒಟ್ಟಿಗೇ ಹಾಡನ್ನೂ ಹಾಡುತ್ತಿದ್ದ ಅಪರೂಪದ ಕಲಾವಿದರು. ನಾಟಕಕಾರನಾಗಿ, ನಿರ್ದೇಶಕನಾಗಿ, ನಾಟಕ ರಚನೆಗಾರರಾಗಿ ಕೊಡವ ಸಿನಿಮಾಗಳಲ್ಲೂ ನಟಿಸಿರುವ ಸಂಜು ಅವಿವಾಹಿತರಾಗಿದ್ದರು.
ದಕ್ಷಿಣ ಕೊಡಗಿನ ಹಲವು ಶಾಲಾ-ಕಾಲೇಜುಗಳಲ್ಲಿ ಮಕ್ಕಳನ್ನು ಈ ಕ್ಷೇತ್ರದಲ್ಲಿ ತರಬೇತಿಗೊಳಿಸಿರುವ ಇವರು ಬಹಳಷ್ಟು ವಿದ್ಯಾರ್ಥಿಗಳಿಗೆ ಚಿರಪರಿಚಿತರು. ಕೇವಲ ಕೊಡವ ಭಾಷೆಯಲ್ಲಿ ಮಾತ್ರವಲ್ಲದೆ ಕನ್ನಡದಲ್ಲೂ ಪ್ರತಿಭೆ ಹೊಂದಿದ್ದ, ಸೃಷ್ಟಿ ಕೊಡಗು ರಂಗದ ಮೂಲಕ ತನ್ನ ಪಯಣ ಆರಂಭಿಸಿದ್ದ ಸಂಜು, ಖ್ಯಾತ ಸಂಗೀತಗಾರ ಚೆಕ್ಕೇರ ತ್ಯಾಗರಾಜ್, ರಂಗಭೂಮಿ ಕಲಾವಿದ ಅಡ್ಡಂಡ ಕಾರ್ಯಪ್ಪ ಅವರೊಂದಿಗೆ ಬೆಳೆದು ಬಂದವರಾಗಿದ್ದರು. ನೀನಾಸಂ ಮೂಲಕ ತರಬೇತಿ ಪಡೆದಿದ್ದ ಇವರು ನಟಿಸಿದ ಚೀತೆ, ದಂಗೆಕ್‍ಂಜ ಮಿಂಞ, ಮಲ್ಲಮ್ಮನ ಮನೆ ಹೊಟೇಲ್, ಬಿದ್ದು ಟೈಲರ್, ಕುರ್ಕಂಗ ನಾಟಕಗಳು ಜನಮನ್ನಣೆಗಳಿಸಿತ್ತು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಕಳೆದ ಅವಧಿಯಲ್ಲಿ ಸದಸ್ಯರಾಗಿದ್ದ ಇವರು ಈ ಹಿಂದೆ ಸಾಕಷ್ಟು ಕೊಡವ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ನಿರೀಕ್ಷೆ... ಬಾಳ್‍ಪೊಲ್‍ಂದತ್ ಕೊಡವ ಸಿನಿಮಾಗಳಲ್ಲೂ ನಟಿಸಿರುವ ಇವರು ‘ಊಯ್ ತೊಂಬಕೆ’ ಎಂಬ ಹಾಸ್ಯಭರಿತ ಡೈಲಾಗ್ ಆ ಸಂದರ್ಭ ಎಲ್ಲರ ಬಾಯಲ್ಲಿತ್ತು.
ಹರದಾಸ ಅಪ್ಪಚ್ಚಕವಿ, ಐ.ಮಾ. ಮುತ್ತಣ್ಣ ಅವರ ಸಾಹಿತ್ಯಕ್ಕೆ ರಾಗ ಸಂಯೋಜನೆ ಮಾಡಿ ಸಾಕಷ್ಟು ಹಾಡುಗಳನ್ನು ಇವರು ಹಾಡಿದ್ದಾರೆ. ‘ಕೊಂಡ್‍ಬಾರಿ ಪುದಿಯಕ್ಕಿ ಕೂಳುಂಬಕ್..., ನಿಪ್ಪ್‍ಫಪಳ ಬೊಳ್ಳವ್ವ, ಮರೆನಾಡ್ ಮಾಂವಿರ ಮನೆತೇಡಿಪೋನ ನಾ...’ ಎಂಬ ಇವರ ಕಂಠದಲ್ಲಿ ಬಂದಿರುವ ಹಾಡುಗಳು. ಸಾಕಷ್ಟು ಜನಪ್ರಿಯವಾಗಿವೆ...
ಇತ್ತೀಚೆಗೆ ಇವರು ಹಾಡಿರುವ ಮಣಿಮಾಲೆ ಎಂಬ ಸಿಡಿಯೂ ಬಿಡುಗಡೆಯಾಗಿತ್ತು. ಅಲ್ಲದೆ ಅಪ್ಪಚ್ಚಕವಿ ಅವರ 150ನೇ ಜನ್ಮದಿನೋತ್ಸವದ ಅಂಗವಾಗಿ ವಿವಿಧೆಡೆಗಳಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡು ಹಾಡಿನೊಂದಿಗೆ ಸಂಗೀತದ ಮೂಲಕ ಗಮನ ಸೆಳೆಯುತ್ತಿದ್ದ ಇವರ ಅಕಾಲಿಕ ನಿಧನ ಕೊಡವ ಸಾಹಿತ್ಯ, ಸಾಂಸ್ಕøತಿಕ ಕ್ಷೇತ್ರಕ್ಕೆ ಭಾರೀ ನಷ್ಟವಾಗಿದೆ.
ಸೌಮ್ಯ ಸ್ವಭಾವದ ಸಂಜು ಭಾವಜೀವಿಯೂ ಆಗಿದ್ದು, ಆತ್ಮೀಯರೊಂದಿಗೆ ಹೆಚ್ಚು ಆತ್ಮೀಯತೆಯಿಂದ ಬೆರೆಯುತ್ತಿದ್ದರು. ಈ ಸಂದರ್ಭದಲ್ಲೆಲ್ಲ ಬಹುತೇಕ ಸಾಹಿತ್ಯ, ಸಂಗೀತ, ಹಾಡಿನ ವಿಚಾರದ ಕುರಿತೇ ಅವರು ಮಾತನಾಡುತ್ತಿದ್ದರು.
ಅಂತ್ಯಕ್ರಿಯೆ ಇಂದು ಅಪರಾಹ್ನ ಸ್ವಗ್ರಾಮದಲ್ಲಿ ನಡೆಯಿತು. ಕೊಡವ ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಸೇರಿದಂತೆ ಅವರ ಸ್ನೇಹಿತರ ಬಳಗ ಪಾಲ್ಗೊಂಡಿತ್ತು.