ಸೋಮವಾರಪೇಟೆ, ಜ. 21: ಅಖಿಲ ಭಾರತ ವೀರಶೈವ ಮಹಾ ಸಭಾದ ಸೋಮವಾರಪೇಟೆ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು, ತಾ. 23ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಚುನಾವಣಾಧಿಕಾರಿ ಎಸ್.ಬಿ. ನಂಜಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಮಹಾಸಭಾದ ಸೋಮವಾರಪೇಟೆ ತಾಲೂಕು ಘಟಕಕ್ಕೆ 21 ಮಂದಿಯ ಆಯ್ಕೆ ನಡೆಯಬೇಕಿದ್ದು, ಅಧ್ಯಕ್ಷ ಸ್ಥಾನಕ್ಕೆ ನೇರವಾಗಿ ಚುನಾವಣೆ ನಡೆಯಲಿದೆ. ಉಳಿದ 13 ಸ್ಥಾನ ಪುರುಷ, 7 ಸ್ಥಾನ ಮಹಿಳೆಯರಿಗೆ ಮೀಸಲಿದ್ದು, ಅಗತ್ಯಬಿದ್ದಲ್ಲಿ ಫೆ.10ರಂದು ಮತದಾನ ನಡೆಯಲಿದೆ ಎಂದರು.

ತಾ. 23ರಿಂದ 29ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ತಾ. 30ರಂದು ಪರಿಶೀಲನೆ ನಡೆಯಲಿದೆ. ಫೆ. 2 ರಂದು ನಾಮಪತ್ರ ವಾಪಸ್ ಪಡೆಯುವದು, ಅಗತ್ಯ ಬಿದ್ದಲ್ಲಿ ಫೆ.10ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅಂದೇ ಮತ ಎಣಿಕೆಯೂ ಆಗಲಿದೆ ಎಂದು ಮಾಹಿತಿ ಒದಗಿಸಿದರು.

ಗುಡುಗಳಲೆ ಜಯದೇವ ಜಾನುವಾರು ಜಾತ್ರಾ ಮೈದಾನದ ಬಸವೇಶ್ವರ ದೇವಾಲಯ ಆವರಣದಲ್ಲಿ ಚುನಾವಣಾ ಪ್ರಕ್ರಿಯೆಗಳು ನಡೆಯಲಿವೆ. ಗುಡುಗಳಲೆಯಲ್ಲಿರುವ ರಿಯಾ ಜೆರಾಕ್ಸ್ ಸೆಂಟರ್‍ನಲ್ಲಿ ನಾಮಪತ್ರಗಳು ಲಭ್ಯವಿದ್ದು, ಭರ್ತಿ ಮಾಡಿದ ನಾಮಪತ್ರಗಳನ್ನು ಅಲ್ಲಿಯೇ ಸಲ್ಲಿಸಬೇಕಿದೆ. ಹೆಚ್ಚಿನ ಮಾಹಿತಿಗೆ ಮೊ: 9449933289 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ವೀರಶೈವ ಮಹಾ ಸಭಾದ ಮಾಜೀ ಪ್ರಧಾನ ಕಾರ್ಯದರ್ಶಿ ಜಿ.ಎಂ. ಕಾಂತರಾಜು ಅವರುಗಳು ಉಪಸ್ಥಿತರಿದ್ದರು.