*ಗೋಣಿಕೊಪ್ಪಲು, ಜ. 21 : ಅಮ್ಮತ್ತಿ ಮಿಲನ್ ಬಾಯ್ಸ್ ಯೂತ್ ಕ್ಲಬ್ ವತಿಯಿಂದ ಎರಡು ದಿನಗಳು ಅಮ್ಮತ್ತಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಹತ್ತನೇ ವರ್ಷದ ರಾಜ್ಯ ಮಟ್ಟದ ಮಿಲನ್ ಬಾಯ್ಸ್ ಟ್ರೋಫಿಯನ್ನು ಮರಗೋಡು ವೈಷ್ಣವಿ ಎಫ್.ಸಿ ತಂಡ ತನ್ನ ಮುಡಿಗೇರಿಸಿಕೊಂಡಿದೆ.

ಪಾಲಿಬೆಟ್ಟ ನೆಹರು ಎಫ್.ಸಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿದೆ. ವೈಷ್ಣವಿ ಎಫ್. ಸಿ ತಂಡ ಹಾಗೂ ನೆಹರು ಎಫ್.ಸಿ. ತಂಡದ ನಡುವೆ ಸೆಣಸಾಟದಲ್ಲಿ ಪಂದ್ಯಾವಳಿಯ ಕೊನೆಯ ಮೂರು ನಿಮಿಷ ಇರುವ ಸಂದರ್ಭ ವೈಷ್ಣವಿ ತಂಡದ ಹರೀಶ್ ನೆಹರು ತಂಡದ ವಿರುದ್ದ ಒಂದು ಗೋಲು ದಾಖಲಿಸುವ ಮೂಲಕ ಜಯದ ಮೆಟ್ಟಿಲೇರಿದರು.

ಸರಣಿಯ ಅತ್ಯುತ್ತಮ ಆಟಗಾರನಾಗಿ ನೆಹರು ತಂಡದ ಸುರೇಶ್, ಉತ್ತಮ ರಕ್ಷಣಾ ಆಟಗಾರನಾಗಿ ವೈಷ್ಣವಿ ತಂಡದ ಖಾಲೀದ್, ಉತ್ತಮ ಗೋಲ್ ಕೀಪರಾಗಿ ನೆಹರು ತಂಡದ ಮಣಿ ಬಾಜನರಾದರೆ ಹೆಚ್ಚಿನ ಗೋಲ್ ದಾಖಲಿಸಿದ ಆಟಗಾರನಾಗಿ ಕುಂದ ಬಿ.ಎಸ್.ಎ ತಂಡದ ಪರವಾಗಿ ಆಡಿದ ಆಟಗಾರ ಸ್ಕೈ ಪಡೆದುಕೊಂಡರು. ಶಿಸ್ತಿನ ತಂಡ ಕುಂದ ಬಿ.ಎಸ್.ಎ ತನ್ನದಾಗಿಸಿಕೊಂಡಿತು.

ವಿಜೇತ ತಂಡಕ್ಕೆ ಟ್ರೋಫಿಯೊಂದಿಗೆ 33,333 ನಗದು ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಟ್ರೋಫಿಯೊಂದಿಗೆ 22,222 ನಗದು ಬಹುಮಾನ ನೀಡಲಾಯಿತು.

ಸಭಾ ಕಾರ್ಯಕ್ರಮ : ಕ್ರೀಡೆ ಚಟುವಟಿಕೆಯಿಂದ ದೇಹ ಹಾಗೂ ಮಾನಸಿಕ ಬೆಳವಣಿಗೆ ಹೊಂದುತ್ತದೆ ಎಂದು ತಾ.ಪಂ ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ತಿಳಿಸಿದರು.

ಮಿಲನ್ ಫುಟ್‍ಬಾಲ್ ಕಪ್ ಪ್ರಶಸ್ತಿ ವಿತರಣ ಸಮಾರಂಭದ ಮುಖ್ಯ ಅಥಿತಿಯಾಗಿ ಮಾತನಾಡಿದ ಅವರು ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವದು ಉತ್ತಮ. ಸಂಘ ಸಂಸ್ಥೆಗಳಿಂದ ಕ್ರೀಡಾ ಚಟುವಟಿಕೆಗಳು ನಡೆದಾಗ ಗ್ರಾಮಿಣ ಭಾಗದ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯವಿದೆ ಎಂದರು.

ಅಮ್ಮತ್ತಿ ಗ್ರಾಮವು ಕ್ರೀಡೆಯ ತವರಾಗಿದೆ. ಇಲ್ಲಿನ ಯುವಕರ ತಂಡ ಕ್ರೀಡೆಯಲ್ಲಿ ಆಸಕ್ತಿ ವಹಿಸಿ ಕಳೆದ ಹತ್ತು ವರ್ಷಗಳಿಂದ ಫುಟ್‍ಬಾಲ್ ಕ್ರೀಡಾಕೂಟವನ್ನು ಆಯೋಜಿಸುತ್ತ ಬರುತ್ತಿರುವದರಿಂದ ಸ್ಥಳೀಯ ಪ್ರತಿಭೆಗಳಿಗೆ ಅವಕಾಶಗಳು ಸಿಗುತ್ತಿದೆ. ಮಿಲನ್ಸ್ ಬಾಯ್ಸ್ ಸದಸ್ಯರ ತಂಡ ಶಿಸ್ತು ಮತ್ತು ವ್ಯವಸ್ಥಿತವಾಗಿ ಆಯೋಜಿಸುತ್ತಿರುವ ಕ್ರೀಡಾ ಕೂಟ ಜಿಲ್ಲೆಗೆ ಮಾದರಿಯಾಗಿದೆ. ಇಂತಹ ಆಸಕ್ತ ತಂಡಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಸ್ಥಳೀಯ ಧಾನಿಗಳಿಂದ ನಡೆಯಬೇಕಾಗಿದೆ ಎಂದು ಹೇಳಿದರು.ಎರಡು ದಿನಗಳು ನಡೆದ ರಾಜ್ಯ ಮಟ್ಟದ ಕಾಲ್ಚೆಂಡು ಪಂದ್ಯಾಟದಲ್ಲಿ ಸುಮಾರು 14 ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿದ್ದು ಫುಟ್ಬಾಲ್ ಕ್ರೀಡಾ ಪ್ರೇಮಿಗಳ ಮನತಣಿಸಲಿದೆ ಎಂದು ಹೇಳಿದರು.

ಕ್ರೀಡಾ ಉತ್ಸವದ ಸಂಚಾಲಕ ಲಿಜೇಶ್ ಮಾತನಾಡಿ ಹತ್ತು ವರ್ಷಗಳು ಮಿಲನ್ಸ್ ಕ್ಲಬ್ ವತಿಯಿಂದ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪಂದ್ಯಾವಳಿಯನ್ನು ನಡೆಸಿದ್ದಾರೆ. 2020 ನೇ ಸಾಲಿನಲ್ಲಿ 11 ವರ್ಷದ ಪಂದ್ಯಾವಳಿ ರಾಷ್ಟ್ರ ಮಟ್ಟದಲ್ಲಿ ನಡೆಸಲಾಗುವದು ಎಂದು ತಿಳಿಸಿದರು.

ಕೆ.ಎಸ್.ಎಫ್.ಎ ಸದಸ್ಯ ಪಿ.ಕೆ. ಜಗದೀಶ್ ಅಮ್ಮತ್ತಿ ಕಾಂಗ್ರೇಸ್ ವಲಯ ಅಧ್ಯಕ್ಷ ಕುಟ್ಟಂಡ ಕೃಷ್ಣ ಬಿಜೆಪಿ ರಾಜ್ಯ ಯುವ ಮೋರ್ಚ ಖಜಾಂಚಿ ಮಂಡೇಪಂಡ ಶಶಾಂಕ್ ಭೀಮಯ್ಯ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಬಿ. ಹರ್ಷವರ್ದನ, ಅಮ್ಮತ್ತಿ ಲಯನ್ಸ್ ಕ್ಲಬ್ ಅಧ್ಯಕ್ಷ ಸೋಮಯಂಡ ಎಸ್ ಪೂಣಚ್ಚ, ಉದ್ಯಮಿಗಳಾದ ಆಂಟೋನಿ ಕೆ, ಆಂಟೋನಿ ಜೋಸೆಫ್, ಪಿ.ಎ ಸಲೀಮ್, ಶೇಖರ್.ಎ, ರವಿಕಿರಣ್,ಪ್ರಥ್ವಿ, ವಲ್ಲೇರಿಯನ್, ಸಾಜಿ, ಜೆಡಿಎಸ್ ಪಕ್ಷದ ವೀರಾಜಪೇಟೆ ಪಟ್ಟಣ ಅಧ್ಯಕ್ಷ ಪಿ.ಎ. ಮಂಜುನಾಥ್,

ಮಿಲನ್ ಬಾಯ್ಸ್ ಯೂತ್ ಕ್ಲಬ್ ಅಧ್ಯಕ್ಷ ವಿ.ಎಸ್. ಚಂದ್ರ, ಉಪಾಧ್ಯಕ್ಷ ಹೆಚ್.ಡಿ.ಕುಮಾರ್, ಕಾರ್ಯದರ್ಶಿ ನಾಸೀರ್, ಖಜಾಂಚಿ ಕೆ.ಎಸ್. ಸುಜೀತ್, ಪಂದ್ಯಾಟದ ಸಮಿತಿ ಸದಸ್ಯರುಗಳಾದ ಸಬಾಸ್ಟೀನ್, ಎಂ.ಎಂ. ವಿನು, ಸಿರಾಜ್ ಹಾಜರಿದ್ದರು.

ಈ ಸಂದರ್ಭ ಉದ್ಯಮಿ ಅರ್ಪಿತ್ ಲೋಬೊ ಮತ್ತು ಮಿಲನ್ಸ್ ಬಾಯ್ಸ್ ಫುಟ್ಬಾಲ್ ಕಪ್ ಪಂದ್ಯಾಟದ ಸಂಚಾಲಕ ಲಿಜೇಸ್ ಅವರುಗಳನ್ನು ಸನ್ಮಾನಿಸಲಾಯಿತು.

-ಚಿತ್ರವರದಿ ಎನ್.ಎನ್. ದಿನೇಶ್