ಕುಶಾಲನಗರ, ಜ. 20: ಜಿಲ್ಲಾಡಳಿತ ಹಾಗೂ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ವಿನಿಮಯ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಫೆ. 2 ರಂದು ಕುಶಾಲ ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಜಿಲ್ಲಾಮಟ್ಟದ ಉದ್ಯೋಗ ಮೇಳ ನಡೆಸಲು ನಿರ್ಧರಿಸಲಾಗಿದೆ. ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಸಭಾಂಗಣದಲ್ಲಿ ಪ್ರಭಾರ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಅಧ್ಯಕ್ಷತೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿ ಗಳೊಂದಿಗೆ ಉದ್ಯೋಗ ಮೇಳದ ಕುರಿತು ಪೂರ್ವಭಾವಿ ಚರ್ಚೆ ನಡೆಸಲಾಯಿತು.
ಉದ್ಯೋಗ ಮೇಳ ನಡೆಯುವ ಸ್ಥಳದ ಸಿದ್ದತೆ, ವೇದಿಕೆ ಕಾರ್ಯಕ್ರಮ, ಸಂದರ್ಶನ ಕೊಠಡಿಗಳು, ಆಹಾರ ಮಳಿಗೆ, ನಿಯೋಜಕರನ್ನು ಆಹ್ವಾನಿ ಸುವದು, ಉದ್ಯೋಗಾಕಾಂಕ್ಷಿಗಳ ಆನ್ಲೈನ್, ಆಫ್ಲೈನ್ ನೋಂದಣಿ, ಸ್ಥಳದ ಸ್ವಚ್ಛತೆ, ಕಾನೂನು ಸುವ್ಯವಸ್ಥೆ, ಕಾರ್ಯಕ್ರಮದ ಬಗ್ಗೆ, ಪ್ರಚಾರ ಸೇರಿದಂತೆ ಉಪಸಮಿತಿಗಳ ರಚನೆ ಕುರಿತಾದ ಚರ್ಚೆಗಳು ನಡೆದವು.
ಒಂದು ದಿನದ ಮೇಳದಲ್ಲಿ ಹೊಟೇಲ್, ರೆಸಾರ್ಟ್, ಬ್ಯಾಂಕಿಂಗ್ ವಲಯ, ಕಾರ್ಖಾನೆ ಸೇರಿದಂತೆ 30 ಕ್ಕೂ ಅಧಿಕ ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು ಜಿಲ್ಲೆ ಸೇರಿದಂತೆ ನೆರೆ ಜಿಲ್ಲೆಗಳ ಅಂದಾಜು 1500 ಮಂದಿ ಉದ್ಯೋಗ ಆಕಾಂಕ್ಷಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಈ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ವ್ಯವಸ್ಥೆಗಳು, ಒದಗಿಸಬಹುದಾದ ಸೌಲಭ್ಯಗಳ ಬಗ್ಗೆ ಆಯಾ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಿತು. ಹೆಚ್ಚಿನ ಸಂಖ್ಯೆ ಯಲ್ಲಿ ಆಕಾಂಕ್ಷಿಗಳು ಆಗಮಿಸಿದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಮೇಳದ ಸಂದರ್ಭ ಹೆಚ್ಚಿನ ಉದ್ದಿಮೆದಾರರು ಪಾಲ್ಗೊಳ್ಳಲು ಆಸಕ್ತಿ ವಹಿಸುತ್ತಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಮಟ್ಟದಲ್ಲಿ ಉದ್ಯೋಗ ಆಕಾಂಕ್ಷಿ ಗಳನ್ನು ಬರಸೆಳೆಯಲು ವ್ಯಾಪಕ ಮಟ್ಟದ ಪ್ರಚಾರ ಕೈಗೊಳ್ಳಲು ತೀರ್ಮಾನಿಸಲಾಯಿತು. ಜಿಲ್ಲೆ ಸೇರಿದಂತೆ ನೆರೆ ಜಿಲ್ಲೆಗಳ ಕಾಲೇಜು ಗಳಿಗೆ ಪತ್ರ ವ್ಯವಹಾರ ನಡೆಸಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಗೆ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಯಿತು.
ಕಾಲೇಜು ಸಭಾಂಗಣದಲ್ಲಿ ಈ ಹಿಂದೆ ನಡೆದಿದ್ದ ಉದ್ಯೋಗ ಮೇಳದ ಬಗ್ಗೆ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ನೆರೆದಿದ್ದವರ ಸಲಹೆ ಸೂಚನೆಗಳನ್ನು ಕೋರಿದರು. ನಂತರ ಮೇಳ ನಡೆಯುವ ಪ್ರದೇಶವನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಜಗನ್ನಾಥ್, ಜಿಪಂ ಉಪ ಕಾರ್ಯದರ್ಶಿ ಭೀಮಸೇನ, ಡಿವೈಎಸ್ಪಿ ಮುರಳೀಧರ್, ಕಾಲೇಜು ಪ್ರಾಂಶುಪಾಲ ಕೆಂಪೇಗೌಡ ವೇದಿಕೆಯಲ್ಲಿದ್ದರು.
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಕಾಲೇಜುಗಳ ಪ್ರಾಂಶುಪಾಲರು, ಪ್ರತಿನಿಧಿಗಳು, ಸ್ಥಳೀಯ ಆಡಳಿತ ಅಧಿಕಾರಿಗಳು ಇದ್ದರು.