ಮೂರ್ನಾಡು, ಜ. 20: ದೇಶದ ಬಗ್ಗೆ ಪ್ರತಿಯೊಬ್ಬರಿಗೂ ಪ್ರೀತಿ, ದೇಶಾಭಿಮಾನವಿರಬೇಕು ಎಂದು ವಿಧಾನ ಪರಿಷತ್ನ ಶಾಸಕ ಮಂಡೇಪಂಡ ಸುನಿಲ್ ಸುಬ್ರಮಣಿ ಹೇಳಿದರು.
ಮೂರ್ನಾಡು ವಿದ್ಯಾಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ನೂತನ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು ಯಾವದೆ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ದೇಶದ ಕೀರ್ತಿಯನ್ನು ಪಸರಿಸುವಂತವರಾಗಬೇಕು. ಎಲ್ಲಾ ವಿದ್ಯಾಸಂಸ್ಥೆಗಳಲ್ಲಿ ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಅದರ ಸದುಪಯೋಗ ಪಡೆದು ಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಪ್ರತಿಯೊಂದು ಕಾರ್ಯಗಳಲ್ಲಿ ನಂಬಿಕೆಯಿಟ್ಟು ಶ್ರಮವಹಿಸಿದರೆ, ಅಲ್ಲಿ ಉತ್ತಮ ಪ್ರತಿಫಲವನ್ನು ಕಂಡುಕೊಳ್ಳಬಹುದು ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಮಾದಪ್ಪ ವಹಿಸಿ ಮಾತನಾಡಿದ ಅವರು ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಆಡಳಿತ ಮಂಡಳಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ದಾನಿಗಳ ಸಹಾಯದಿಂದ ಸುಸಜ್ಜಿತ ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ಗಳನ್ನು ಪ್ರಾರಂಭಿಸಲಾಗಿದ್ದು, ಹಿರಿಯ ಮತ್ತು ಪ್ರೌಢಶಾಲೆಗೆ ಸಿಬಿಎಸ್ಸಿ ಪಠ್ಯಕ್ರಮವನ್ನು ಅಳವಡಿಸಲು ಪ್ರಯತ್ನಗಳು ನಡೆಯುತ್ತಿದೆ ಎಂದು ಹೇಳಿದರು. ವೇದಿಕೆಯಲ್ಲಿ ಗ್ರಂಥಾಲಯ ದಾನಿಗಳಾದ ಬಡುವಂಡ ಪೂಣಚ್ಚ, ಪೆಮ್ಮುಡಿಯಂಡ ಮಂದಣ್ಣ, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚೌರೀರ ಪೆಮ್ಮಯ್ಯ, ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ, ಖಜಾಂಚಿ ಬಡುವಂಡ ಸುಬ್ರಮಣಿ, ನಿರ್ದೇಶಕರಾದ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ನಂದೇಟಿರ ರಾಜಾ ಮಾದಪ್ಪ, ಈರಮಂಡ ಸೋಮಣ್ಣ, ತೇಲಪಂಡ ಶೈಲಾ, ಪಳಂಗಂಡ ಪೂವಯ್ಯ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಟ್ಟಡ ಪೂವಣ್ಣ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕಿ, ಪ್ರೌಢಶಾಲೆ ಮುಖ್ಯಶಿಕ್ಷಕಿ ಎ.ಎಸ್. ರಶ್ಮಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಸ್.ಡಿ. ಪ್ರಶಾಂತ್, ಪದವಿ ಕಾಲೇಜಿನ ಆಂತರಿಕ ಗುಣಮಟ್ಟ ಮೌಲ್ಯಮಾಪನ ಸಮಿತಿ ಸಂಚಾಲಕ ನಾಟೋಳಂಡ ನವೀನ್, ಶಾಲಾ ಶಿಕ್ಷಕರು ಮತ್ತು ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.