ಗೋಣಿಕೊಪ್ಪ ವರದಿ, ಜ. 20 : ಗೋಣಿಕೊಪ್ಪದಲ್ಲಿ ಪ್ರಾಯೋಗಿಕ ಏಕಮುಖ ಸಂಚಾರ ನಿಯಮ ಇಂದಿನಿಂದ ಬದಲಾಗಿದೆ. ಮೈಸೂರು ರಸ್ತೆ ಮೂಲಕ ಬರುವ ವಾಹನಗಳು ನೇರವಾಗಿ ಪಟ್ಟಣಕ್ಕೆ ಬರಬಹುದಾಗಿದೆ. ವೀರಾಜಪೇಟೆ ಕಡೆಯಿಂದ ಬರುವ ವಾಹನಗಳು ಬೈಪಾಸ್ ಮೂಲಕ ಸಾಗಬೇಕಿದೆ. ವರ್ತಕರಲ್ಲಿನ ಗೊಂದಲ ನಿವಾರಣೆಗೆ ಗೋಣಿಕೊಪ್ಪ ಪ್ರೆಸ್ ಕ್ಲಬ್ ವತಿಯಿಂದ ಮುಕ್ತ ಚರ್ಚೆ ಮೂಲಕ ಒಮ್ಮತಕ್ಕೆ ಬರಲಾಗಿತ್ತು. ಇದೀಗ ಪೊಲೀಸ್ ಇಲಾಖೆ ಕ್ರಮಕೈಗೊಂಡಿರುವದರಿಂದ ಸಂವಾದ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆÀ ದೊರೆತಂತಾಗಿದೆ. ಗೋಣಿಕೊಪ್ಪ ಏಕಮುಖ ಸಂಚಾರ ನಿಯಮದಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸಲು ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ ನೇತೃತ್ವದಲ್ಲಿ ಜಿಲ್ಲಾಡಳಿತ ಬಳಿ ನಿಯೋಗ ತೆರಳಲು ಸಂವಾದದಲ್ಲಿ ನಿರ್ಧಾರಿಸಲಾಗಿತ್ತು.

ಸಂವಾದದಲ್ಲಿ ಸ್ಥಳೀಯ ವರ್ತಕರ ಸಂಘದ ಅಧ್ಯಕ್ಷ ಸುನಿಲ್ ಮಾದಪ್ಪ, ಹಿರಿಯ ವರ್ತಕ ಅನೀಶ್ ಮಾದಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ ಕೆ. ಬೋಪಣ್ಣ ಪಾಲ್ಗೊಂಡು ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದರು. ಈ ಬಗ್ಗೆ ‘ಶಕ್ತಿ’ಗೆ ಸ್ಪಷ್ಟ ಪಡಿಸಿರುವ ಡಿವೈಎಸ್ ಪಿ ನಾಗಪ್ಪ, ಪರ್ಯಾಯವಾಗಿ ಮತ್ತೊಂದು ಪ್ರಯೋಗ ಆರಂಭಿಸಲಾಗಿದೆ. ಜನವರಿ 28 ರಂದು ಸಭೆ ಕರೆದು ನಿರ್ಧರಿಸಲಾಗುವದು. ಪಟ್ಟಣದ ಮುಖ್ಯರಸ್ತೆಯಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶವಿದೆ ಸಾರ್ವಜನಿಕರು ಸ್ಪಂದಿಸಬೇಕಿದೆ ಎಂದರು.