ಸುಂಟಿಕೊಪ್ಪ, ಜ. 20: ಸುಂಟಿಕೊಪ್ಪ ಪಟ್ಟಣದಲ್ಲಿ ನರೇಂದ್ರ ಮೋದಿಯವರ ಮಹಾತ್ವಕಾಂಕ್ಷೆಯ ಹೊಗೆ ಮುಕ್ತ ಅಡುಗೆಯಿಂದ ಬಡ ಮಹಿಳೆಯರ ಆರೋಗ್ಯ ಸುಧಾರಣೆಗೊಂಡಿದ್ದು, ಮಹಿಳೆಯರ ಬದುಕು ಹಸನಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಹೇಳಿದರು. ಸುಂಟಿಕೊಪ್ಪದ ಕೊಡಗು ಇಂಡೇನ್ ಗ್ಯಾಸ್ ಸರ್ವಿಸಸ್ ವತಿಯಿಂದ ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 10 ಬಿಪಿಎಲ್ ಕಾರ್ಡುದಾರ ಮಹಿಳೆಯರಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಯಡಿ ಉಚಿತವಾಗಿ ಸಿಲಿಂಡರ್ ಗ್ಯಾಸ್ ಸ್ಟೌವ್ ಅನ್ನು ವಿತರಿಸಿ ಮಾತನಾಡಿದ ಅವರು, ಯೋಜನೆ ಬಿಪಿಎಲ್ ಕಾರ್ಡುದಾರರಾದ ಬಡವರಿಗೆ ಸಿಗಬೇಕೆಂಬದು ಪ್ರಧಾನಿ ಮೋದಿ ಅವರ ಆಶಯವಾಗಿದೆ. ಇದರ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು. ವಾಲ್ನೂರು-ತ್ಯಾಗತ್ತೂರು ಗ್ರಾ.ಪಂ. ಸದಸ್ಯ ಅಂಚೆಮನೆ ಸುಧಿ ಮಾತನಾಡಿ, ಹೊಗೆ ಮುಕ್ತ ಅಡುಗೆ ಯಿಂದ ಆರೋಗ್ಯ ಕಾಪಾಡಬಹುದು ಈಗ ಉಚಿತ ಸಿಲಿಂಡರ್ ಸ್ಟೌವ್ ಪಡೆದ ಫಲಾನುಭವಿಗಳು ಅಕ್ಕಪಕ್ಕದ ಸಿಲಿಂಡರ್ ಸಿಗದೆ ಮಹಿಳೆಯರಿಗೂ ಮಾಹಿತಿ ನೀಡಿ ಸೌಲಭ್ಯಪಡೆದುಕೊಳ್ಳಲು ಸಹಕರಿಸಬೇಕೆಂದರು.
ಕೊಡಗು ಇಂಡೇನ್ ಗ್ಯಾಸ್ ಸರ್ವೀಸಸ್ ವ್ಯವಸ್ಥಾಪಕ ರಾಕೇಶ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.