ಮಡಿಕೇರಿ, ಜ. 20: ಮಹಿಳೆಯರು, ಮಕ್ಕಳ ಅಗತ್ಯತೆಗಳು ಸೇರಿದಂತೆ ಹತ್ತು ಹಲವು ಪ್ರಮುಖ ವಿಚಾರಗಳು.. ಯೋಜನೆಗಳಿಗೆ ಸಂಬಂಧಿಸಿದಂತೆ ಕೆಲಸ ನಿರ್ವಹಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಂಬದೊಂದಿದೆ. ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುವ ಗುರುತರವಾದ ಜವಾಬ್ದಾರಿ ಇರುವದು ಈ ಇಲಾಖೆಗೆ.ಆದರೆ, ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಇಂತಹದ್ದೊಂದು ಇಲಾಖೆ ಕೇವಲ ನಾಮಕಾವಸ್ಥೆಗೆ ಮಾತ್ರ ಇರುವದು ಸರಕಾರಗಳು ಜಿಲ್ಲೆಯನ್ನು ಕಡೆಗಣಿಸುತ್ತಿರುವದಕ್ಕೆ ಸಾಕ್ಷಿಯಾಗಿದೆ. ನೇರವಾಗಿ ಹೇಳಬೇಕೆಂದರೆ ಈ ಇಲಾಖೆಗೆ ಸಂಬಂಧಿಸಿದಂತೆ ಹೇಳಲೂ ಯಾರೂ ಇಲ್ಲ... ಕೇಳುವವರೂ ಇಲ್ಲ... ಸರಕಾರದ ಪ್ರಮುಖ ಯೋಜನೆಗಳು ಮಹಿಳೆಯರು, ಮಕ್ಕಳಿಗೆ ಸಂಬಂಧಿಸಿದಂತೆ ಈ ಇಲಾಖೆಯ ಮೂಲಕ ಕಾರ್ಯಗತಗೊಳ್ಳಬೇಕಿದೆ. ಆದರೆ ಈ ಇಲಾಖೆ ಜಿಲ್ಲೆಯಲ್ಲಿ ಯಾವ ರೀತಿಯ ಪರಿಸ್ಥಿತಿಯಲ್ಲಿದೆ ಎಂದು ವಿಮರ್ಶಿಸುವವರು ಯಾರೂ ಇಲ್ಲ.
ಮಳೆ ಅಧಿಕವಾಗಿ ಬೀಳುವ ಗುಡ್ಡಗಾಡು ಪ್ರದೇಶವಾದ ಈ ಜಿಲ್ಲೆಯಲ್ಲಿ ಈ ಇಲಾಖೆಯನ್ನು ಮುನ್ನಡೆಸುವವರೇ ಇಲ್ಲವಾಗಿದ್ದಾರೆ. ಅದೂ ಒಂದೆರಡು ದಿನಗಳು... ವಾರಗಳು ಅಥವಾ ತಿಂಗಳುಗಳಿಂದ ಅಲ್ಲ... ವರ್ಷಗಟ್ಟಲೆಯಿಂದ ಇದೇ ಪರಿಸ್ಥಿತಿಯಲ್ಲಿದೆ. ಈ ಬಗ್ಗೆ ಜಿಲ್ಲಾಡಳಿತವಾಗಲಿ, ಜಿ.ಪಂ., ತಾ.ಪಂ. ಅಥವಾ ಗ್ರಾ.ಪಂ.ನ ಜನಪ್ರತಿನಿಧಿಗಳಾಗಲಿ... ಇಲ್ಲವೇ ಜಿಲ್ಲೆಯ ಜವಾಬ್ದಾರಿ ಹೊಂದಿರುವ ಪ್ರಮುಖ ಜನಪ್ರತಿನಿಧಿಗಳಾಗಲೀ ಕಾಳಜಿ ವಹಿಸದಿರುವದು ವಿಷಾದನೀಯ.
ಸರಕಾರದ ವಿವಿಧ ಯೋಜನೆಗಳಾದ ಪೂರಕ ಪೌಷ್ಟಿಕ ಆಹಾರ, ಉದ್ಯೋಗಿನಿಯೋಜನೆ, ಮಾತೃವಂದನಾ, ಮಾತೃಶ್ರೀ, ಬಾಲ್ಯವಿವಾಹ ತಡೆ, ಬಾಲ ಕಾರ್ಮಿಕರ ತಡೆ, ಅಂಗನವಾಡಿ ಮಕ್ಕಳ ಶಿಕ್ಷಣ, ಸ್ಥಿತಿ-ಗತಿ, ಆರೋಗ್ಯ ಸಂಬಂಧಿತ ಮತ್ತಿತರ ಕಾರ್ಯಕ್ರಮಗಳ ಉಸ್ತುವಾರಿಯನ್ನು ಈ ಇಲಾಖೆಯ ಅಧಿಕಾರಿಗಳು ನಿಭಾಯಿಸಬೇಕು... ಆದರೆ... ಅಧಿಕಾರಿಗಳೂ ಇಲ್ಲ... ಸಿಬ್ಬಂದಿಗಳೂ ಇಲ್ಲ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿ ದಂತೆ ಓರ್ವ ಉಪ ನಿರ್ದೇಶಕರು, ಜಿಲ್ಲಾ ಮಕ್ಕಳಾ ರಕ್ಷಣಾಧಿಕಾರಿ, ಕಾರ್ಯನಿರ್ವಾಹಕ ಅಧಿಕಾರಿ, ಮಹಿಳಾ ಅಭಿವೃದ್ಧಿ ಅಧಿಕಾರಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ಮಹಿಳಾ ಅಭಿವೃದ್ಧಿ ನಿರೀಕ್ಷಕರು ಇಂತಹ ಜಿಲ್ಲಾ ಮಟ್ಟದ ಅಧಿಕಾರಿಗಳ ಹುದ್ದೆ, ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮೇಲ್ವಿಚಾರಕರು ಈ ರೀತಿಯಾಗಿ ಬಹುತೇಕ ಎಲ್ಲಾ ಹುದ್ದೆಗಳು ಕೊಡಗಿನಲ್ಲಿ ಖಾಲಿಯಾಗಿ ಬಿದ್ದಿವೆ. ಇದು ಅಲ್ಪ ಸಮಯದಿಂದಲ್ಲ... ವರ್ಷಾನುಗಟ್ಟಲೆಯಿಂದ ಎಂಬದು ಇಲ್ಲಿ ಉಲ್ಲೇಖನೀಯ. ಈ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮಂಜೂರಾತಿ ಇರುವ 105 ಹುದ್ದೆಗಳ ಪೈಕಿ ಕೇವಲ 20 ಮಂದಿ ಮಾತ್ರ ಇದ್ದಾರೆ.
ಎಲ್ಲವೂ ಖಾಲಿ ಖಾಲಿ
ಮೂರು ವರ್ಷಕ್ಕಿಂತಲೂ ಅಧಿಕ ಸಮಯದಿಂದ ಖಾಲಿಯಾಗಿದ್ದ ಉಪನಿರ್ದೇಶಕ ಸ್ಥಾನಕ್ಕೆ ಇದೀಗ ಎರಡು ತಿಂಗಳ ಹಿಂದೆಯಷ್ಟೆ ಒಬ್ಬರು ನಿಯೋಜಿತರಾಗಿದ್ದಾರೆ. ಇದು ಹೊರತುಪಡಿಸಿದರೆ ಜಿಲ್ಲಾ ಮಕ್ಕಳಾ ರಕ್ಷಣಾಧಿಕಾರಿ, ಕಾರ್ಯನಿರ್ವಾಹಕಾಧಿ ಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ, ಅಂಗವಿಕಲರ ಕಲ್ಯಾಣಾಧಿಕಾರಿ, ಮಹಿಳಾ ನಿರೀಕ್ಷಕ ಹುದ್ದೆಗಳು ನಾಲ್ಕೈದು ವರ್ಷಗಳಿಂದ ಭರ್ತಿಯಾಗಿಲ್ಲ.
ಕೇವಲ 5 ಮೇಲ್ವಿಚಾರಕರು: ಜಿಲ್ಲೆಯ ಮೂರು ತಾಲೂಕುಗಳಿಗೆ ಒಟ್ಟು 34 ರಷ್ಟು ಮೇಲ್ವಿಚಾರಕರು (ಸೂಪರ್ ವೈಸರ್) ಹುದ್ದೆಗೆ ಮಂಜೂರಾತಿ ಇದ್ದು, ಇರುವದು ಕೇವಲ 5 ಮಂದಿ ಮಾತ್ರ.
ಮಡಿಕೇರಿ ತಾಲೂಕಿನಲ್ಲಿ ಹಾಗೂ ಪೊನ್ನಂಪೇಟೆಯಲ್ಲಿ ತಲಾ ಇಬ್ಬರು ಮೇಲ್ವಿಚಾರಕರು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ಒಬ್ಬರು ಮಾತ್ರ ಇದ್ದಾರೆ.
ಸಿಡಿಪಿಓಗಳೂ ಇಲ್ಲ: ತಾಲೂಕು ಮಟ್ಟದ ಅಧಿಕಾರಿಗಳಾದ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹುದ್ದೆ ಮೂರು ತಾಲೂಕುಗಳಲ್ಲೂ ಇಲ್ಲ. ಎಲ್ಲಾ ತಾಲೂಕುಗಳಲ್ಲೂ ಕೆಳಹಂತದ ಸಿಬ್ಬಂದಿಗಳಿಗೇ ಪ್ರಬಾರ ಜವಾಬ್ದಾರಿ ಇದೆ.
ಬಂದವರು ಮತ್ತೆ ವರ್ಗ: ಮಡಿಕೇರಿ ತಾಲೂಕಿಗೆ ಒಂದು ತಿಂಗಳ ಹಿಂದೆಯಷ್ಟೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಓ) ಆಗಿ ಅರುಂಧತಿ ಎಂಬವ ರನ್ನು ನಿಯೋಜಿಸಲಾಗಿತ್ತು. ಇವರು ಆಗಮಿಸಿ ಕರ್ತವ್ಯ ನಿಭಾಯಿಸಲು ಆರಂಭಿಸಿದಂತೆ ಒಂದೇ ತಿಂಗಳಲ್ಲಿ ಇವರನ್ನು ಮತ್ತೆ ಜಿಲ್ಲೆಯಿಂದಲೇ ವರ್ಗಾವಣೆಗೊಳಿಸಿ ಇಲಾಖೆ ಆದೇಶ ಹೊರಡಿಸಿದೆ. ಅಧಿಕಾರಿಯನ್ನು ನಿಯೋಜಿಸಿದ್ದ ತಾಲೂಕಿನಿಂದ ಅವರನ್ನು ವರ್ಗಾವಣೆಗೊಳಿಸಿ ಬೆಂಗಳೂರಿ ನಿಂದ ಪ್ರಕಾಶ್ ಕುಮಾರ್ ಎಂಬವರನ್ನು ನೇಮಿಸಿ ಇಲಾಖೆ ತಾ. 17 ರಂದು ಆದೇಶ ಹೊರಡಿಸಿರುವದು ತಿಳಿದು ಬಂದಿದೆ.
ಆದರೆ ಶಾಶ್ವತ ಶಿಶು ಅಭಿವೃದ್ಧಿ ಯೋಜನಾಧಿಕಾರಿಯನ್ನು ನೇಮಕ ಮಾಡುವಂತೆ ಸೋಮವಾರಪೇಟೆ ತಾಲೂಕು ಹಾಗೂ ವೀರಾಜಪೇಟೆ ತಾಲೂಕಿನಿಂದ ಇರುವ ವರ್ಷಗಟ್ಟಲೆಯ ಬೇಡಿಕೆಯನ್ನು ಪರಿಗಣಿಸಲಾಗಿಲ್ಲ. ಒಂದೇ ತಿಂಗಳಲ್ಲಿ ಇವರನ್ನು ವರ್ಗಾಯಿಸುವ ಬದಲು ಈ ಸ್ಥಾನ ಖಾಲಿ ಇರುವ ಇನ್ನೆರಡು ತಾಲೂಕಿಗೆ ಹೊಸ ಅಧಿಕಾರಿಯನ್ನು ನೇಮಕ ಮಾಡಬಹುದಿತ್ತಾದರೂ ಇದನ್ನು ಕಡೆಗಣಿಸಲಾಗಿರುವದು ಹಲವರ ಹುಬ್ಬೇರಿಸಿದೆ.
ಈ ಇಲಾಖೆಗೆ ಸಂಬಂಧಿಸಿ ದಂತೆ ಕರ್ತವ್ಯದಲ್ಲಿರುವ ಸಿಬ್ಬಂದಿ ಗಳನ್ನು ಚುನಾವಣೆ ಮತ್ತಿತರ ಕೆಲಸ ಕಾರ್ಯಗಳಿಗೂ ಬಳಸಿಕೊಳ್ಳಲಾಗು ತ್ತದೆ. ಆದರೆ ಈ ಇಲಾಖೆಯನ್ನೇ ಕಡೆಗಣಿಸಿರುವ ಬಗ್ಗೆ ಜನಪ್ರತಿನಿಧಿ ಗಳು ಸರಕಾರದ ಗಮನ ಸೆಳೆಯಬೇಕಿದೆ.