ಮಡಿಕೇರಿ, ಜ. 18 : ಕೊಡಗಿನ ರಸ್ತೆ ನಿರ್ಮಾಣ ಕಾರ್ಯವನ್ನು ಹೊರ ಜಿಲ್ಲೆಗಳ ಗುತ್ತಿಗೆದಾರರಿಗೆ ನೀಡದೆ ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕೆಂದು ವೀರಾಜಪೇಟೆ ಗುತ್ತಿಗೆದಾರರ ಸಂಘ ಒತ್ತಾಯಿಸಿದೆ. ನಗರದ ಪಿಡಬ್ಲೂಡಿ ಕಚೇರಿ ಎದುರು ಜಮಾಯಿಸಿದ ಗುತ್ತಿಗೆದಾರರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ವೀರಾಜಪೇಟೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಜೀವ್ ಬೋಪಯ್ಯ, ಕೊಡಗಿನಲ್ಲಿ 160 ರಿಂದ 170 ಗುತ್ತಿಗೆದಾರರು ಇದ್ದಾರೆ. ನಾವೆಲ್ಲರೂ ಅತಿವೃಷ್ಟಿ ಸಂದರ್ಭದಲ್ಲಿ ಸೂಕ್ತವಾಗಿ ಕೆಲಸ ನಿರ್ವಹಿಸಿದ್ದೇವೆ. ಕೇರಳ-ಮಾಕುಟ್ಟ ಅಂತರ್‍ರಾಜ್ಯ ರಸ್ತೆ ಸಂಪರ್ಕ ಕಡಿತಗೊಂಡಿದ್ದ ಸಂದರ್ಭದಲ್ಲೂ ಹಗಲಿರುಳು ಶ್ರಮಿಸಿದ್ದೇವೆ. ಮೂರೂವರೆ ಕೋಟಿ ವೆಚ್ಚದ ಮಾಕುಟ್ಟ ಕೇರಳ ರಸ್ತೆ ನಿರ್ಮಾಣ ಮಾಡಿದ ಗುತ್ತಿಗೆದಾರರಿಗೆ ಇನ್ನೂ ಹಣ ನೀಡಿಲ್ಲ. 4ಜಿಯಲ್ಲಿ ರೂ. 22 ಕೋಟಿ ಹಣ ಜಿಲ್ಲಾ ಪಂಚಾಯತ್ ಮತ್ತು ಪಿಡಬ್ಲೂಡಿ ಕಚೇರಿಗೆ ಬಂದಿದೆ. ಅದಕ್ಕಾಗಿ ಹೊರಗಿನವರು ಬರುತ್ತಿದ್ದಾರೆ. ಕೊಡಗು ಉಸ್ತುವಾರಿ ಸಚಿವರು ರಸ್ತೆ ನಿರ್ಮಾಣಕ್ಕೆ ನಿರ್ದೇಶನ ನೀಡಿದ್ದು, ರಸ್ತೆ ತೋರಿಸಿ ಎಂದು ಇಂಜಿನಿಯರ್‍ಗಳಿಗೆ ಒತ್ತಡ ಹೇರುತ್ತಿದ್ದಾರೆ. ಆದರೆ ನಾವು ಯಾರಿಗೂ ಕೆಲಸವನ್ನು ಬಿಟ್ಟುಕೊಡಲು ಸಿದ್ದರಿಲ್ಲ. ಕೊಡಗಿನ ಜನರ ತೆರಿಗೆ ಹಣವನ್ನು ಇಲ್ಲಿನ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತದೆ. ಹೀಗಿದ್ದಾಗ ಬೇರೆ ಕಡೆಗಳಿಂದ ಗುತ್ತಿಗೆದಾರರು ಬಂದರೆ ನಾವು ಸಹಿಸುವದಿಲ್ಲ. ಇನ್ನೂ 4 ದಿನಗಳಲ್ಲಿ ಪ್ರಕ್ರಿಯೆಯನ್ನು ಸ್ಥಳೀಯ ಗುತ್ತಿಗೆದಾರರಿಗೆ ಬಿಟ್ಟು ಕೊಡಬೇಕು. ಇಲ್ಲವಾದಲ್ಲಿ ಜಿಲ್ಲಾ ಮಟ್ಟದಲ್ಲಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭ ವೀರಾಜಪೇಟೆ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಇದ್ದರು.