ಕುಶಾಲನಗರ, ಜ. 18: ಸ್ವಯಂರಕ್ಷಣೆ ಹೆಸರಿನಲ್ಲಿ ಸಶ್ತ್ರಾಸ್ತಗಳ ದುರ್ಬಳಕೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ. ಸುಮನ್ ಹೇಳಿದರು.

ವಾಸವಿ ಯುವತಿಯರ ಸಂಘ ಹಾಗೂ ರೋಟರಿ ಇನ್ನರ್ ವೀಲ್ ಕ್ಲಬ್ ಆಶ್ರಯದಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 6 ದಿನಗಳ ನಾಗರಿಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಸಶ್ತ್ರಾಸ್ತ್ರಗಳ ಬಳಕೆ ಬಗ್ಗೆ ಅರಿವು ಹೊಂದುವದು ಅಗತ್ಯ. ದೇಶದ ಸೇನೆಗಳಲ್ಲಿ ತುರ್ತು ಪರಿಸ್ಥಿತಿ ಎದುರಾದ ಸಂದರ್ಭ ಇಂತಹ ತರಬೇತಿ ಶಿಬಿರಗಳಲ್ಲಿ ಕಲಿತ ವಿದ್ಯೆಗಳು ಸಹಕಾರಿಯಾಗಲಿವೆ. ವಿದೇಶಗಳಲ್ಲಿ ನಾಗರಿಕರು ಕಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸುವ ವ್ಯವಸ್ಥೆಯಿದ್ದು ನಾಗರಿಕರು ಸೈನಿಕರಾಗಿ ಸೇವೆ ಸಲ್ಲಿಸುತ್ತಾರೆ. ಭಾರತೀಯರು ಕೂಡ ಇದಕ್ಕೆ ಹೊರತಾಗಬಾರದು ಎಂಬ ಉದ್ದೇಶದಿಂದ ಇಲಾಖೆ ಮೂಲಕ ತರಬೇತಿ ನೀಡಲಾಗುತ್ತದೆ ಎಂದರು. ತೀರಾ ಅನಿವಾರ್ಯ ಎನಿಸಿದ ಸಂದರ್ಭ, ಪ್ರಾಣಕ್ಕೆ ಸಂಚಕಾರವಿರುವ ಮಂದಿ ಮಾತ್ರ ಆತ್ಮರಕ್ಷಣೆಗೆ ಬಂದೂಕುಗಳನ್ನು ಬಳಸಬೇಕೆ ಹೊರತು, ಸ್ವಯಂ ರಕ್ಷಣೆ ಹೆಸರಿನಲ್ಲಿ ಅನಗತ್ಯ ಬಳಕೆ ಸಲ್ಲದು ಎಂದರು.ಶಿಬಿರದಲ್ಲಿ ಪಾಲ್ಗೊಂಡಿದ್ದ 44 ಮಂದಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಶಿಬಿರಾರ್ಥಿಗಳು ಎಸ್ಪಿ ಸುಮನ್ ಅವರನ್ನು ಸನ್ಮಾನಿಸಿ ಗೌರವಿಸಿದರು.

ವಾಸವಿ ಯುವತಿಯರ ಸಂಘದ ಅಧ್ಯಕ್ಷೆ ಶ್ರೀಲಕ್ಷ್ಮಿ ರವಿಚಂದ್ರ ಮತ್ತು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಸುನಿತಾ ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಿವೈಎಸ್ಪಿ ಮುರಳೀಧರ್, ಪ.ಪಂ. ಸದಸ್ಯ ಅಮೃತ್‍ರಾಜ್, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್. ಸತ್ಯನಾರಾಯಣ, ಇನ್ನರ್ ವೀಲ್ ಕ್ಲಬ್ ಚಾರ್ಟರ್ ಪ್ರೆಸಿಡೆಂಟ್ ಆರತಿ ಹೆಚ್. ಶೆಟ್ಟಿ, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾ ಸತ್ಯ, ವಾಸವಿ ಯುವಜನ ಸಂಘದ ಅಧ್ಯಕ್ಷ ನಾಗಪ್ರವೀಣ ಮತ್ತಿತರ ಪ್ರಮುಖರು ಇದ್ದರು.