ಮಡಿಕೇರಿ, ಜ. 18: ಗೋಣಿಕೊಪ್ಪಲು ಪಟ್ಟಣದಲ್ಲಿ ಪ್ರಸ್ತುತ ಹಲವು ವಿವಾದಗಳಿಗೆ ಕಾರಣವಾಗಿರುವ ಪ್ರಾಯೋಗಿಕವಾಗಿ ಜಾರಿಗೊಳಿಸಿರುವ ಏಕಮುಖ ಸಂಚಾರ ವ್ಯವಸ್ಥೆ ಇನ್ನೂ ಹಲವು ದಿನಗಳ ಕಾಲ ಮುಂದುವರಿಯಲಿದೆ. ಈ ಕುರಿತು ‘ಶಕ್ತಿ’ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರು ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿ ಏಕಮುಖ ಸಂಚಾರ ವ್ಯವಸ್ಥೆಯನ್ನು ಜಾರಿಗೆ ತಂದು ಇದೀಗ ಕೆಲವು ದಿನಗಳು ಮಾತ್ರ ಕಳೆದಿವೆ. ಆದರೆ ಈ ನಡುವೆ ಇದಕ್ಕೆ ಪರ - ವಿರೋಧಗಳು ಕೇಳಿ ಬರುತ್ತಿದ್ದು, ಬಂದ್ ಕೂಡ ನಡೆದಿದೆಯಾದರೂ ಪರಿಶೀಲನಾತ್ಮಕವಾಗಿ ಜಾರಿಗೊಳಿಸಿರುವ ಈ ಪ್ರಾಯೋಗಿಕ ಕ್ರಮವನ್ನು ಇನ್ನಷ್ಟು ದಿನಗಳು ಮುಂದುವರಿಸಲಾಗುವದು.ವ್ಯವಸ್ಥೆಯ ಬಗ್ಗೆ ಹಲವರು ಬೆಂಬಲ ವ್ಯಕ್ತಪಡಿಸಿದ್ದು, ಇನ್ನು ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಯಾವದೇ ಹೊಸ ವ್ಯವಸ್ಥೆ, ಕ್ರಮಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಇದು ಸಾಮಾನ್ಯವಾಗಿರುತ್ತದೆ. ಆದರೂ ಪ್ರಾಯೋಗಿಕ ವ್ಯವಸ್ಥೆಯನ್ನು ಸದ್ಯದ ಮಟ್ಟಿಗೆ ಮುಂದುವರಿಸಲಾಗುವದು. ಈ ಕುರಿತಾಗಿ ತಾ. 28 ರಂದು ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕ ಸಭೆಯನ್ನು ಕರೆಯಲಾಗುವದು. ಈ ಸಭೆಯಲ್ಲಿ ಸಾರ್ವಜನಿಕರಿಗೆ ಯಾವದು ಅನುಕೂಲವಾಗಲಿದೆಯೋ ಎಂಬ ಮಾಹಿತಿಯನ್ನು ಪಡೆದು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವದು. ಹೆಚ್ಚಿನ ಸಾರ್ವಜನಿಕರಿಗೆ ಉಪಯೋಗವಾಗುವ ರೀತಿಯಲ್ಲಿ ಇಲಾಖೆ ಕ್ರಮ ವಹಿಸಲು ಸಿದ್ಧವಿದ್ದು, ತಾ. 28ರ ತನಕವಂತೂ ಈಗಿನ ವ್ಯವಸ್ಥೆ ಮುಂದುವರಿಯಲಿದೆ ಎಂದು ಮಾಹಿತಿ ನೀಡಿದ್ದಾರೆ.