ಗೋಣಿಕೊಪ್ಪಲು, ಜ.18: ವಿದ್ಯಾರ್ಥಿಗಳು ಮಾರ್ಚ್ ತಿಂಗಳಲ್ಲಿ ನಡೆಯುವ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯುವ ಮೂಲಕ ತಮ್ಮ ಪ್ರತಿಭೆಗಳನ್ನು ತೋರಿಸಬೇಕೆಂದು ಶಿಕ್ಷಣ ಮತ್ತುಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್‍ಕಾರ್ಯಪ್ಪ ಹೇಳಿದರು.

ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆಯಲ್ಲಿರುವ ಕ್ರೀಡಾ ವಸತಿ ಶಾಲೆಯಲ್ಲಿ ಆಯೋಜನೆಗೊಂಡಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಹಾಗೂ ಪೋಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಿರಣ್‍ಕಾರ್ಯಪ್ಪ, ಇಲ್ಲಿಯತನಕ ವಸತಿ ಶಾಲೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿರುವದು ಖುಷಿ ತಂದಿದೆ. ಮುಂದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಇರುವ ಸಮಯವನ್ನು ವ್ಯರ್ಥ ಮಾಡದೇ ಓದಿನಲ್ಲಿ ಕಳೆಯಬೇಕು ಆ ಮೂಲಕ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆಯುವ ಮೂಲಕ ಸಾಧನೆ ಮಾಡಬೇಕೆಂದು ಕರೆ ನೀಡಿದರು.

ವಸತಿ ಶಾಲೆಯಲ್ಲಿನ ಸಮಸೈಗಳನ್ನು ಹಂತ ಹಂತವಾಗಿ ಬಗೆಹರಿಸಲಾಗಿದೆ. ಉತ್ತಮ ತರಬೇತುದಾರರನ್ನು ಪೋಷಕರ, ವಿದ್ಯಾರ್ಥಿಗಳ ಅಭಿಲಾಷೆಯಂತೆ ನೇಮಕ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ನೀಡುವ ಆಹಾರದ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ಸತತವಾಗಿ ಪೋಷಕರ ಸಭೆಗಳನ್ನು ಆಯೋಜಿಸುವ ಮೂಲಕ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಿದ್ದೇವೆ. ಮುಂದಿನ ದಿನದಲ್ಲಿ ಜಿಲ್ಲಾಧಿಕಾರಿ, ಮುಖ್ಯಕಾರ್ಯ ನಿರ್ವಾಹಾಣಾ ಧಿಕಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರ ಸಮ್ಮುಖದಲ್ಲಿ ಸಭೆಯನ್ನು ಆಯೋಜಿಸಿ ಇನ್ನಷ್ಟು ಪ್ರಗತಿ ಸಾದಿಸಲು ಶ್ರಮ ವಹಿಸಲಾಗುವದು, ಮುಂದಿನ ಸಾಲಿನಿಂದ ಹೆಚ್ಚುವರಿಯಾಗಿ 17 ವಿದ್ಯಾರ್ಥಿಗಳನ್ನು ಕ್ರೀಡಾ ವಸತಿ ಶಾಲೆಗೆ ನೇಮಿಸಿಕೊಳ್ಳುವ ಆದೇಶ ಸರ್ಕಾರದಿಂದ ಬಂದಿದೆ ಎಂದ ಅವರು ವಿದ್ಯಾರ್ಥಿಗಳ ಕಲಿಕೆ ಮಟ್ಟ ಸುದಾರಿಸಲು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ ವಿಷಯದಲ್ಲಿ ಅನುಭವಿ ಶಿಕ್ಷಕರುಗಳಿಂದ ವಿಶೇಷ ತರಗತಿ ನಡೆಸಲಾಗುವದು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕಿರಣ್‍ಕಾರ್ಯಪ್ಪ ಹೇಳಿದರು. ನಿಲಯದ ವಿದ್ಯಾರ್ಥಿನಿಯರ ನೀರಿನ ಸಮಸ್ಯೆ, ಹೆಚ್ಚುವರಿ ಸಿ.ಸಿ.ಟಿ.ವಿಯ ಬಗ್ಗೆ ಪೋಷಕರು ಸಲಹೆ ಸೂಚನೆಗಳನ್ನು ನೀಡಿದರು.

ಕ್ರೀಡಾ ವಿದ್ಯಾರ್ಥಿಗಳಿಗೆ ಹೊಸ ಹಾಕಿ ಸ್ಟಿಕ್, ಕಂಬಳಿ ಇನ್ನಿತರ ವಸ್ತುಗಳನ್ನು ಅಧ್ಯಕ್ಷರು ವಿತರಿಸಿದರು. ವಿದ್ಯಾರ್ಥಿಗಳಿಗೆ ನೀಡುವ ಆಹಾರ ಗುಣಮಟ್ಟವನ್ನುಕಡಿಮೆಯಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲೀರ ಚಲನ್, ತರಬೇತುದಾರರಾದ ಬುಟ್ಟಿಯಂಡಚಂಗಪ್ಪ, ಕುಪ್ಪಂಡ ಸುಬ್ಬಯ್ಯ, ಮೇಲ್ವಿಚಾರಕ ಬಿ.ಎಲ್. ಮಂಜುನಾಥ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

-ಹೆಚ್.ಕೆ.ಜಗದೀಶ್