ಮಡಿಕೇರಿ, ಜ. 18 : ಅತಿವೃಷ್ಟಿ ಹಾನಿಯಿಂದ ನೊಂದಿರುವ ಮಕ್ಕಳಲ್ಲಿ ಧೈರ್ಯ, ಆತ್ಮವಿಶ್ವಾಸ ಮತ್ತು ಮನೋಸ್ಥೈರ್ಯ ಬೆಳೆಸುವ ಉದ್ದೇಶದಿಂದ ಬೆಂಗಳೂರಿನ ‘ಜಾಗೃತಿ’ ಸ್ವಯಂಸೇವಾ ಸಂಸ್ಥೆಯು ತಾ. 19 ರಂದು (ಇಂದು) ಬೆಳಿಗ್ಗೆ 9 ಗಂಟೆಯಿಂದ ಮಾದಾಪುರದಲ್ಲಿ ‘ಸ್ಫೂರ್ತಿ ಚೇತನ’ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕಾರ್ಯ ಕ್ರಮವನ್ನು ಆಯೋಜಿಸಿದೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಸ್ಥೆಯ ಪ್ರಮುಖರು, ಕೊಡಗಿನಲ್ಲಿ ಉಂಟಾದ ಪ್ರಕೃತಿ ವಿಕೋಪ ಮತ್ತು ಭೂ ಕುಸಿತದಿಂದ ಹಾನಿಗೊಳಗಾದ ಪ್ರದೇಶದ ಸಂತ್ರಸ್ತರಿಗೆ ಅವಶ್ಯಕತೆಗೆ ತಕ್ಕಂತೆ ಸಹಕಾರ ನೀಡಲಾಗುತ್ತಿದೆ. ಭೂ ಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿರುವ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ಕೌನ್ಸಿಲಿಂಗ್ ಸೇರಿದಂತೆ ಅಗತ್ಯ ಪಠ್ಯೇತರ ಚಟುವಟಿಕೆಗಳನ್ನು ಸಂಸ್ಥೆಯ ವತಿಯಿಂದ ನಡೆಸಲಾಗುತ್ತಿದೆ ಎಂದರು.

ಶಾಲಾ ಮಕ್ಕಳೊಂದಿಗೆ ಭಾವನಾತ್ಮಕ ಸಂಬಂಧಗಳನ್ನು ಬೆಳೆಸಿ ಅವರ ಶ್ರೇಯೋಭಿವೃದ್ಧಿಗಾಗಿ ಆಪ್ತಸಮಾಲೋಚನೆ, ವೃತ್ತಿ ಮಾರ್ಗದರ್ಶನ, ಪರೀಕ್ಷಾ ಭಯ ನಿವಾರಣೆ, ಮನರಂಜನೆ, ಕ್ರೀಡೆ, ಆರೋಗ್ಯ ಜಾಗೃತಿ ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸಿ ಮನೋಸ್ಥೈರ್ಯ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಮಕ್ಕಳಿಗೆ ಗುಂಪು

(ಮೊದಲ ಪುಟದಿಂದ) ಆಪ್ತಸಮಾಲೋಚನೆ ನಡೆಸಲಾಗಿದ್ದು, ಈ ಸಂದರ್ಭ ಆಯ್ಕೆ ಮಾಡಲಾದ ಮಕ್ಕಳಿಗೆ ವೈಯಕ್ತಿಕ ಆಪ್ತ ಸಮಾಲೋಚನೆಯನ್ನೂ ನಡೆಸಲಾಗುತ್ತಿದೆ. ಅಲ್ಲದೆ ಮುಂದೆ ಈ ಕಾರ್ಯವನ್ನು ನಿರಂತರವಾಗಿ ಮುಂದುವರಿಸುವ ನಿಟ್ಟಿನಲ್ಲಿ ಶಿಕ್ಷಕರಿಗೂ ತರಬೇತಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ಪ್ರಸಕ್ತ ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರದೇಶದ ಮಕ್ಕಳು ವ್ಯಾಸಂಗ ಮಾಡುತ್ತಿರುವ ಮಾದಾಪುರ, ಸೂರ್ಲಬ್ಬಿ, ಗಾಳಿಬೀಡು, ಕಿರಗಂದೂರು, ಐಗೂರು, ಸುಂಟಿಕೊಪ್ಪ, ಕಡಗದಾಳು ಸರಕಾರಿ ಪ್ರೌಢಶಾಲೆಗಳು ಹಾಗೂ ಮಾದಾಪುರದ ಚೆನ್ನಮ್ಮ ಪ್ರೌಢಶಾಲೆಯ ಸುಮಾರು 400 ವಿದ್ಯಾರ್ಥಿಗಳಿಗೆ ಮಾದಾಪುರದ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ಒಂದು ದಿನದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸಿಸ್ಕೋ ಸಂಸ್ಥೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 100 ಮೀಟರ್, 800 ಮೀ, 4x100 ರಿಲೇ ಸೇರಿದಂತೆ ಓಟದ ಸ್ಪರ್ಧೆಗಳು, ಉದ್ದ, ಎತ್ತರ ಜಿಗಿತ, ಭಾರದಗುಂಡು ಎಸೆತ, ಡಿಸ್ಕ್ ಥ್ರೋ, ಕಬಡ್ಡಿ, ವಾಲಿಬಾಲ್, ಥ್ರೋಬಾಲ್ ಮುಂತಾದ ಕ್ರೀಡಾ ಸ್ಪರ್ಧೆಗಳು ಹಾಗೂ ಸೋಲೋ ಸಂಗೀತ, ಗುಂಪು ನೃತ್ಯ, ರಸಪ್ರಶ್ನೆ ಮುಂತಾದ ಕಾರ್ಯಕ್ರಮಗಳನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರಾದ ಕೆ.ಎಸ್.ಶರಣ್, ಕಣ್ಣನ್ ಹಾಗೂ ಕೆ.ಟಿ.ದೀಪಕ್ ಉಪಸ್ಥಿತರಿದ್ದರು.