ಮಡಿಕೇರಿ, ಜ. 18 : ದೇಶದಲ್ಲಿಯೇ ಮೊದಲ ಅಂಚೆಯಣ್ಣನ ಪ್ರತಿಮೆ ಕುಂದಾನಗರಿ ಬೆಳಗಾವಿ ಯಲ್ಲಿ ಇತ್ತೀಚೆಗೆ ಲೋಕಾರ್ಪಣೆ ಗೊಂಡಿತು. ಕಂಚಿನಿಂದ ತಯಾ ರಾಗಿರುವ ಪೋಸ್ಟ್‍ಮ್ಯಾನ್ ಪ್ರತಿಮೆ 8 ಅಡಿ ಎತ್ತರ, 350 ಕೆ.ಜಿ. ತೂಕವಿದೆ.
ಪ್ರತಿಮೆ ಸ್ಥಾಪನೆ ಯಾಗಿರುವ ಹೃದಯ ಭಾಗಕ್ಕೆ ‘ಫೋಸ್ಟ್ ಮ್ಯಾನ್ ವೃತ್ತ’ ಮತ್ತು ರಸ್ತೆಗೆ ‘ಮುಖ್ಯ ಅಂಚೆ ಕಚೇರಿ ರಸ್ತೆ’ ಎಂದು ಮರುನಾಮಕರಣ ಮಾಡುವ ಮೂಲಕ ಪೋಸ್ಟ್‍ಮ್ಯಾನ್‍ಗಳ ಸೇವೆಗೆ ಗೌರವ ಸೂಚಿಸಲಾಗಿದೆ ಎಂದು ಅಖಿಲ ಭಾರತ ಅಂಚೆ ಇಲಾಖಾ ನೌಕರರ ಸಂಘದ ಕೊಡಗು ವಿಭಾಗದ ಕಾರ್ಯದರ್ಶಿ ಬೇಬಿ ಜೋಸೆಫ್ ಹರ್ಷ ವ್ಯಕ್ತಪಡಿಸಿದ್ದಾರೆ. ಬೇಬಿ ಜೋಸೆಫ್ ಅವರ ನೇತೃತ್ವದಲ್ಲಿ ಪ್ರಮುಖರಾದ ಹರಿನಾಥ್ ಕುಮಾರ್, ಕೆ.ಎಚ್.ಮೂಸ, ಟಿ.ಕೆ.ಮಂಜು ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬೆಳಗಾವಿಯಲ್ಲಿ ನಡೆದ 30ನೇ ದ್ವೈವಾರ್ಷಿಕ ಕರ್ನಾಟಕ ವಲಯ ಸಮ್ಮೇಳನದಲ್ಲಿ ಕೂಡ ನೌಕರರ ಸಂಘದ ಕೊಡಗು ಜಿಲ್ಲಾ ಪ್ರಮುಖರು ಭಾಗವಹಿಸಿದ್ದರು.