ಗೋಣಿಕೊಪ್ಪಲು, ಜ. 18 : ಅರಣ್ಯವನ್ನು ಕಾಡ್ಗಿಚ್ಚಿನಿಂದ ರಕ್ಷಿಸುವ ಉದ್ದೇಶದಿಂದ ಅರಣ್ಯಾಧಿಕಾರಿಗಳು ರಸ್ತೆ ಬದಿಯ ಗಿಡಗಂಟಿಗಳನ್ನು ಕಡಿಸಿ ಒಣಗಿದ ಹುಲ್ಲು ಹಾಗೂ ಕಸಕಡ್ಡಿಗಳಿಗೆ ಬೆಂಕಿ ಕೊಟ್ಟು ಸ್ವಚ್ಛಗೊಳಿಸುವತ್ತ ತೊಡಗಿದ್ದಾರೆ.

ತಿತಿಮತಿ ಪಂಚವಳ್ಳಿ ನಡುವೆ ಇರುವ ಆನೆಚೌಕೂರು ನಾಗರಹೊಳೆ ವನ್ಯ ಜೀವಿ ವಿಭಾಗದ ಅಂತರ ರಾಜ್ಯ ಹೆದ್ದಾರಿ ಬದಿಯ ಅರಣ್ಯದಲ್ಲಿ ಬೆಳೆದಿರುವ ಸುಮಾರು 200 ಮೀಟರ್‍ನಷ್ಟು ದೂರದ ಗಿಡಗಂಟಿಗಳನ್ನು ಕಡಿಸಲಾಗಿದೆ.ಪಿರಿಯಾಪಟ್ಟಣ ತಾಲ್ಲೂಕಿನ ಅಳ್ಳೂರಿನಿಂದ ತಿತಿಮತಿ ಸಮೀಪದ ಮಜ್ಜಿಗೆ ಹಳ್ಳದ ಆನೆ ಕ್ಯಾಂಪ್ ತನಕ 15 ಕಿ.ಮೀ. ವರೆಗೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಂತಿರುವ ಅರಣ್ಯದ ರಸ್ತೆಬದಿಯನ್ನು ಸ್ವಚ್ಛಗೊಳಿಸಲಾಗುತ್ತಿದೆ. ಅರಣ್ಯವನ್ನು ಕಾಡ್ಗಿಚ್ಚಿನಿಂದ ಸಂರಕ್ಷಿಸುವದು ಮುಖ್ಯ ಈ ಕಾರಣಕ್ಕೆ ಜಾಗೃತಿ ವಹಿಸಲಾಗಿದೆ ಎಂದು ತಿತಿಮತಿ ಎಸಿಎಫ್ ಶ್ರೀಪತಿ ಹೇಳಿದರು.

ಎರಡು ವರ್ಷಗಳಿಂದ ಈಚೆಗೆ ರಸ್ತೆ ಬದಿಯ ಗಿಡಗಂಟಿಗಳನ್ನು ಕಡಿದು ಸ್ವಚ್ಚಗೊಳಿಸುವ ಕಾರ್ಯವನ್ನು ಅರಣ್ಯ ಇಲಾಖೆ ಕೈಗೊಳ್ಳುತ್ತಿದೆ. 2015 ರ ಮಾರ್ಚ್‍ನಲ್ಲಿ ಯಾರೋ ದುಷ್ಕರ್ಮಿಗಳು ಮತ್ತಿಗೋಡು ಬಳಿ ಹೆದ್ದಾರಿ ಬದಿಯಲ್ಲಿಯೇ ವನ್ಯಜೀವಿ ವಿಭಾಗಕ್ಕೆ ಬೆಂಕಿ ಕೊಟ್ಟು ಸಾವಿರಾರು ಅರಣ್ಯ ಪ್ರದೇಶವನ್ನು ಬೆಂಕಿಗೆ ಆಹುತಿ ಮಾಡಿದ್ದರು. ಇದರಿಂದ ಹಳೆಯದಾದ ಮರಗಳು ಬೆಂಕಿಗೆ ಆಹುತಿಯಾಗಿದ್ದವು. ಈ ಭಾಗದಲ್ಲಿ ಮರಗಳು ಈಗಲೂ ಒಣಗಿ ನಿಂತಿರುವದನ್ನು ಕಾಣುತ್ತೇವೆ. ಇಂತಹ ಘಟನೆ ಮತ್ತೆ ಮರುಕಳಿಸಬಾರದು ಎಂಬ ಎಚ್ಚರಿಕೆ ಅರಣ್ಯ ಇಲಾಖೆಯದ್ದಾಗಿದೆ.

ತಿತಿಮತಿ ಅಳ್ಳೂರು ನಡುವಿನ ಅರಣ್ಯದೊಳಗಿನ ಅಂತರ ರಾಜ್ಯ ಹೆದ್ದಾರಿಯಲ್ಲಿ ಪ್ರತಿದಿನ ಹಗಲು ರಾತ್ರಿ ಎನ್ನದೆ ಸಾವಿರಾರು ವಾಹನಗಳು ಸಂಚರಿಸುತ್ತಿರುತ್ತವೆ. ಪ್ರಯಾಣಿಕರ ಬೇಜವಾಬ್ದಾರಿತನದಿಂದಲೂ ಅರಣ್ಯಕ್ಕೆ ಬೆಂಕಿ ಹರಡುವ ಸಂಭವವಿರುತ್ತದೆ. ಅರಣ್ಯ ಸಂಪತ್ತು ಮತ್ತು ವನ್ಯಜೀವಿ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಲು ಹೆದ್ದಾರಿ ಬದಿಯಲ್ಲಿ ನಾಮಫಲಕ ಅಳವಡಿಸಲಾಗಿದೆ. ಜತೆಗೆ ಅಲ್ಲಲ್ಲೆ ಮರಗಳ ಮೇಲೆ ಬೆಂಕಿ ಗೋಪುರಗಳನ್ನು ನಿರ್ಮಿಸಿ ಅವುಗಳ ಮೇಲೆ ಕಾವಲುಗಾರರನ್ನು ಕೂರಿಸಲಾಗಿದೆ. ಅವರು ಇಡೀ ಅರಣ್ಯವನ್ನು ಹದ್ದಿನ ಕಣ್ಣಿಟ್ಟು ಗಮನಿಸುತ್ತಿರುತ್ತಾರೆ. ಎಲ್ಲಿಯಾದರೂ ಹೊಗೆ ಕಂಡು ಬಂದಲ್ಲಿ ಕೂಡಲೆ ವಾಕಿಟಾಕಿ ಮೂಲಕ ಮಾಹಿತಿ ನೀಡಲಿದ್ದಾರೆ. ಅಲ್ಲದೆ ಅಂತರ್ ಜಾಲದ ಮೂಲಕ ವೈಮಾನಿಕ ಸಮೀಕ್ಷೆಯೂ ಕೂಡ ನಡೆಯಲಿದೆ. ಕಾಡ್ಗಿಚ್ಚು ರಕ್ಷಣಾ ಪಡೆ ನಿರ್ಮಿಸಿದ್ದು, ಅವರು ನಿರಂತರವಾಗಿ ಗಸ್ತು ತಿರುಗಲಿದ್ದಾರೆ. ಇತ್ತ ಗೋಣಿಕೊಪ್ಪಲು ಹಾಗೂ ಪಿರಿಯಾಪಟ್ಟಣದ ಅಗ್ನಿಶಾಮಕ ದಳಕ್ಕೂ ಸನ್ನದ್ಧವಾಗಿರಲು ಮನವಿ ಮಾಡಲಾಗಿದೆ ಎಂದರು. ಆರ್‍ಎಫ್‍ಒ ಅಶೋಕ್ ಹುನುಗುಂದ ಇದ್ದರು.

-ಎನ್.ಎನ್.ದಿನೇಶ್