ವರದಿ : ಅಂಚೆಮನೆ ಸುಧಿ

*ಸಿದ್ದಾಪುರ, ಜ. 17: ಕಳೆದ ಒಂದು ವರ್ಷಗಳ ಹಿಂದೆ ಇಲ್ಲಿನ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಡಳಿತವನ್ನು ರಾಜ್ಯದ ಪ್ರಮುಖ ಮತ್ತು ಖ್ಯಾತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಆದಿಚುಂಚನಗಿರಿ ವಿದ್ಯಾಸಂಸ್ಥೆಗಳಿಗೆ ವಹಿಸಿಕೊಟ್ಟಿದ್ದ ಪ್ರೌಢ ಶಾಲೆ ಮತ್ತು ಸಂಯುಕ್ತ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಪ್ರಮುಖರು ಶಾಲೆಯ ಬೆಳವಣಿಗೆಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮುಂದಾಗಿದ್ದಾರೆ.

ಪದವಿಪೂರ್ವ ಕಾಲೇಜಿಗೆ ತೆರಳಲು ಮತ್ತು ವಾಹನಗಳು ಸಂಚರಿಸಲು ಅಗಲವಾದ ಸಮರ್ಪಕ ರಸ್ತೆ ಇರದ ಕಾರಣ ಮತ್ತು ಈಗಾಗಲೇ ಶಾಲೆಗೆ ತೆರಳಲು ಬಳಸುತ್ತಿದ್ದ ರಸ್ತೆ ಇಕ್ಕಟ್ಟಾಗಿದ್ದರಿಂದ ಆಡಳಿತ ಮಂಡಳಿಯ ಪ್ರಮುಖರಲ್ಲಿ ಒಬ್ಬರಾದ ಪಟ್ಟಡ ಅಶೋಕ್ ಕುಶಾಲಪ್ಪ ತಮ್ಮ ಸ್ವಂತ ಕಾಫಿ ತೋಟದ ಒಂದೂ ಮುಕ್ಕಾಲು ಏಕರೆ ಕಾಫಿ ತೋಟವನ್ನು ರಸ್ತೆಗಾಗಿ ಮತ್ತು ವಿದ್ಯಾಸಂಸ್ಥೆಯ ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಲು ಉದಾರವಾಗಿ ನೀಡಿದ್ದಾರೆ. ವಿದ್ಯಾಸಂಸ್ಥೆಯು ಸ್ಥಳೀಯ ಬಡ ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರ ಮಕ್ಕಳಿಗೆ ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಮುಂದಿನ ದಿನಗಳಲ್ಲಿ ನರ್ಸಿಂಗ್ ಸೇರಿದಂತೆ ಉನ್ನತ ವಿದ್ಯಾಭ್ಯಾಸದ ಕಾಲೇಜು ಸ್ಥಾಪನೆಗೆ ಮುಂದಾಗಿದೆ. ಸುಮಾರು ರೂ. 80 ಲಕ್ಷ ವೆಚ್ಚದಲ್ಲಿ ವಿದ್ಯಾರ್ಥಿಗಳಿಗಾಗಿ ಬಸ್ ವ್ಯವಸ್ಥೆಯನ್ನು ವಿದ್ಯಾಸಂಸ್ಥೆ ಕಲ್ಪಿಸಿದ್ದು ಸೂಕ್ತ ರಸ್ತೆ ಇಲ್ಲದೇ ಇಲ್ಲಿನ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿತ್ತು. ಜಾಗವನ್ನು ಪರಿವರ್ತಿಸಲು ಸಂಬಂಧಿಸಿದ ಕಡತಗಳನ್ನು ಈಗಾಗಲೇ ಗ್ರಾಮಾಡಳಿತ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ಆಡಳಿತ ಮಂಡಳಿಯ ಪ್ರಮುಖರು ನೀಡಿದ್ದಾರೆ.

ಸಿದ್ದಾಪುರದ ಸಂಯುಕ್ತ ಪದವಿ ಪೂರ್ವ ಕಾಲೇಜನ್ನು ಬಿಜಿಎಸ್ ವಿದ್ಯಾಸಂಸ್ಥೆಯ ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ವಹಿಸಿಕೊಂಡ ನಂತರ ಜಿಲ್ಲೆ ಮಾತ್ರವಲ್ಲ ರಾಜ್ಯ ಮಟ್ಟದಲ್ಲೇ ಉತ್ತಮ ವಿದ್ಯಾಸಂಸ್ಥೆಯಾಗಿ ರೂಪುಗೊಳ್ಳುತ್ತಿದೆ. ಇಲ್ಲಿನ ಕಾಫಿ ಬೆಳೆಗಾರರು ಮತ್ತು ಗುಹ್ಯ ಶ್ರೀ ಅಗಸ್ತ್ಯೇಶ್ವರ ಭಕ್ತ ಮಂಡಳಿಯ ಪ್ರಮುಖರಾದ ಮಂಡೇಪಂಡ ರಮೇಶ್, ಅಜ್ಜಿಕುಟ್ಟೀರ ಸಿ. ಸುಬ್ಬಯ್ಯ ಹಾಗೂ ಇತರರು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಪ್ರಮುಖ ಜವಾಬ್ದಾರಿ ವಹಿಸಿದ್ದು ಈ ವಿದ್ಯಾ ಸಂಸ್ಥೆ ಉನ್ನತ ಸ್ಥಾನಕ್ಕೇರಿಸಲು ಶ್ರಮಿಸುತ್ತಿದ್ದಾರೆ..

ಶ್ರೀ ಗುಹ್ಯ ದೇವಸ್ಥಾನ ವಿರುದ್ಧ ರಸ್ತೆಗಾಗಿ ಷಡ್ಯಂತ್ರ ರೂಪಿಸಿದ ಕೆಲ ಸದಸ್ಯರು ಶಾಲೆಯ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದು ಅಂತಹವರನ್ನು ಮುಂದಿನ ದಿನಗಳಲ್ಲಿ ದೂರ ಇಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದರು. ಅಲ್ಲದೇ ದೇವಸ್ಥಾನ ಆಡಳಿತ ಮಂಡಳಿ ಕೂಡ ಇಂತಹವರನ್ನು ದೂರ ಇಡಲು ಚಿಂತನೆ ಹರಿಸಿದೆ ಎಂದು ಮಂಡೇಪಂಡ ರಮೇಶ್ ತಿಳಿಸಿದ್ದಾರೆ. ವಿದ್ಯಾಸಂಸ್ಥೆಗೆ ಸಂಬಂಧಿಸಿದ ಕೆಲ ಜಾಗವನ್ನು ಕಾವೇರಿ ನದಿ ತೀರ ಅತಿಕ್ರಮಿಸಿಕೊಂಡವರಿಗೆ ನೀಡಬೇಕು ಎಂದು ಈ ಹಿಂದೆ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಮಾಡಲಾಗಿತ್ತು. ಸಿದ್ದಾಪುರ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದು, ವಿದ್ಯಾಸಂಸ್ಥೆಗೆ ವಿರುದ್ಧವಾಗಿ ಇಂತಹ ನಿರ್ಣಯ ಮಾಡಿರುವದರಿಂದ ಶಾಲೆಯ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸುತ್ತಿರುವ ಇಂತಹ ಸದಸ್ಯರನ್ನು ದೂರವಿಡಲು ಈಗಾಗಲೇ ಸ್ವಾಮೀಜಿಗಳ ಗಮನಕ್ಕೆ ತಂದಿರುವದಾಗಿ ಅವರು ತಿಳಿಸಿದ್ದಾರೆ.

ವಿದ್ಯಾಸಂಸ್ಥೆಗೆ ಸೇರಿದ ಮೈದಾನವನ್ನು ಕೂಡ ವಿದ್ಯಾಸಂಸ್ಥೆಯ ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಮಾತ್ರ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಯಾವದೇ ಸಾರ್ವಜನಿಕ ಚಟುವಟಿಕೆಗೆ, ಕ್ರೀಡೆಗಳಿಗೆ, ಪಂದ್ಯಾವಳಿಗೆ ಇನ್ನು ಮುಂದೆ ನೀಡುವದಿಲ್ಲ ಎಂದು ಅಜ್ಜಿಕುಟ್ಟೀರ ಸಿ.ಸುಬ್ಬಯ್ಯ, ಮಂಡೇಪಂಡ ರಮೇಶ್ ಹಾಗೂ ಪಟ್ಟಡ ಕುಶಾಲಪ್ಪ ಮತ್ತು ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ.

ಧರ್ಮ ವಿರೋಧಿಸುವವರು, ಗೌರಿ ಲಂಕೇಶ್, ಭಗವಾನ್, ಟಿಪ್ಪು ಮುಂತಾದವರನ್ನು ಬೆಂಬಲಿಸಿ ವೈಭವೀಕರಿಸುವವರು, ಗುಹ್ಯ ಅಗಸ್ತ್ಯೇಶ್ವರ ದೇವಸ್ಥಾನಕ್ಕೆ ಧಕ್ಕೆ ತಂದು ರಸ್ತೆ ನಿರ್ಮಿಸಲು ಮುಂದಾಗುವವರು ಇಲ್ಲಿ ಕ್ರಿಕೆಟ್ ಸೇರಿದಂತೆ ಇತರ ಲೀಗ್ ಪಂದ್ಯಾವಳಿಯನ್ನು ಆಯೋಜಿಸುವದಕ್ಕೆ ಮೈದಾನ ನೀಡಲಾಗುವದಿಲ್ಲ ಎಂದು ಅಜ್ಜಿಕುಟ್ಟೀರ ಸುಬ್ಬಯ್ಯ ಹಾಗೂ ಮಂಡೇಪಂಡ ರಮೇಶ್ ತಿಳಿಸಿದ್ದಾರೆ. ಮೈದಾನದಲ್ಲಿ ಕೆಲ ಪುಂಡರು ಬಂದು ಗಾಂಜಾ ಸೇವನೆ ಮಾಡುತ್ತಿರುವದು ಗಮನಕ್ಕೆ ಬಂದಿದೆ. ಪಂದ್ಯಾವಳಿ ಹೆಸರಿನಲ್ಲಿ ವೇದಿಕೆ ಕಾರ್ಯಕ್ರಮ ಆಯೋಜಿಸಿ ಪ್ರಮುಖರನ್ನು ನಿಂದಿಸುವ ಕೆಲಸವನ್ನು ಕೆಲ ಸಂಘಟನೆಗಳು ಮಾಡಿದೆ ಆದುದರಿಂದ ವಿದ್ಯಾಸಂಸ್ಥೆಯನ್ನು ಮತ್ತು ವಿದ್ಯಾಸಂಸ್ಥೆಗೆ ಸೇರಿದ ಜಾಗವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಮತ್ತು ಕೆಲ ಸಂಘಟನೆಗಳಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ವಾಮೀಜಿಗಳ ಗಮನಕ್ಕೆ ತಂದು ಆದಿಚುಂಚನಗಿರಿ ವಿದ್ಯಾಸಂಸ್ಥೆ ಗೌರವದಿಂದ ಮುನ್ನಡೆಸಲು ನೂತನ ಯೋಜನೆಗಳನ್ನು ಜಾರಿಗೆ ತರಲಾಗುವದು ಎಂದು ರಮೇಶ್, ಅಶೋಕ್ ಹಾಗೂ ಸುಬ್ಬಯ್ಯ ತಿಳಿಸಿದ್ದಾರೆ.